ಚೆನ್ನೈ: ಕಾವೇರಿ ನದಿಯ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾವೇರಿ ಕಾಲಿಂಗ್ (ಕಾವೇರಿ ಕೂಗು) ಎಂಬ ಹೆಸರಿನ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈ ಅಭಿಯಾನದ ಅಡಿಯಲ್ಲಿ ತಮಿಳುನಾಡು ಹಾಗೂ ಕರ್ನಾಟಕದ 28 ಜಿಲ್ಲೆಗಳನ್ನು ವಾಹನಗಳ ಮೇಲೆ ಪ್ರಯಾಣಿಸಲಾಗುತ್ತದೆ.
ತಮಿಳುನಾಡಿನ ವೆಲ್ಲಿಯಂಗಿರಿ ಪರ್ವತದ ತಪ್ಪಲಿನಲ್ಲಿ ಸ್ಥಾಪಿತವಾದ 112 ಅಡಿ ಎತ್ತರದ ಆದಿಯೋಗಿಯ ಸಮ್ಮುಖದಿಂದ ಈ ಅಭಿಯಾನಕ್ಕೆ ಈಶ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಚಾಲನೆ ನೀಡಿದ್ದಾರೆ. ತಮಿಳುನಾಡು ಬಿಜೆಪಿ ಪ್ರಧಾನ ಕಾರ್ಯದರ್ಶಿ ವನತಿ ಶ್ರೀನಿವಾಸನ್, ನಟಿ ರಾಧಿಕಾ ಶರತ್‌ಕುಮಾರ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಾಹನದ ರ್ಯಾಲಿಯ ಜೊತೆಗೆ ಕಾವೇರಿ ಕಾಲಿಂಗ್ ಅಭಿಯಾನದ ಅಡಿಯಲ್ಲಿ ಇತರ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಕಾವೇರಿ ನದಿಯ ದಡದಲ್ಲಿ ರೈತರು 242 ಕೋಟಿ ಸಸಿಗಳನ್ನು ನೆಡಲಿದ್ದಾರೆ. ಇನ್ನೊಂದೆಡೆ ಕಾವೇರಿ ನದಿಯ ನೀರಿನ ಮಟ್ಟವನ್ನು ಮೊದಲಿನ ಸ್ಥಿತಿಗೆ ತರುವ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ.
ಒಂದು ತಿಂಗಳವರೆಗೆ ನಡೆಯಲಿರುವ ವಾಹನದ ರ್ಯಾಲಿಯಲ್ಲಿ ಸಾವಿರಕ್ಕೂ ಹೆಚ್ಚು ರೈತರನ್ನು ಭೇಟಿ ಮಾಡುವ ಉದ್ದೇಶವಿದೆ. ರ್ಯಾಲಿ ವೇಳೆ ಗಣ್ಯ ವ್ಯಕ್ತಿಗಳ ವೀಡಿಯೋ ಸಂದೇಶಗಳು, ವೈಯಕ್ತಿಕ ಸಂವಹನ ಮತ್ತು ಮುದ್ರಿತ ಸಾಹಿತ್ಯವನ್ನೂ ರೈತರಿಗೆ ಒದಗಿಸಲಾಗುತ್ತದೆ. ರ್ಯಾಲಿ ನಡೆಸುವ ಸ್ಥಳಗಳಲ್ಲಿನ ತಾಲೂಕು ಕೇಂದ್ರ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.
ಈಶ ಫೌಂಡೇಶನ್‌ನ ಕ್ಷೇತ್ರಾಧಿಕಾರಿಗಳು ಮತ್ತು ಇತರ ಪರಿಣಿತರು ಈ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ಈ ವೇಳೆ ಕಾಡು ಬೆಳೆಸುವಲ್ಲಿ ಯತ್ನಿಸಿ ಯಶಸ್ವಿಯಾದವರ ಸಾಹಸ ಗಾಥೆಯನ್ನೂ ವಿವರಿಸಲಾಗುತ್ತದೆ. ಈ ವಾಹನ ರ್ಯಾಲಿಯ ಜೊತೆಗೆ ಸೆಪ್ಟೆಂಬರ್‌ನಲ್ಲಿ ಸದ್ಗುರು, ಕಾವೇರಿ ಉಗಮ ಸ್ಥಾನ ತಲಕಾವೇರಿಯಿಂದ ಬೈಕ್ ರ್ಯಾಲಿ ನಡೆಸಲಿದ್ದಾರೆ. ತಲಕಾವೇರಿಯಿಂದ ಪೂಂಪೂಹರದವರೆಗೆ ಬೈಕ್ ರ್ಯಾಲಿ ನಡೆಯಲಿದೆ.