Advertisement

ಎಂಟು ವರ್ಷದಿಂದ ರೈತರ ನಗು ಮಾಯ!

12:26 PM Jul 24, 2017 | |

ದಾವಣಗೆರೆ: ನಮ್ಮ ದೇಶದ ಕೃಷಿ ಅಂದರೆ ಮಾನ್ಸೂನ್‌ನೊಂದಿಗಿನ ಜೂಜಾಟ ಎಂಬುದಾಗಿ ಬಹು ಹಳೆಯ ಕಾಲದಿಂದಲೂ ಚಾಲ್ತಿಯಲ್ಲಿರುವ ನಾಣ್ಣುಡಿ. ಈಗಲೂ ಸಹ ಅದು ಬಳಕೆಯಲ್ಲಿದೆ. ಇದಕ್ಕೆ ಕಾರಣ, ಮಾನ್ಸೂನ್‌ನಿಂದ ಸುರಿಯುವ ಮಳೆಯಿಂದಲೇ ಕೃಷಿಯ ಬಹುಪಾಲು ಯಶಸ್ಸು ಆಧರಿಸಿದೆ.

Advertisement

ಜಿಲ್ಲೆಯಲ್ಲಿ ಸತತ ಮೂರು ವರ್ಷಗಳಿಂದ ನಿರೀಕ್ಷಿತ ಮಳೆಯಾಗದೇ ರೈತನ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ರೈತ ತಾನು ಮಾತ್ರವಲ್ಲ, ತನ್ನ ಕುಟುಂಬದ ಮಂದಿ, ಜಾನುವಾರು ಸಾಕುವುದು ದುಸ್ತರ ಎಂಬಂತಹ ಸ್ಥಿತಿ ನಿರ್ಮಾಣ ಆಗಿದೆ. ಹಿಂದೆ ಕೇಳುತ್ತಿದ್ದ ಭೀಕರ ಬರಗಾಲದಂತಹ
ದಿನಗಳು ಮತ್ತೆ ಎದುರಾಗಿವೆ. 2014ರಿಂದ ಆರಂಭವಾದ ಮಳೆಯ ಕಣ್ಣಾ ಮುಚ್ಚಾಲೆ, ಇದೀಗ ಅನೇಕ ಗಂಭೀರ ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಿದೆ.

ಈ ಹಿಂದೆ ಮುಂಗಾರು ಮಳೆ ಕೈಕೊಟ್ಟಾಗಲೆಲ್ಲಾ ಹಿಂಗಾರು ಒಂದಿಷ್ಟು ನೆರವಿಗೆ ಬರುತ್ತಿತ್ತು. ಹಾಗಾಗಿ ಜಿಲ್ಲೆಯ ರೈತರು ಹೇಗೋ ಬದುಕು ಸಾಗಿಸುತ್ತಿದ್ದರು. ಆದರೆ, ಕಳೆದ 3 ವರ್ಷದಲ್ಲಿ ಬಹುತೇಕ ಎರಡೂ ಬೆಳೆ ಕೈಗೆ ಸಿಕ್ಕಿಲ್ಲ. ಈ ಬಾರಿಯ ಮಳೆ ಪ್ರಮಾಣ ನೋಡಿದರೆ ಬೆಳೆ ಇರಲಿ,
ಜನ ಜಾನುವಾರುಗಳ ಕುಡಿಯುವ ನೀರಿಗೆ ಹೇಗೆ ಎಂಬ ಆತಂಕ ಎದುರಾಗಿದೆ. ಮಳೆಯ ಪರಿಣಾಮ ಬರೀ ಫಸಲು ಮಾತ್ರವಲ್ಲ, ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಗೂ ಕಾರಣವಾಗಿದೆ. ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಕುಸಿತ ಕಂಡಿದೆ. ಕೆಲವೆಡೆ 800-1000 ಅಡಿ ಆಳ ಕೊರೆದರೂ
ನೀರಿನ ಸೆಲೆ ಸಿಗುತ್ತಿಲ್ಲ. ಇನ್ನು ಕೆರೆ ಕಟ್ಟೆಗಳಲ್ಲಿ ನೀರು ನಿಲ್ಲುತ್ತಿತ್ತು ಎಂಬುದರ ಕುರುಹು ಸಹ ಸಿಗದಂತೆ ಆಗಿದೆ. ಇನ್ನು ಹತ್ತಾರು ವರ್ಷಗಳಿಂದ ನೀರು ನೀಡುತ್ತಿದ್ದ ಕೊಳವೆ ಬಾವಿಗಳು ಸ್ವತಃ ಬಾಯಾರಿಕೆಯಿಂದ ಬಳಲುತ್ತಿವೆ. ಜಿಲ್ಲೆಯ ಮಳೆ ಪ್ರಮಾಣ ಬಹುತೇಕ ಇಳಿಮುಖವಾಗುತ್ತಲೇ ಇದೆ. 2009ರಿಂದ ಲಭ್ಯ ಇರುವ ಪ್ರಮಾಣದಲ್ಲಿ ಏರಿಳಿತ ಇದ್ದೇ ಇದೆ. ಜಿಲ್ಲೆಯಲ್ಲಿ ವಾಡಿಕೆಯಂತೆ 658.1 ಮಿಮೀ. ಮಳೆಯಾಗುತ್ತದೆ. ಇದರಲ್ಲಿ ಮುಂಗಾರು ಪೂರ್ವ ಅಂದರೆ ಜನವರಿ, ಫೆಬ್ರವರಿ, ಮಾರ್ಚ್‌ ಸೇರಿ 8.2 ಮಿಮೀ ಮಳೆಯಾಗುತ್ತದೆ. ಏಪ್ರಿಲ್‌ನಿಂದ ಸೆಪ್ಟಂಬರ್‌ ವರೆಗೆ 485.7 ಮಿಮೀ ಮಳೆ ಸುರಿಯುತ್ತದೆ. ಇನ್ನು ಹಿಂಗಾರು ಹಂಗಾಮಿನಿ ಅಕ್ಟೋಬರ್‌ ನಿಂದ ಡಿಸೆಂಬರ್‌ವರೆಗೆ 164.2 ಮಿಮೀ ವಾಡಿಕೆ ಮಳೆ ಆಗುತ್ತದೆ. 2009ರಿಂದ
ಈವರೆಗೆ ಈ ವಾಡಿಕೆ ಮಳೆ ಸುರಿದಿಲ್ಲ. 2012ರಿಂದ ಬಂದೇ ಇಲ್ಲ ಎನ್ನಬಹುದು. ಬಂದರೂ ಸಹ ಅಕಾಲಿಕವಾಗಿ ಸುರಿದಿದೆ. ಅಗತ್ಯ ಇಲ್ಲದ ಸಂದರ್ಭದಲ್ಲಿ ಮಳೆ ಸುರಿದಿದೆ. 2009ರಿಂದ ಈವರೆಗೆ ಸುರಿದ ಮುಂಗಾರು ಪೂರ್ವ, ಮುಂಗಾರು, ಹಿಂಗಾರು ಮಳೆ ಪ್ರಮಾಣವನ್ನು
ಗಮನಿಸಿದಾಗ ಈ ಅಂಶ ತಿಳಿದುಬರುತ್ತದೆ. ಎಂಟು ವರ್ಷ (2009-2016)ಗಳಲ್ಲಿ ಮಳೆಯ ಏರು ಪೇರು ಗಮನಿಸಿದಾಗ 2012ರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದು ಕಂಡು ಬರಲಿದೆ. 

ಮುಂಗಾರು ಪೂರ್ವ, ಮುಂಗಾರು ಮಳೆ ಉತ್ತಮವಾಗಿ ಸುರಿದಲ್ಲಿ ಮಾತ್ರ ರೈತರಿಗೆ ಫಸಲು ಸಿಗಲಿದೆ. 2012ರಲ್ಲಿ ಮುಂಗಾರು ಮಳೆ ಪ್ರಮಾಣ ವಾಡಿಕೆಗಿಂತ 121.9 ಮಿಮೀ ಕಡಮೆ ಆಗಿದೆ. ಇನ್ನು 2013ರಲ್ಲಿ ಉತ್ತಮ ಮಳೆ ಆಗಿದೆಯಾದರೂ ಅಕಾಲಿಕವಾಗಿ ಸುರಿದಿದೆ. ಬೆಳೆ ಕಟಾವಿನ
ಸಂದರ್ಭದಲ್ಲಿ ಮಳೆ ಸುರಿದಿದೆ. 2014ರಲ್ಲಿ ಮತ್ತದೇ ಅಕಾಲಿಕ ಮಳೆ ಆಗಿದೆ. ಬೆಳೆ ಕಟಾವಿನ ಮತ್ತು ಹಿಂಗಾರಿನ ಹೊಸ್ತಿಲಲ್ಲಿ ಹೆಚ್ಚಿನ ಮಳೆ ಸುರಿದಿದೆ. ಇದರಿಂದ ಒಂದು ಕಡೆ ಮುಂಗಾರು ಬೆಳೆ ಸಂಪೂರ್ಣ ಕೈಗೆ ಸಿಗದೇ ಹೋದರೆ, ಇನ್ನೊಂದು ಕಡೆ ಹಿಂಗಾರಿನ ಉಳುಮೆಗೆ ಅಡ್ಡಿ ಒಡ್ಡಿದೆ. ಇನ್ನು
2015 ಮತ್ತು 2016ರಲ್ಲಿ ಚದುರಿದಂತೆ ಮಳೆಯಾಗಿ, ಬೆಳೆ ಕೈಗೆ ಸಿಕ್ಕಿಲ್ಲ. 

ಈ ವರ್ಷದ ಮುಂಗಾರು ಮಳೆ ತೀರಾ ವಿಳಂಬವಾಗಿದೆ. ಜುಲೈ ಮಧ್ಯದ ವರೆಗೂ ಜಿಲ್ಲೆಯಲ್ಲಿ ಗಟ್ಟಿ ಮಳೆ ಸುರಿದಿಲ್ಲ. ಬಹುಪಾಲು ಪ್ರದೇಶಗಳಲ್ಲಿ ಉಳುಮೆ ಮಾಡುವಮ ಉತ್ತಮ ಮಳೆಯಾಗಿಲ್ಲ. ಇಡೀ ಭೂಮಿಯ ಮೇಲೆ ಹಚ್ಚ ಹಸುರಿನ ಹೊದಿಕೆ ಹೊದಿಸಿದಂತೆ ಇರಬೇಕಾಗಿದ್ದ ಜುಲೈ ಮಾಹೆಯಲ್ಲಿ ಈಗಲೂ ಬರಡಾಗಿಯೇ ಕಾಣುತ್ತಿದೆ. ಜುಲೈ ಆರಂಭಕ್ಕೆ 207 ಮಿಮೀ ಮಳೆಯಾಗುವುದು ವಾಡಿಕೆ.  ಆದರೆ, ಈವರೆಗೆ ಸುರಿದ ಮುಂಗಾರು ಪೂರ್ವ, ಮಾನ್ಸೂನ್‌ ಮಳೆ ಸೇರಿ 142.4 ಮಿಮೀ ಆಗಿದೆ. ಅದೂ ಸಹ ಚದುರಿದಂತೆ ಜಿಟಿ ಮಳೆಯೇ ಹೆಚ್ಚಾಗಿದೆ. ಬಹುತೇಕ
ವಾಡಿಕೆ ಮುಂಗಾರು ಬೆಳೆಗಳಾದ ಎಳ್ಳು, ಹೆಸರು, ರಾಗಿ, ಜೋಳ ಬಿತ್ತನೆಗೆ ಇನ್ನು ಅವಕಾಶವೇ ಇಲ್ಲವಾಗಿದೆ. ಮುಂದೆ ಮಳೆಯಾದರೆ ಸೂರ್ಯಕಾಂತಿ, ಶೇಂಗಾ, ರಾಗಿ ಮುಂತಾದ ಕಡಮೆ ಅವಧಿಯ ಬೆಳೆ ಬೆಳೆಯುವುದು ಅನಿವಾರ್ಯ.

Advertisement

ಬಿತ್ತನೆ ಕಾರ್ಯ ಇದೀಗ ಚುರುಕು.. 
ಕಳೆದ ವಾರದಲ್ಲಿ ಒಂದಿಷ್ಟು ಸುರಿದ ಮಳೆಯಿಂದಾಗಿ ಕೃಷಿ ಚಟುವಟಿಕೆಯಲ್ಲಿ ಇದೀಗ ಚುರುಕು ಕಾಣುತ್ತಿದೆ. ಜಿಲ್ಲೆಯಲ್ಲಿ 3.40 ಲಕ್ಷ ಹೆಕ್ಟೇರ್‌ ಪ್ರದೇಶ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಜು.18ರ ಅಂತ್ಯಕ್ಕೆ ಕೇವಲ 1,01,599 ಹೆಕ್ಟೇರ್‌  ಬಿತ್ತನೆ ಆಗಿದೆ. ಅಂದರೆ ಗುರಿಯ ಶೇ.30ರಷ್ಟು ಮಾತ್ರ ಬಿತ್ತನೆ ಆಗಿದ್ದು, ಅದೂ ಸಹ ಹೆಚ್ಚು ಪ್ರಮಾಣದಲ್ಲಿ ಬಿತ್ತನೆ ಆಗಿರುವುದು ಮೆಕ್ಕೆಜೋಳವೇ. ಕೃಷಿ ಇಲಾಖೆ ಮಾಹಿತಿ ಪ್ರಕಾರ ಈಗಾಗಲೇ ಜಿಲ್ಲೆಯಲ್ಲಿ 1,51,512 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಇನ್ನೆರಡು ದಿನಗಳಲ್ಲಿ 2.65 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆಯಂತೆ

ಕೃಷಿ ಭೂಮಿ-ರೈತರು
ಜಿಲ್ಲೆಯಲ್ಲಿ ಒಟ್ಟು 5,97,597 ಹೆಕ್ಟೇರ್‌ ಭೂ ಪ್ರದೇಶ ಇದೆ. ಇದರಲ್ಲಿ 4,26,658 ಹೆಕ್ಟೇರ್‌ ಸಾಗುವಳಿಗೆ ಲಭ್ಯ ಇದೆ. ಮುಂಗಾರು ಹಂಗಾಮಿಗೆ 3,40,000 ಹೆಕ್ಟೇರ್‌ ಪ್ರದೇಶ ಬಿತ್ತನೆಗೆ ಸಿಕ್ಕತೆ, ಹಿಂಗಾರು ಹಂಗಾಮಿಗೆ 27,100 ಹೆಕ್ಟೇರ್‌, ಬೇಸಿಗೆ ಹಂಗಾಮಿಗೆ 62,000 ಹೆಕ್ಟೇರ್‌ ಪ್ರದೇಶ ಲಭ್ಯವಿದೆ. ಒಟ್ಟು ಪ್ರದೇಶದ ಶೇ.16ರಷ್ಟು ಅಂದರೆ 72,235 ಹೆಕ್ಟೇರ್‌ ಪ್ರದೇಶ ಭದ್ರಾ ಕಾಲುವೆ, ಬೋರ್‌ವೆಲ್‌ನಿಂದ ನೀರಾವರಿ ಕೃಷಿ ಪ್ರದೇಶವಾಗಿದೆ. ಜಿಲ್ಲೆಯಲ್ಲಿ ಒಟ್ಟು 2,65,239 ರೈತರು ಇದ್ದಾರೆ. ಈ ಪೈಕಿ ಸಣ್ಣ, ಅತಿ ಸಣ್ಣ ರೈತರು, ಹಿಡುವಳಿದಾರರ ಪ್ರಮಾಣ ಶೇ.75.67ರಷ್ಟು ಅಂದರೆ 2,00,720 ಇದ್ದಾರೆ. ದೊಡ್ಡ ರೈತರ ಪ್ರಮಾಣ 64,519(ಶೇ.24.33) ಇದೆ. 

Advertisement

Udayavani is now on Telegram. Click here to join our channel and stay updated with the latest news.

Next