Advertisement

ಜಿಲ್ಲಾದ್ಯಂತ ಪೋಲಿಯೋ ಅಭಿಯಾನಕ್ಕೆ ಚಾಲನೆ

09:55 PM Jan 19, 2020 | Team Udayavani |

ಮೈಸೂರು: ನಗರದಲ್ಲಿ ಪೋಲಿಯೋ ರಾಷ್ಟ್ರೀಯ ಅಭಿಯಾನಕ್ಕೆ ಶಾಸಕ ಎಸ್‌.ಎ.ರಾಮದಾಸ್‌ ಚಾಲನೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಮಕ್ಕಳ ಸದೃಢತೆ ಮತ್ತು ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಭಾನುವಾರ ಜಯನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಪೋಲೀಯೋ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ದೇಶಾದ್ಯಂತ ಕ್ರಾಂತಿಕಾರಿ ಹೆಜ್ಜೆಯಾದ ಪಲ್ಸ್ ಪೋಲಿಯೊ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಹುಟ್ಟುವಂತ ಮಕ್ಕಳ ಆರೋಗ್ಯ ಕಾಪಾಡಲು ಪೋಲಿಯೋ ಲಸಿಕೆ ಸಹಕಾರಿಯಾಗಿದೆ ಎಂದರು.

Advertisement

ಮಕ್ಕಳ ಆರೋಗ್ಯ ಕಾಪಾಡಲು ಲಸಿಕೆ ಹಾಕಿಸಿ: ದಿವಂಗತ ಅಟಲ್‌ ಬಿಹಾರಿ ವಾಜಪೇಯಿರವರು ಪ್ರಧಾನ ಮಂತ್ರಿಯಾಗಿದ್ದ ವೇಳೆ ದೇಶಾದ್ಯಂತ ಪಲ್ಸ್ ಪೋಲಿಯೋ ಲಸಿಕೆಯನ್ನು ಆಂದೋಲನವನ್ನಾಗಿ ಪ್ರಾರಂಭಿಸಿ ಇಂದು ಶೇ.99 ಯಶಸ್ವಿಯಾಗಿದೆ. ಈಗ ಹುಟ್ಟುವಂತಹ ಮಕ್ಕಳಿಗೆ ಪೋಲಿಯೋ ಸಮಸ್ಯೆಗಳು ಉದ್ಭವಾಗದ ರೀತಿಯಲ್ಲಿ ಪೋಲಿಯೋ ಲಸಿಕೆ ಹಾಕಲಾಗುತ್ತಿದೆ. ದೇಶದಲ್ಲಿ ಪ್ರತಿನಿತ್ಯ ಸರಿ ಸುಮಾರು 40 ರಿಂದ 50 ಸಾವಿರ ಮಕ್ಕಳು ಜನಿಸುತ್ತಿದ್ದು, ಆ ಮಕ್ಕಳ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಹೆಚ್ಚಿನ ರೀತಿಯಲ್ಲಿ ಅಭಿಯಾನವನ್ನು ನಡೆಸಬೇಕಿದೆ ಎಂದರು.

72 ಸಾವಿರ ಮಕ್ಕಳಿಗೆ ಲಸಿಕೆ ಗುರಿ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ ಮಾತನಾಡಿ, ಲಸಿಕಾ ಕಾರ್ಯ ಕ್ರಮಕ್ಕಾಗಿ 338 ಮೇಲ್ವಿಚಾರಕರು ಹಾಗೂ 6,484 ವ್ಯಾಕ್ಸಿನೇಟರ್‌ಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ 742 ಪ್ರದೇಶಗಳನ್ನು ಹೈರಿಸ್ಕ್ ಏರಿಯಾ ಎಂದು ಗುರುತಿಸಿದ್ದು, ಈ ಪ್ರದೇಶಗಳಲ್ಲಿ 72 ಸಾವಿರ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಲಸಿಕೆಯ ಮಹತ್ವ ತಿಳಿಸಿ ಜಾಗೃತಿ ಮೂಡಿಸಿ: ಮೈಸೂರು ಮಹಾನಗರ ಪಾಲಿಕೆ ನೂತನ ಮೇಯರ್‌ ತಸ್ನೀಂ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸುದರ ಜೊತೆಗೆ ಅಕ್ಕಪಕ್ಕದ ಜನರಿಗೂ ಪೋಲಿಯೊ ಲಸಿಕೆಯ ಮಹತ್ವ ತಿಳಿಸಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಅಂಗನವಾಡಿ ಕೇಂದ್ರಗಳಲ್ಲೂ ಲಸಿಕೆ: ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದ ಪ್ರಯುಕ್ತ ಜಿಲ್ಲೆಯಲ್ಲಿ 5 ವರ್ಷದೊಳಗಿನ 2,43, 641 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಸಾರ್ವಜನಿಕ ಪ್ರದೇಶಗಳು, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 1,652 ಲಸಿಕಾ ಬೂತ್‌ಗಳು ಹಾಗೂ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲೂ ಲಸಿಕೆ ನೀಡಲಾಯಿತು.

ಶಾಸಕರಾದ ಜಿ.ಟಿ.ದೇವೇಗೌಡ, ಎಲ….ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್‌.ವೆಂಕಟೇಶ್‌, ಪಾಲಿಕೆ ಸದಸ್ಯೆ ಶೋಭಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಆರ್.ರಾಜು, ಪಾಲಿಕೆ ಆರೋಗ್ಯಾಧಿಕಾರಿ ಜಯಂತ್‌, ಆರ್‌ಸಿಎಚ್‌ಒ ಡಾ.ರವಿ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ ಸೇರಿದಂತೆ ಆಸ್ಪತ್ರೆಯ ಕಮಿಟಿ ಸದಸ್ಯರಾದ ಶಾಂತವೀರಪ್ಪ, ಸುಜಾತ ರಾಮಪ್ರಸಾದ್‌ ಇದ್ದರು.

Advertisement

ಇಂದಿನಿಂದ ಮನೆ ಮನೆ ಭೇಟಿ: ಪೋಲಿಯೋ ವಂಚಿತ ಮಕ್ಕಳಿಗೆ ಪೋಲಿಯೋ ಹನಿ ಹಾಕಲು ಜ.20 ರಿಂದ ಮೂರು ದಿನ ಮನೆ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಲಸಿಕಾ ವಂಚಿತ ಮಕ್ಕಳಿಗಾಗಿ ಮೈಸೂರು ನಗರದಲ್ಲಿ ಜ.20ರಿಂದ 23ರವರೆಗೆ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಜ.20 ರಿಂದ 22ರವರೆಗೆ ನರ್ಸ್‌ಗಳು ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next