“ಆಪರೇಷನ್ ಅಲಮೇಲಮ್ಮ’ ಚಿತ್ರದಲ್ಲಿ ಮನೀಶ್ ಎಂಬ ಹೊಸ ಹುಡುಗನನ್ನು ನಾಯಕರಾಗಿ ಪರಿಚಯಿಸಿರುವ ನಿರ್ದೇಶಕ ಸುನಿ ಈಗ ತಮ್ಮ “ಜಾನ್ ಸೀನ’ ಚಿತ್ರದ ಮೂಲಕ ಮತ್ತೂಬ್ಬ ಹೊಸ ನಾಯಕನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ ಅವರು ವಿದ್ಯುತ್ ಚಂದ್ರ. ಈಗಾಗಲೇ ಫೋಟೋಶೂಟ್‌ನಲ್ಲೂ ವಿದ್ಯುತ್ ಭಾಗವಹಿಸಿದ್ದು, ಹುಡುಗನ ಜೋಶ್ ನೋಡಿ ಸುನಿ ಕೂಡಾ ಖುಷಿಯಾಗಿದ್ದಾರೆ. ಅಂದಹಾಗೆ, ವಿದ್ಯುತ್‌ಗೆ “ಜಾನ್ ಸೀನ’ ಮೊದಲ ಸಿನಿಮಾ.
ಸುನಿ ನಡೆಸಿದ ಆಡಿಷನ್‌ನಲ್ಲಿ ಪಾಲ್ಗೊಂಡ ವಿದ್ಯುತ್‌ಗೆ ಸಿನಿಮಾದಲ್ಲಿ ಛಾನ್ಸ್ ಸಿಕ್ಕಿದೆ. “ಜಾನ್ ಸೀನ’ ಚಿತ್ರದ ಪಾತ್ರಕ್ಕೆ ವಿದ್ಯುತ್ ಹೊಂದಿಕೆಯಾಗುತ್ತಾರೆಂದು ಅನಿಸಿದ ಕೂಡಲೇ ಸುನಿ ಕೂಡಾ ತಮ್ಮ ಸಿನಿಮಾಕ್ಕೆ ಆಯ್ಕೆ ಮಾಡಿದ್ದಾರೆ. ಸುನಿಗೆ ಈ ಸಿನಿಮಾಕ್ಕೆ ತುಂಬಾ ಸಹಜವಾಗಿ ನಟಿಸುವ, ಯಾವುದೇ ನಟನಾ ತರಬೇತಿ ಪಡೆಯದ ಹುಡುಗನ ಅವಶ್ಯಕತೆ ಇತ್ತಂತೆ. ಅದಕ್ಕೆ ಸರಿಯಾಗಿ ವಿದ್ಯುತ್ ಚಂದ್ರ ಸಿಕ್ಕಿದ್ದಾರೆ.
ಅಂದಹಾಗೆ, ವಿದ್ಯುತ್‌ಗೆ ಇದು ಮೊದಲ ಸಿನಿಮಾ. ಸುನಿ ಸಿನಿಮಾಕ್ಕೆ ಆಡಿಷನ್ ನಡೆಯುತ್ತಿದೆ ಎಂದು ತಿಳಿದ ವಿದ್ಯುತ್ ಆಡಿಷನ್ ಕೊಟ್ಟು ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ವಿದ್ಯುತ್‌ಗೆ ಸ್ಲಂ ಬ್ಯಾಕ್‌ಡ್ರಾಪ್‌ನಲ್ಲಿರುವ ಪಾತ್ರ ಸಿಕ್ಕಿದೆಯಂತೆ. ಈ ಚಿತ್ರಕ್ಕಾಗಿ ವಿದ್ಯುತ್ ಪಾರ್ಕರ್ ಎಂಬ ಸ್ಟಂಟ್ ತರಬೇತಿ ಕೂಡಾ ಮಾಡಿದ್ದಾರೆ. ಕಟ್ಟಡದಿಂದ ಕಟ್ಟಡಕ್ಕೆ ಹಾರುವ ರಿಸ್ಕಿ ಸ್ಟಂಟ್ ಇದಾಗಿದ್ದು, ಪಾತ್ರಕ್ಕೆ ಇದು ಅಗತ್ಯವಿದೆಯಂತೆ.
ಗಣೇಶ ಹಬ್ಬ, ಕನ್ನಡ ರಾಜ್ಯೋತ್ಸವ ಸೇರಿದಂತೆ ವಿವಿಧ ಹಬ್ಬಗಳಿಗೆ ಹಣ ಕಲೆಕ್ಷನ್ ಮಾಡುವ ಹುಡುಗ ಪಾತ್ರವಂತೆ. ಇವರ ಜೊತೆ “ಸೋಡಾಬುಡ್ಡಿ’ ಚಿತ್ರದ ನಾಯಕ ಉತ್ಪಲ್ ಕೂಡಾ ನಟಿಸುತ್ತಿದ್ದಾರೆ. ಹೀಗೆ ಕಾಸು ಕಲೆಕ್ಷನ್ ಮಾಡುವ ಹುಡುಗರು ಸಮಸ್ಯೆಯೊಂದಕ್ಕೆ ಸಿಕ್ಕಿಕೊಂಡು, ಅದರಿಂದ ಹೇಗೆ ಹೊರಬರುತ್ತಾರೆಂಬುದೇ ಕಥೆಯ ಒನ್‌ಲೈನ್. ತುಂಬಾ ಮಜಾವಾಗಿ ಸಾಗುವ ಈ ಸಿನಿಮಾ ಮೂಲಕ ಲಾಂಚ್ ಆಗುತ್ತಿರುವುದರಿಂದ ವಿದ್ಯುತ್ ಖುಷಿಯಾಗಿದ್ದಾರೆ. ಚಿತ್ರದಲ್ಲಿ ಶುಭ್ರ ಅಯ್ಯಪ್ಪ ನಾಯಕಿಯಾಗಿ ನಟಿಸುತ್ತಿದ್ದಾರೆ.