Advertisement

ಗಾನಕೋಗಿಲೆಯ ಗಾನಯಾನ…

09:47 PM Feb 06, 2022 | Team Udayavani |

ಹುಟ್ಟು ಮತ್ತು ಬಾಲ್ಯ
28 ಸೆಪ್ಟಂಬರ್‌ 1929 ರಂದು ಈಗಿನ ಮಧ್ಯಪ್ರದೇಶದ ಇಂದೋರ್‌ ನ ಪಂಡಿತ್‌ ದೀನನಾಥ್‌ ಮಂಗೇಶ್ಕರ್‌ (ತಂದೆ), ಸೇವಂತಿ ಮಂಗೇಶ್ಕರ್‌ (ತಾಯಿ) ದಂಪತಿಯ ಐವರು ಮಕ್ಕಳಲ್ಲಿ ಮೊದಲ ಮಗಳಾಗಿ ಲತಾ ಮಂಗೇಶ್ಕರ್‌ ಜನಿಸಿದರು. ಮೂಲತಃ ಮರಾಠಿ ಮೂಲದ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬವಾದರೂ, ಲತಾ ತಂದೆ ಪಂಡಿತ್‌ ದೀನನಾಥ್‌ ಮಂಗೇಶ್ಕರ್‌ ಶಾಸ್ತ್ರೀಯ ಸಂಗೀತಗಾರನಾಗಿ, ನಾಟಕಕಾರನಾಗಿ, ಕಲಾವಿದರಾಗಿ ಗುರುತಿಸಿ ಕೊಂಡಿದ್ದವರು. ಜತೆಗೆ ಬಲವಂತ್‌ ಸಂಗೀತ ಮಂಡಳಿ ಎಂಬ ರಂಗ ತಂಡವನ್ನೂ ದೀನನಾಥ್‌ ಮಂಗೇಶ್ಕರ್‌ ನಡೆಸುತ್ತಿದ್ದರು. ಅಲ್ಲದೆ ಮನೆಯಲ್ಲಿ ಕೂಡ ಊರಿನ ಆಸಕ್ತ ಮಕ್ಕಳಿಗೆ ಸಂಗೀತ, ನೃತ್ಯ, ನಾಟಕವನ್ನು ಹೇಳಿಕೊಡುತ್ತಿದ್ದರು. ಇದೆಲ್ಲವನ್ನೂ ಪುಟ್ಟ ಹುಡುಗಿ ಲತಾ ದೂರದಿಂದಲೇ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಬಾಲ್ಯದಿಂದಲೇ ಮನೆಯಲ್ಲಿ ಕಲೆಗೆ ಪೂರಕವಾದ ವಾತಾವರಣದ್ದಿದ್ದರಿಂದ ಲತಾಗೆ ಕೂಡ ಸಹಜವಾಗಿಯೇ ಸಂಗೀತ, ನೃತ್ಯ, ನಾಟಕ ಕಲೆಯತ್ತ ಆಸಕ್ತಿ ಮೂಡಿತು. ಒಮ್ಮೆ ಮನೆಯಲ್ಲಿ ವಿದ್ಯಾರ್ಥಿಗಳು ಸಂಗೀತಾಭ್ಯಾಸ ಮಾಡುತ್ತಿದ್ದಾಗ ತಪ್ಪುತ್ತಿದ್ದ ತಾಳವನ್ನು ಗುರುತಿಸಿದ ಲತಾ ಅದನ್ನು ತಿದ್ದಿ ಹೇಳಿಕೊಡುತ್ತಿದ್ದರು. ಇದರನ್ನು ಗಮನಿಸಿದ ಲತಾ ತಂದೆ ದೀನನಾಥ್‌ ಮಂಗೇಶ್ಕರ್‌ ವಿದ್ಯಾರ್ಥಿಗಳ ಜತೆೆ ಮಗಳಿಗೂ ಆರಂಭದಲ್ಲಿ ಮೊದಲ ಗುರುವಾಗಿ ಸಂಗೀತವನ್ನು ಕಲಿಸಿಕೊಡಲು ಶುರುಮಾಡಿದರು.

Advertisement

ಪೂರ್ಣ ಹೆಸರು: ಲತಾ ದೀನನಾಥ್‌ ಮಂಗೇಶ್ಕರ್‌ ಜನನ: 28 ಸೆಪ್ಟಂಬರ್‌ 1929 ಸ್ಥಳ: ಈಗಿನ ಮಧ್ಯಪ್ರದೇಶದ ಇಂದೋರ್‌

ಹೆತ್ತವ‌ರು: ದೀನನಾಥ್‌ ಮಂಗೇಶ್ಕರ್‌ (ತಂದೆ), ಸೇವಂತಿ ಮಂಗೇಶ್ಕರ್‌ (ತಾಯಿ) ಸೋದರಿಯರು: ಆಶಾ ಬೋಸ್ಲೆ, ಉಷಾ ಮಂಗೇಶ್ಕರ್‌, ಮೀನಾ ಮಂಗೇಶ್ಕರ್‌ ಸೋದರ: ಹೃದಯನಾಥ್‌ ಮಂಗೇಶ್ಕರ್‌

ಲತಾ ಮೊದಲ ಹೆಸರು ಹೇಮಾ..
ಅಂದಹಾಗೆ, ಲತಾ ಮಂಗೇಶ್ಕರ್‌ರ ಮೊದಲ ಹೆಸರು ಹೇಮಾ ಮಂಗೇಶ್ಕರ್‌. “ಭಾವ್‌ ಬಂಧನ್‌’ ನಾಟಕದಲ್ಲಿ ಹೇಮಾ ಅಭಿನಯಿಸಿದ ಲತಾ ಎನ್ನುವ ಪಾತ್ರದ ಅನಂತರ ಅವರ ಸ್ನೇಹಿತರು, ಸುತ್ತಮುತ್ತಲಿನವರು ಎಲ್ಲರೂ ಅವರನ್ನು ಲತಾ ಎಂದೇ ಕರೆಯಲು ಶುರು ಮಾಡಿದರು. ಮುಂದೇ ಆ ಲತಾ ಎನ್ನುವ ಹೆಸರೇ ಲತಾ ಮಂಗೇಶ್ಕರ್‌ ಆಯಿತು.

ಔಪಚಾರಿಕ ಶಿಕ್ಷಣ ಪಡೆಯಲಿಲ್ಲ
ಲತಾ ಮಂಗೇಶ್ಕರ್‌ ಶಾಲೆಯಲ್ಲಿ ಶಿಕ್ಷಣ ಪಡೆದವರಲ್ಲ. ಅವರೇ ಹೇಳಿರುವಂತೆ, ಒಮ್ಮೆ ಸೋದರಿ ಆಶಾ ಜತೆಗೆ ಶಾಲೆಗೆ ಹೋದಾಗ ಪಾಠ ಮಾಡುತ್ತಿದ್ದ ಶಿಕ್ಷಕರು ಜೋರಾಗಿ ಗದರಿಸಿದ್ದರಂತೆ. ಅದಾದ ಅನಂತರ ಮತ್ತೆ ಯಾವತ್ತೂ ಶಾಲೆಯ ಕಡೆಗೆ ಮುಖ ಮಾಡಲೇ ಇಲ್ಲವಂತೆ. ಬಳಿಕ ಸಣ್ಣ-ಪುಟ್ಟ ನಾಟಕಗಳಲ್ಲಿ ಅಭಿನಯಿಸುತ್ತ ಕಲಾ ಜೀವನ ಶುರು ಮಾಡಿದ ಲತಾ, ನಿಧಾನವಾಗಿ ಅಲ್ಲೇ ಗುರುತಿಸಿಕೊಂಡರು.

Advertisement

ನಮ್ಮನ್ನು ಅಳಿಸಿಬಿಟ್ಟೆ ಎಂದಿದ್ದರು ನೆಹರು
ಚೀನ ಮತ್ತು ಭಾರತದ ಯುದ್ದದಲ್ಲಿ ಭಾರತದ ಅನೇಕ ಸೈನಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಇವರ ನೆನಪಿನಲ್ಲಿ ಪ್ರದೀಪ್‌ ಎನ್ನುವ ಕವಿ “ಏ ಮೇರೆ ವತನ್‌ ಕೇ ಲೋಗೋಂ, ಜರಾ ಆಂಖ್‌ ಭರಲೋ ಪಾನಿ..’ ಎಂಬ ಗೀತೆಯನ್ನು ರಚಿಸಿದ್ದರು. ಸಿ. ರಾಮಚಂದ್ರ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಗೀತೆಯನ್ನು 1973ರ ಜನವರಿ 26ರಂದು ಹೊಸದಿಲ್ಲಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಲತಾ ಮಂಗೇಶ್ಕರ್‌ ಸುಶ್ರಾವ್ಯವಾಗಿ ಹಾಡಿದ್ದರು. ಈ ಗೀತೆಯನ್ನು ಕೇಳಿದ ಅಂದಿನ ಪ್ರಧಾನಿ ಜವಹರಲಾಲ ನೆಹರು ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಲತಾ ಹತ್ತಿರ ಬಂದ ನೆಹರು, ನೀನು ನಮ್ಮನ್ನು ಅಳಿಸಿಬಿಟ್ಟೆ’ ಎಂದು ಭಾವುಕರಾಗಿ ನುಡಿದಿದ್ದರು. ಅದಾದ ಬಳಿಕ ಈ ಹಾಡು ಪ್ರತೀ ವರ್ಷ ಗಣರಾಜ್ಯೋತ್ಸವದ ವೇಳೆ ರಾಷ್ಟ್ರ ರಾಜಧಾನಿಯಲ್ಲಿ ಕೇಳುವುದು ಸಂಪ್ರದಾಯಮಾತು.

ಬಾಲ್ಯದಲ್ಲಿಯೇ ಹೆಗಲ
ಮೇಲೆ ಬಿತ್ತು ಜವಾಬ್ದಾರಿ
ಲತಾ 13 ವರ್ಷದ ಬಾಲಕಿಯಾಗಿರುವಾಗಲೇ, ಅವರ ತಂದೆ ದೀನನಾಥ ಮಂಗೇಶ್ಕರ್‌ ನಿಧನ ಹೊಂದಿದರು. ಇದರಿಂದಾಗಿ, ಇಡೀ ಕುಟುಂಬ ನಿರ್ವಹಣೆಯ ಹೊಣೆ ಲತಾ ಹೆಗಲಿಗೆ ಬಿತ್ತು. ನಾಲ್ಕು ಜನ ಸೋದರಿಯರು, ಒಬ್ಬ ಸೋದರ- ಇವರುಗಳ ದೊಡ್ಡ ಕುಟುಂಬವನ್ನು ನೋಡಿ ಕೊಳ್ಳಬೇಕಾಗಿ ಬಂತು. ಹೀಗಾಗಿ ಅನಿವಾರ್ಯ ವಾಗಿ ಲತಾ ನಾಟಕಗಳಲ್ಲಿ ಅಭಿನಯಿಸುವು ದನ್ನು ಮುಂದು  ವರೆಸಬೇಕಾಯಿತು. ಇದೇ ವೇಳೆ ಮರಾಠಿ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಲು ಅವ ಕಾಶ ಬಂದಿದ್ದ ರಿಂದ, ಲತಾ ತಮ್ಮ ಕುಟುಂಬದ ಜತೆೆಗೆ ಇಂದೋರ್‌ ನಿಂದ ಪುಣೆಗೆ ಬರಬೇಕಾಯಿತು. ಬಳಿಕ ಕೊಲ್ಲಾಪುರದಲ್ಲಿ ಕುಟುಂಬದ ಜತೆೆಗೆ ಸ್ವಲ್ಪ ದಿ ನವಿದ್ದು, ಅದಾದ ಅನಂತರ 1947ರಲ್ಲಿ ಇಡೀ ಕುಟುಂಬದ ಜತೆೆಗೆ ಮುಂಬಯಿಯ ನಾನಾಚೌಕ್‌ಗೆ ಬಂದು ನೆಲೆಸಿದರು.

ಕೆಲವು ಜನಪ್ರಿಯ ಗೀತೆ
ರಸಿಕ ಬಲಮಾ.. (ಚೋರಿ ಚೋರಿ), ಜ್ಯೋತಿ ಕಲಷ್‌ ಛಲಕೇ.. (ಭಾಬೀ ಕೀ ಚೂಡಿಯಾಂ), ಯೇ ದಿಲ್‌ ಔರ್‌ ಉನ್‌ ಕೀ ನಿಗಾಹೋಂಕೆ ಸಾಯೇ.. (ಪ್ರೇಮ್‌ ಪರ್ಬತ್‌), ಕುಹು ಕುಹೂ ಬೋಲೇ ಕೋಯಾಲಿಯಾ.. (ಸುವರ್ಣ ಸುಂದರಿ), ಪಂಖ್‌ ಹೋತಿ ತೋ ಉಡ್‌ ಜಾತೀರೆ.. (ಸೆಹರಾ), ನೈನೋಂ ಮೆ ಬದರಾ ಛಾಯೆ.. (ಮೇರಾ ಸಾಯಾ), ಜಾಸೇ ಕೈಸೇ ಸಪ್ರೋಂ ಮೇ ಖೋಗೋ.. (ಅನುರಾಧ), ತುಮ್‌ ನ ಜಾನೆ ಕಿಸ್‌ ಜಹಾಂಮೆ ಖೋಗಯೇ.. (ಸಜಾ), ಏರಿ ಮೈ ತೋ ಪ್ರೇಮ್‌ ದಿವಾನಿ.. (ಬಹಾರ್‌), ಯೂಂ ಹಸರತೋ ಕೆ ದಾಗ್‌… (ಅದಾಲತ್‌), ಯೇ ಜಿಂದಗೀ ಉಸಿಕಿ ಹೈ.. (ಅನಾರ್ಕಲಿ), ಮೋಹೆ ಭೂಲ್‌ ಗಯೇ ಸಾವರಿಯಾಂ.. (ಬೈಜೋ ಬಾವ್ರಾ), ಧೀರೆಸೆ ಆಜಾರೆ ಅಖೀಯಾನ್‌ ಮೇಂ ನಿಂದಿಯಾ.., ರೈನಾ ಭೀತಿ ಜಾಯೇ.., ಪವನ್‌ ದಿವಾನಿ.. ಕೈಸೆ ಜಾಂವು ಜಮುನಾ ಕೇ ತೀರ್‌…

ಲತಾ ಅಭಿನಯಕ್ಕೆ ಒನ್ಸ್‌
ಮೋರ್‌ ಎನ್ನುತ್ತಿದ್ದ ಫ್ಯಾನ್ಸ್‌
ಆರಂಭದಲ್ಲಿ ರಂಗಭೂಮಿಯಲ್ಲಿ ನಟಿಯಾಗಿ ರಂಗ ಪ್ರವೇಶ ಮಾಡಿದ್ದ ಲತಾ ಮಂಗೇಶ್ಕರ್‌ ತನ್ನ ಅಭಿನಯದ ಮೂಲ ದೆಕವೇ ನೋಡುಗರ ಮನಗೆದ್ದಿದ್ದರು. ಒಮ್ಮೆ “ಸಂಗೀತ್‌ ಸೌಭದ್ರ್’ ನಾಟಕದಲ್ಲಿ ನಾರದನ ಪಾತ್ರಧಾರಿ ಯಾವುದೋ ಕಾರಣದಿಂದ ಪ್ರದರ್ಶನಕ್ಕೆ ಬರಲಾಗಲಿಲ್ಲ. ಆಗ 8 ವರ್ಷದ ಬಾಲಕಿ ಲತಾ ತಮ್ಮ ತಂದೆಯನ್ನು ಒಪ್ಪಿಸಿ, ನಾರದನ ಪಾತ್ರವನ್ನು ತಾವೇ ನಿರ್ವಹಿಸಿದ್ದರು. ಅದಾದ ಬಳಿಕ ಆ ನಾಟಕ ಎಲ್ಲೇ ನಡೆದರೂ, ಲತಾ ಖಾಯಂ ಆಗಿ ನಾರದನ ಪಾತ್ರವನ್ನೆ ನಿರ್ವಹಿಸುವಂತಾಯಿತು. ಅಲ್ಲದೆ ವೇದಿಕೆಯಲ್ಲಿ ಲತಾ ನಟನೆಯನ್ನು ನೋಡಿದ ಅಭಿಮಾನಿಗಳು, ಪಾತ್ರವನ್ನು ಮತ್ತೊಮ್ಮೆ ಪ್ರದರ್ಶಿಸುವಂತೆ ಆಗ್ರಹಿಸಿದ್ದರು.

ಟೋಪಿ ಹಾಕಲು ಹೋಗಿ
ತಂದೆಯಿಂದ ಬೈಸಿಕೊಂಡಿದ್ದರು
ಒಮ್ಮೆ ಲತಾ ತಂದೆ ದೀನನಾಥ್‌ ಮಂಗೇಶ್ಕರ್‌ ದಿನಸಿ ಸಾಮಾನು ತರಲು ಕಿರಾಣಿ ಅಂಗಡಿಗೆ ಕಳುಸಿದ್ದರು. ಲತಾ ತಮ್ಮ ಬಳಿಯಿದ್ದ ಒಂದು ಹಳೆಯ ಸವಕಲು ನಾಣ್ಯವನ್ನು ತೆಗೆದುಕೊಂಡು ಹೋಗಿ ಅಂಗಡಿಯವನಿಗೆ, “ಇಗೋ ನಿನ್ನ ದುಡ್ಡಿನ ಪೆಟ್ಟಿಗೆಯಲ್ಲಿ ನಾಣ್ಯ ಹಾಕುತ್ತಿದ್ದೇನೆ. ನನಗೆ ದಿನಸಿ ಕೊಡು’ ಎಂದು ಹೇಳಿ ಅಂಗಡಿಯವನಿಗೆ ಟೋಪಿ ಹಾಕಿದ್ದರಂತೆ. ಈ ವಿಷಯವನ್ನು ಮನೆಗೆ ಬಂದು ಲತಾ ಹೆಮ್ಮೆಯಿಂದ ಹೇಳಿಕೊಂಡಿದ್ದರಂತೆ. ಇದನ್ನು ಕೇಳಿದ ತಂದೆ ದೀನನಾಥ್‌ ಮಂಗೇಶ್ಕರ್‌ ಲತಾಗೆ ಚೆನ್ನಾಗಿ ಬೈದು ಬುದ್ದಿವಾದ ಹೇಳಿ, ಅಂಗಡಿಯವನ ಬಳಿ ಹೋಗಿ ಕ್ಷಮೆ ಕೇಳಿಬರಲು ಪುನಃ ಕಳುಹಿಸಿದ್ದರಂತೆ. ಅದರಂತೆ ಅಂಗಡಿಗೆ ಹೋದ ಲತಾ ಮಾಡಿದ ತಪ್ಪಿಗೆ ಅಂಗಡಿಯವನ ಬಳಿ ಕ್ಷಮೆ ಕೇಳಿ ಬಂದಿದ್ದರಂತೆ.

1942ರಿಂದ ವೃತ್ತಿ ಬದುಕು
1942ರಲ್ಲಿ ಮರಾಠಿ ಚಿತ್ರ ‘ಕಿತೀ ಹಸಾಲ್‌’ ಚಿತ್ರದಲ್ಲಿ ಹಾಡುವ ಮೂಲಕ ಹಿನ್ನೆಲೆ ಗಾಯಕಿಯಾಗಿ ಲತಾ ಮಂಗೇಶ್ಕರ್‌ ವೃತ್ತಿ ಜೀವನ ಶುರು ಮಾಡಿದರು. ಆದರೆ ಕಾರಣಾಂತರಗಳಿಂದ ಲತಾ ಮಂಗೇಶ್ಕರ್‌ ಹಾಡಿದ ಮೊದಲ ಹಾಡು ಆ ಚಿತ್ರದಲ್ಲಿ ಸೇರ್ಪಡೆಯಾಗಲೇ ಇಲ್ಲ. ಅದಾದ ನಂತರ ಲತಾ ‘ಮಂಗಳ ಗೌರ್‌’ ಚಿತ್ರದಲ್ಲಿ ಅಭಿನಯಿಸಿದರು. 1947ರಲ್ಲಿ ಹಿಂದಿಯ “ಆಪ್‌ ಕಿ ಸೇವಾಮೇ..’, ‘ಪಾಂ ಲಾಗೋ ಕರ್‌ ಚೋರಿರೇ…’ ಎಂಬ ಎರಡು ಗೀತೆಗಳು ಲತಾಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟವು. ಅದಾದ ನಂತರ ಮರಾಠಿ ಮತ್ತು ಹಿಂದಿ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ ಪ್ರಸಿದ್ದ ಪಡೆದ ಲತಾಗೆ ಒಂದರ ಹಿಂದೊಂದು ಅವಕಾಶಗಳು ಬರಲು ಶುರುವಾದವು.

ಗೀತೆ ರಚನೆಕಾರನ ಜನ್ಮದಿನದಂದೇ ದೀದಿ ನಿಧನ
1963ರ ಜ. 27ರಂದು ಲತಾ ಮಂಗೇಶ್ಕರ್‌ ಅವರು ಆಗಿನ ಪ್ರಧಾನಿ ಜವಹರಲಾಲ್‌ ನೆಹರು ಅವರ ಎದುರು ಹಾಡಿದ್ದ “ಏ ಮೇರೆ ವತನ್‌ ಕೇ ಲೋಗೋ’ ಪ್ರಧಾನಿಯವರ ಕಣ್ಣಲ್ಲೇ ನೀರು ತರಿಸಿತ್ತು. ವಿಶೇಷವೆಂದರೆ ಆ ಗೀತೆಯನ್ನು ಬರೆದಿದ್ದ ಕವಿ ಪ್ರದೀಪ್‌ ಜನಿಸಿದ್ದು 1915ರ ಫೆ.6ರಂದು. ಲತಾ ಅವರು ಫೆ.6ರಂದೇ ನಿಧನರಾಗಿದ್ದಾರೆ.

ಶಾಸ್ತ್ರೀಯ ಸಂಗೀತ ಗಾಯಕಿಯಾಗುವ ಹಂಬಲ
ಲತಾ ಮಂಗೇಶ್ಕರ್‌ ಎಲ್ಲ ಥರದ ಹಾಡುಗಳಿಗೂ ಧ್ವನಿಯಾಗಿದ್ದರೂ, ಅವರು ಶಾಸ್ತ್ರೀಯ ಸಂಗೀತವನ್ನು ತುಂಬ ಪ್ರೀತಿಸುತ್ತಿದ್ದರು. ಬಾಲ್ಯದಲ್ಲಿ ತಮ್ಮ ತಂದೆಯ ಅನಂತರ ರಾಮಕೃಷ್ಣ ಬುವಾವಚೆ ಮತ್ತು ಉಸ್ತಾದ್‌ ಅಮಾನತ್‌ ಖಾನ್‌ ಅವರ ಬಳಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ್ದರು. ನಾನು ಎಷ್ಟೇ ಸಿನೆಮಾ ಹಾಡುಗಳನ್ನು ಹಾಡಿದ್ದರೂ, ಬೇರೆ ಬೇರೆ ಥರದ ಹಾಡುಗಳನ್ನು ಹಾಡಿದ್ದರೂ, ಇಂದಿಗೂ ನನಗೆ ಒಲವಿರುವುದು ಶಾಸ್ತ್ರೀಯ ಸಂಗೀತದ ಕಡೆಗೆ. ನನಗೆ ಇಂದಿಗೂ ಶಾಸ್ತ್ರೀಯ ಗಾಯಕಿಯಾಗುವ ಹಂಬಲವಿದೆ ಎಂದು ಸ್ವತಃ ಲತಾ ಮಂಗೇಶ್ಕರ್‌ ಅನೇಕ ಸಂದರ್ಭಗಳಲ್ಲಿ ಹೇಳಿಕೊಂಡಿದ್ದರು.

ಸಂಗೀತ ಸೇವೆಗೆ ಕುಟುಂಬ ಮುಡಿಪು
ಲತಾ ಮಂಗೇಶ್ಕರ್‌ ಅವರ ಕುಟುಂಬದಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನವನ್ನು ಸಂಗೀತಕ್ಕೆ ಮುಡಿಪಾಗಿಟ್ಟವರು. ಲತಾ ಮಂಗೇಶ್ಕರ್‌ ಸೋದರಿಯರಾದ ಆಶಾ ಬೋಸ್ಲೆ, ಉಷಾ, ಮೀನಾ ಎಲ್ಲರೂ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮ ಸೋದರಿಯರ ಜತೆೆಗೆ ಲತಾ ಹಲವು ಗೀತೆಗಳನ್ನೂ ಹಾಡಿದ್ದಾರೆ. ಇನ್ನು ಲತಾ ಮಂಗೇಶ್ಕರ್‌ ಸೋದರ ಹೃದಯನಾಥ್‌ ಮಂಗೇಶ್ಕರ್‌ ಕೂಡ ಸಂಗೀತ ನಿರ್ದೇಕರಾಗಿ ಗುರುತಿಸಿ ಕೊಂಡಿದ್ದು, ಹಲವು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

1942 ಗಾಯನ ವೃತ್ತಿ ಪ್ರವೇಶ

ಪುರಸ್ಕಾರಗಳು
ಭಾರತ ರತ್ನ(2001)
ಪದ್ಮ ವಿಭೂಷಣ (1999)
ಪದ್ಮ ಭೂಷಣ (1969)

ಹಠಕ್ಕೆ ಬಿದ್ದು ಹಿಂದಿ ಕಲಿತ ಲತಾ…
ಲತಾ ಮಂಗೇಶ್ಕರ್‌ ಮನೆ ಭಾಷೆ ಮರಾಠಿಯಾಗಿದ್ದರಿಂದ, ಆರಂಭದಲ್ಲಿ ಅವರಿಗೆ ಹಿಂದಿ ಮತ್ತು ಉರ್ದು ಮಾತನಾಡುವುದು ಕಷ್ಟವಾಗುತ್ತಿತ್ತು. ಒಮ್ಮೆ ರೈಲಿನಲ್ಲಿ ಪ್ರಯಾಣಿಸುವಾಗ ಹಿಂದಿಯ ಖ್ಯಾತ ನಟ ದಿಲೀಪ್‌ ಕುಮಾರ್‌ ಲತಾ ಅವರ ಹಿಂದಿ ಭಾಷೆಯ ಶೈಲಿಯನ್ನು ಅಣಕಿಸಿ ನಕ್ಕರಂತೆ. ಬಳಿಕ ಮನೆಗೆ ಬಂದ ಲತಾ, ಹಠ ಡಿದು ಒಬ್ಬ ಮನೆಪಾಠದ ಹಿಂದಿ ಮತ್ತು ಉರ್ದು ಶಿಕ್ಷಕರನ್ನು ಹುಡುಕಿ ಅವರಿಂದ ಹಿಂದಿ, ಉರ್ದು ಎರಡೂ ಭಾಷೆಯನ್ನೂ ಕಲಿತುಕೊಂಡರು. ಮುಂದೆ ಒಮ್ಮೆ ಲತಾ ಉರ್ದು ಗಜಲ್‌ ರೆಕಾರ್ಡ್‌ ಮಾಡುವಾಗ ಸ್ಟುಡಿಯೋಗೆ ಬಂದಿದ್ದ ನರ್ಗೀಸ್‌ ದತ್‌ ಅವರ ತಾಯಿ, “ನೀನು ಇಷ್ಟೊಂದು ಸ್ಪಷ್ಟವಾಗಿ ಉಚ್ಚರಿಸುವುದನ್ನು ಎಲ್ಲಿಂದ ಕಲಿತೆ..?’ ಎಂದು ಕೇಳಿದರಂತೆ.

ಐವತ್ತರ ದಶಕದ ಅನಂತರ
ಲತಾ ಅವರದ್ದೇ ಜಮಾನ..
ಭಾರತೀಯ ಸಂಗೀತ ಕ್ಷೇತ್ರ ಮತ್ತು ಚಿತ್ರರಂಗದಲ್ಲಿ 1950ರ ದಶಕದಲ್ಲಿ ಪ್ರವರ್ಧಮಾನಕ್ಕೆ ಬರಲು ಶುರುವಾದ ಲತಾ ಮಂಗೇಶ್ಕರ್‌ ಕೀರ್ತಿ ಪತಾಕೆ ಮತ್ತೆ ಕೆಳಗಿಳಿಯಲೇ ಇಲ್ಲ. ಗಜಲ್‌, ಪ್ರೇಮಗೀತೆ, ಭಜನೆ, ಜಾನಪದ ಗೀತೆ, ಯುಗಳ ಗೀತೆ, ಕ್ಲಬ್‌ ಸಾಂಗ್‌… ಹೀಗೆ ಪ್ರತಿಯೊಂದು ರೀತಿಯ ಹಾಡುಗಳನ್ನೂ ಲತಾ ಹಾಡಿದ್ದಾರೆ. ಕೇವಲ ಹಿಂದಿ ಮಾತ್ರವಲ್ಲದೆ ಭಾರತದ ಸುಮಾರು 75ಕ್ಕೂ ಹೆಚ್ಚು ಭಾಷೆಗಳಲ್ಲಿ ಲತಾ ಸಾವಿರಾರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಇಂದಿಗೂ ತಮ್ಮ ಸಿನೆಮಾದಲ್ಲಿ ಲತಾ ಮಂಗೇಶ್ಕರ್‌ ಒಂದಾದರೂ ಹಾಡನ್ನು ಹಾಡಬೇಕು ಎಂದು ಬಯಸುವ ಅಸಂಖ್ಯಾತ ನಿರ್ಮಾಪಕರು, ನಿರ್ದೇಶಕರು ಬಾಲಿವುಡ್‌ ಸೇರಿದಂತೆ ಭಾರತದ ಧ ಭಾಷೆಗಳ ಚಿತ್ರರಂಗಗಳಲ್ಲಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಲತಾ ಮಂಗೇಶ್ಕರ್‌ ಅವರನ್ನು ಪ್ರೀತಿಯಿಂದ ಲತಾ ದೀದಿ ಎಂದೇ ಕರೆಯಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next