ಮೈಸೂರು: ಕಲೆ, ಸಾಹಿತ್ಯ ಸಂಸ್ಕೃತಿ, ಜನಪದ ಉಳಿಯಬೇಕಾದರೆ ಕಲಾವಿದರನ್ನು ಪ್ರೋತ್ಸಾಹಿಸಬೇಕಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಹೇಳಿದರು. ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲಾವಿದರು ನಾಡಿನ ಸಂಸ್ಕೃತಿಯ ವಾರಸುದಾರರು. ಅವರಿಗೆ ಪ್ರೋತ್ಸಾಹಿಸಲು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬೇಕಿದೆ ಎಂದರು.
ಚಲನಚಿತ್ರ ಕಲಾವಿದರು ಆಡಳಿತಾತ್ಮಕ ತೊಂದರೆ ಅನುಭವಿಸುತ್ತಿದ್ದು, ಚಿತ್ರೀಕರಣ ವೇಳೆ ಸಿಂಗಲ್ ವಿಂಡೋ ಆದರೂ, ಎಲ್ಲಾ ಇಲಾಖೆಗಳ ಅನುಮತಿ ಪಡೆಯಬೇಕಿದೆ. ಇದರಿಂದ ಸಂಕಷ್ಟ ಇದೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಮಂತ್ರಿ ಹಾಗೂ ಮುಖ್ಯಮಂತ್ರಿ ಜೊತೆ ಮಾತನಾಡಿ, ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗುವುದು ಎಂದರು.
ಚಿತ್ರನಟ ನವರಸ ನಾಯಕ ಜಗ್ಗೇಶ್ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೈಸೂರು ಹೆಸರುವಾಸಿಯಾಗಿದ್ದು, ಮೈಸೂರು ಅರಸರು ಕಲೆಗೆ ಹೆಚ್ಚು ಆದ್ಯತೆ ನೀಡಿದ್ದರು ಎಂದು ಸ್ಮರಿಸಿದರು. ಒಬ್ಬ ನಿರ್ಮಾಪಕ ಕಷ್ಟ ಪಟ್ಟು ಒಂದು ಸಿನಿಮಾ ಮಾಡಿದರೇ ಅದನ್ನ ಚಿತ್ರಮಂದಿರಕ್ಕೆ ಹೋಗಿ ನೋಡಿ. ನಿಮ್ಮನ್ನ ನಂಬಿ ಅವರು ಬಂಡವಾಳ ಹೂಡಿರುತ್ತಾರೆ. ಯಾರೋ ಕಳ್ಳರು ಸಿನಿಮಾವನ್ನು ಪೈರಸಿ ಮಾಡುತ್ತಿದ್ದಾರೆ.
ಮೊಬೈಲ್‌ನಲ್ಲಿ ಬರುವ ಸಿನಿಮಾವನ್ನು ಯಾರೂ ನೋಡಬೇಡಿ. ಇದು ಕೊಲೆಗೆ ಸಮನಾದ ಕೆಲಸ. ದಯಮಾಡಿ ಚಿತ್ರಮಂದಿರಕ್ಕೆ ಹೋಗಿ ನೋಡಿ ಕಲಾವಿದರನ್ನ ಪ್ರೋತ್ಸಾಹಿಸಿ ಎಂದರು. ಬಿ.ಎಸ್. ಯಡಿಯೂರಪ್ಪನವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಕಲಾವಿದರಿಗೆ ಆಸರೆಯಾಗಿದ್ದರು. ಜೊತೆಗೆ ಕಲಾವಿದರ ಕಟ್ಟಡ ನಿರ್ಮಾಣಕ್ಕೆ 5 ಕೋಟಿ ಬಿಡುಗಡೆ ಮಾಡಿದ್ದರು. ಅವರು ಕಲಾ ಪೋಷಕರೂ ಹೌದು, ಕಲಾ ಪ್ರೇಮಿಯೂ ಹೌದು. ಹಾಗಾಗಿಯೇ ಅವರು ವಾರಕ್ಕೆ ಎರಡು ಸಿನಿಮಾ ನೋಡುತ್ತಾರೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಕೃಷ್ಣ ಮಾದೇಗೌಡ, ಕೌರವ ವೆಂಕಟೇಶ್, ಉಮೇಶ್ ಬಣಕಾರ್, ಚಲನಚಿತ್ರ ನಿರ್ಮಾಪಕಿ ವಿಜಯಲಕ್ಷ್ಮೀ ಸಿಂಗ್, ಚಲನಚಿತ್ರ ಕಲಾವಿದೆ ಆಶಿಕಾ ರಂಗನಾಥ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಎಲ್ ನಾಗೇಂದ್ರ, ಬಿಜೆಪಿ ಮುಖಂಡ ಕೋಟೆ ಎಂ. ಶಿವಣ್ಣ, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಂ, ನಿರ್ದೇಶಕ ನಾಗಣ್ಣ, ಚಲನಚಿತ್ರ ಕಲಾವಿದರಾದ ಆಶಿಕಾ ರಂಗನಾಥ್, ಶುಭಾ ರಕ್ಷಾ, ಸಂಚಿತ ಪಡುಕೋಣೆ, ಧನುಶ್ ಗೌಡ, ಹರ್ಷಿತಾ ಗೌಡ ಇತರರಿದ್ದರು.