ಕನ್ನಡ ನಾಡಲ್ಲಿ ಹುಟ್ಟಿ, ಬೆಳೆದು ಕನ್ನಡ ಭಾಷೆ ಮಾತಾಡಲು ಹಿಂಜರಿಯುವ ಜನರಿರುವ ಇಂತಹ ಸಂದರ್ಭದಲ್ಲಿ ಕನ್ನಡವೇ ನನ್ನುಸಿರು, ಕನ್ನಡವೇ ನನ್ನ ಜೀವನ ಎಂದುಕೊಂಡು ಸುಮಧುರವಾಗಿ ಕನ್ನಡದ ಹಾಡುಗಳನ್ನು ಹಾಡುತ್ತಾ ಜೀವನ ಸಾಗಿಸುವ ಹಿಮಾಚಲ ಪ್ರದೇಶದ ಅಪರೂಪದ ವ್ಯಕ್ತಿ ಹಾವೇರಿ ಜಿಲ್ಲೆಯಲ್ಲಿದ್ದಾರೆ.
ಉತ್ತರ ಭಾರತದಿಂದ ಬಂದು ಕನ್ನಡ ಕಲಿತು, ಕನ್ನಡಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟಿರುವ ಇಂಥ ಅಪರೂಪದ ವ್ಯಕ್ತಿಯ ಹೆಸರು ಕೃಷ್ಣ ಉತ್ತಮಸಿಂಗ್ ಗುರ್ಖಾ. ಕನ್ನಡದ ಹಳೆಯ ಚಲನಚಿತ್ರ ಗೀತೆಗಳು, ದೇಶಭಕ್ತಿ ಗೀತೆಗಳು, ಜಾನಪದ ಗೀತೆ, ದಾಸರವಾಣಿ, ವಚನಗಳು, ಭಕ್ತಿಗೀತೆಗಳನ್ನು ಗಂಡು ಹಾಗೂ ಹೆಣ್ಣು ದನಿಯಲ್ಲಿ ಸರಾಗವಾಗಿ ಹಾಡುತ್ತಾರೆ. ಕನ್ನಡ ಹಾಡುಗಳನ್ನು ಮಾತ್ರ ಹಾಡುವುದು ಇವರ ಮತ್ತೂಂದು ವಿಶೇಷ.
ಕೃಷ್ಣ ಗುರ್ಖಾ ಮೂಲತಃ ಹಿಮಾಚಲ ಪ್ರದೇಶದ ಪ್ಯಾಸಿ ಬುಡಕಟ್ಟು ಜನಾಂಗದವರಾಗಿದ್ದು, ಹುಬ್ಬಳ್ಳಿಯಲ್ಲಿ ಬಾಲ್ಯದ ಜೀವನ ಕಳೆದಿದ್ದಾರೆ. ಕನ್ನಡ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಬಾಲ್ಯದಲ್ಲೇ ಕನ್ನಡ ಹಾಡುಗಳ ಬಗ್ಗೆ ಅಪಾರ ಪ್ರೀತಿ ಬೆಳೆಸಿಕೊಂಡ ಇವರಿಗೆ ಡಾ. ರಾಜಕುಮಾರ, ಪಿ.ಬಿ. ಶ್ರೀನಿವಾಸ, ಬಿ.ಆರ್. ಛಾಯಾ, ವಾಣಿ ಜಯರಾಮ ಅವರ ಹಾಡುಗಳೆಂದರೆ ಬಲು ಇಷ್ಟ. ಅವರ ಹಾಡುಗಳನ್ನು ಕೇಳಿ ತಾವೂ ಕನ್ನಡ ಗೀತೆಗಳನ್ನು ಹಾಡುವುದನ್ನು ರೂಢಿಸಿಕೊಂಡಿದ್ದಾರೆ.
ಹುಬ್ಬಳ್ಳಿಯ ಸಿದ್ಧಾರೂಢ ಮಠ, ಸಿದ್ದಪ್ಪಜ್ಜನ ಮಠದಲ್ಲಿ ಹಾಡಲು ಪ್ರಾರಂಭಿಸಿದ ನಂತರ ರಾಣಿಬೆನ್ನೂರಿನ ಬಸವರಾಜ ಬ್ಯಾಂಡ್ ಕಂಪನಿಯಲ್ಲಿ ಹಾಡುಗಾರಿಕೆಯನ್ನು ಮುಂದುವರಿಸಿ ಅದನ್ನೇ ವೃತ್ತಿಯನ್ನಾಗಿಸಿಕೊಂಡರು. ಗೆಳೆಯ ಫಾರೂಖನ ಜತೆ ಸೇರಿ ಎಫೆ ಆರ್ಕೆಸ್ಟ್ರಾ ಶುರುಮಾಡಿದರು. 35 ವರ್ಷಗಳಿಂದ ರಾಜ್ಯದ ಮೂಲೆ ಮೂಲೆಯಲ್ಲಿ ಕನ್ನಡದ ಗೀತೆಗನ್ನು ಹಾಡುತ್ತಾ ಜೀವನ ಕಟ್ಟಿಕೊಂಡಿದ್ದಾರೆ.
– ಕೃಷ್ಣ ಗೂರ್ಖ, ಹಾವೇರಿ
* ಎಚ್.ಕೆ. ನಟರಾಜ