ಬೆಂಗಳೂರು: ದೇಶದಲ್ಲಿ ಹೆಚ್ಚಾಗುತ್ತಿರುವ ಕ್ಯಾನ್ಸರ್ ಮಹಾಮಾರಿ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಸರ್ಕಾರ ಬೆಂಗಳೂರು ಮಹಾನಗರದಲ್ಲಿ ನ್ಯಾನೋ ಸಂಶೋಧನಾ ಕೇಂದ್ರ ಆರಂಭಿಸಬೇಕು ಎಂದು ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಸಮಿತಿ ಮುಖ್ಯಸ್ಥರಾದ ಹಿರಿಯ ವಿಜ್ಞಾನಿ ಡಾ.ಸಿ.ಎನ್.ಆರ್. ರಾವ್ ತಿಳಿಸಿದರು.
ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಭಾನುವಾರ ನಡೆದ ಕರ್ನಾಟಕ ಕ್ಯಾನ್ಸರ್ ಸೊಸೈಟಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಚಂದ್ರಯಾನ ಕೈಗೊಂಡು ದಶಕಗಳೇ ಕಳೆದಿದ್ದು, ಈಗ ಮಂಗಳಯಾನಕ್ಕೆ ಸಜ್ಜಾಗುತ್ತಿದ್ದಾನೆ. ಆದರೆ, ಪ್ರಪಂಚವನ್ನೇ ಕಾಡುತ್ತಿರುವ ಕ್ಯಾನ್ಸರ್ ಮಹಾಮಾರಿಗೆ ಕಾರಣ ಹಾಗೂ ಅದರಿಂದ ಸಂಪೂರ್ಣ ಗುಣಮುಖವಾಗಲು ಅಗತ್ಯ ಮದ್ದನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನ್ಯಾನೋ ಸಂಶೋಧನೆ ಅವಶ್ಯಕವಿದ್ದು, ರಾಜ್ಯ ಅಥವಾ ಕೇಂದ್ರ ಸರ್ಕಾರವು ಬೆಂಗಳೂರಿನಲ್ಲಿ ನ್ಯಾನೋ ಸಂಶೋಧನಾ ಕೇಂದ್ರವನ್ನು ತೆರೆಯಲು ಮುಂದಾಗಬೇಕು ಎಂದರು.
ಕ್ಯಾನ್ಸರ್ ರೋಗವು ಹೆಚ್ಚಾಗುತ್ತಲೇ ಇದ್ದು, ಅದರ ಚಿಕಿತ್ಸೆಗಾಗಿ ದೇಶ ವಿದೇಶಗಳಲ್ಲಿ ಸಹಸ್ರ ಕೋಟಿ (ಟ್ರಿಲಿಯನ್) ಹಣ ಖರ್ಚು ಮಾಡಲಾಗುತ್ತಿದೆ. ಆದರೂ, ಪ್ರತಿವರ್ಷ ಲಕ್ಷಾಂತರ ಜನ ಸಾಯುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ರೋಗವನ್ನು ಬೇಗ ಪತ್ತೆ ಹಚ್ಚುವಲ್ಲಿ ವಿಫಲವಾಗುತ್ತಿರುವುದು. ಹೀಗಾಗಿ, ಕ್ಯಾನ್ಸರ್‌ಗೆ ಕಾರಣವೇನು, ಅದನ್ನು ಬೇಗ ಪತ್ತೆಹಚ್ಚಲು ಅಗತ್ಯವಿರುವ ಅಂಶಗಳು ಯಾವುವು ಹಾಗೂ ಪೂರ್ಣ ಗುಣಮುಖರಾಗಲು ನಿಖರ ಚಿಕಿತ್ಸೆ ಏನು ಎಂಬುದನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಅಲ್ಲದೇ, ಇಂತಹ ಸಂಶೋಧನೆಗಳಿಗೆ ನೆರವು ಹಾಗೂ ಪ್ರೋತ್ಸಾಹದ ಅವಶ್ಯಕತೆ ಇದೆ. ಸಂಶೋಧನೆಗೆ ಹೆಚ್ಚಿನ ನೆರವು ನೀಡುವ ನಿಟ್ಟಿನಲ್ಲಿ ಅಮೆರಿಕ ಸೇರಿದಂತೆ ಕೆಲ ದೇಶಗಳು ಅಗತ್ಯ ಕ್ರಮ ಕೈಗೊಂಡು ಯಶಸ್ಸನ್ನು ಕಾಣುತ್ತಿವೆ ಎಂದು ತಿಳಿಸಿದರು.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಯಾವುದೇ ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಆ ರೋಗ ಬಾರದಂತೆ ಎಚ್ಚೆತ್ತುಕೊಳ್ಳುವುದು ಮುಖ್ಯ. ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಮುನ್ನೆಚ್ಚರಿಕೆ ಹಾಗೂ ಆರಂಭದಲ್ಲೇ ಪತ್ತೆ ಹಚ್ಚುವ ಅಗತ್ಯವಿದೆ. 50 ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕ್ಯಾನ್ಸರ್ ರೋಗಿಗಳ ಸೇವೆ ಮಾಡಿಕೊಂಡು ಬಂದಿರುವ ಕ್ಯಾನ್ಸರ್ ಸೊಸೈಟಿಯ ಕಾರ್ಯ ಶ್ಲಾಘನೀಯ . ವೈಯಕ್ತಿಕವಾಗಿ ಕ್ಯಾನ್ಸರ್ ಸೊಸೈಟಿಗೆ 5 ಲಕ್ಷ ರೂ. ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿಯೂ ಅಗತ್ಯ ನೆರವನ್ನು ನೀಡುತ್ತೇನೆ ಎಂದರು.
ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಮಹಿಳೆಯರಲ್ಲಿ ಗರ್ಭಕೋಶ ಹಾಗೂ ಸ್ತನ ಕ್ಯಾನ್ಸರ್ ಹೆಚ್ಚಾಗುತ್ತಿದೆ ಎಂದು ವರದಿಗಳು ಹೇಳುತ್ತಿವೆ. ರೋಗವನ್ನು ತಡೆಗಟ್ಟುಲು ಶೀಘ್ರ ರೋಗ ಪತ್ತೆ ಅವಶ್ಯಕವಾಗಿದೆ. ಆ ನಿಟ್ಟಿನಲ್ಲಿ ಅನುಕೂಲವಾಗಲು ಅನಂತ್‌ಕುಮಾರ್ ಅವರ ಹೆಸರಲ್ಲಿ ಅದಮ್ಯ ಚೇತನ ವತಿಯಿಂದ ಆರಂಭಿಸುತ್ತಿರುವ ಎರಡು ಜನೌಷಧ ಕೇಂದ್ರದಲ್ಲಿ ಮಹಿಳೆಯರ ಕ್ಯಾನ್ಸರ್ ಪತ್ತೆ ಪರೀಕ್ಷೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಜತೆಗೆ ಇಲ್ಲಿ ಕ್ಯಾನ್ಸರ್ ಸಂಬಂಧಿಸಿದ ಔಷಧಗಳ ಲಭ್ಯತೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು. ಈ ವೇಳೆ ಕರ್ನಾಟಕ ಕ್ಯಾನ್ಸರ್ ಸೊಸೈಟಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಕರ್ನಾಟಕ ಕ್ಯಾನ್ಸರ್ ಸೊಸೈಟಿ ಅಧ್ಯಕ್ಷ ಡಾ.ಸಿಕೆಎಎನ್ ಶಾಸ್ತ್ರಿ, ವೈದ್ಯೆ ಡಾ. ವಿಜಯಲಕ್ಷ್ಮೀ ದೇಶಮಾನೆ, ಡಾ.ಕೆ.ಬಿ.ಲಿಂಗೇಗೌಡ ಉಪಸ್ಥಿತರಿದ್ದರು.