Advertisement

ಅಡಕೆ-ಕಾಳಮೆಣಸು ಬೆಳೆಗಾರರಿಗೆ ವಿಮೆ ಕಂತು ಕಟ್ಟಲು ಮೂರು ದಿನ ಬಾಕಿ

04:07 PM Jun 28, 2020 | Suhan S |

ಶಿರಸಿ: ಅಂತೂ ಇಂತು ಈ ಬಾರಿ ಕರ್ನಾಟಕದ ಅಡಕೆ, ಕಾಳು ಮೆಣಸು ಸೇರಿದಂತೆ ಇತರೇ ತೋಟಗಾರಿಕಾ ಬೆಳೆಗಾರರಿಗೆ ವಿಮೆ ಕುರಿತು ತೋಟಗಾರಿಕಾ ಇಲಾಖೆ ಅಧಿಸೂಚನೆ ಹೊರಡಿಸಿದೆ.

Advertisement

ಜೂ.25ಕ್ಕೆ ಪ್ರಕಟಣೆ ಹೊರಡಿಸಿ, ಕೇವಲ 5 ದಿನಗಳ ಅವಕಾಶ ಕೊಟ್ಟಿದೆ. ವಿಮೆಯ ಅಂತಿಮ ದಿನ ವಿಸ್ತರಿಸುವಂತೆ ರೈತರು, ಸಹಕಾರಿಗಳು ಸರಕಾರವನ್ನು ಆಗ್ರಹಿಸಿದ್ದಾರೆ. ಏಕೆಂದರೆ ಇರುವ ಅಲ್ಪ ದಿನದಲ್ಲಿ ತೋಟಗಾರಿಕಾ ಜಿಲ್ಲೆಗಳಲ್ಲಿ 80-90 ಸಾವಿರ ಬೆಳೆಗಾರರು ಇದ್ದಾಗ ಅವರೆಲ್ಲರ ವಿಮೆ ದಾಖಲಿಸುವುದು ಸುಲಭವಲ್ಲ. ಸಹಕಾರಿ ಸಂಘಗಳ ಇಕ್ಕಟ್ಟನ್ನು ತಿಳಿಗೊಳಿಸಲು ಅವಧಿ ವಿಸ್ತರಣೆಯೊಂದೇ ದಾರಿಯಾಗಿದೆ.

ಒಳ್ಳೆ ಯೋಜನೆ: ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ಗಳ ಮೂಲಕ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದ ಹವಾಮಾನ ಆಧಾರಿತ ಬೆಳೆ ವಿಮೆ ಅಡಕೆ, ಕಾಳುಮೆಣಸು ತೋಟಗಾರಿಕಾ ಬೆಳೆಗಳಿಗೆ ಇತ್ತು. ಕಳೆದ ನಾಲ್ಕೈದು ವರ್ಷದಿಂದ ಅತಿ ಮಳೆಗೆ ಅಡಕೆ, ಕಾಳುಮೆಣಸು ಕೊಳೆ ರೋಗದಿಂದ ತತ್ತರಿಸುತ್ತಿದ್ದ ಬೆಳೆಗಾರರಿಗೆ ಕೊಂಚ ಆಶ್ರಯವೂ, ಧೈರ್ಯವೂ ಆಗುತ್ತಿದ್ದವು.

ಕೋವಿಡ್  ವೈರಸ್‌ ಕಾರಣದಿಂದ ಕಂಗಾಲಾಗಿದ್ದ ಕರಾವಳಿ, ಮಲೆನಾಡು ಸೀಮೆಯ ತೋಟಿಗರಿಗೆ ಈ ವರ್ಷದ ಮಳೆಗಾಲದ ಹಂಗಾಮು ಹೇಗೆ? ಎಂಬ ಚಿಂತೆ ಕಾಡತೊಡಗಿದ ಮಧ್ಯೆ ಜೂನ್‌ ಮೂರನೇ ವಾರ ಕಳೆದರೂ ವಿಮಾ ಕಂಪನಿಯನ್ನೇ ಸರಕಾರ ಅಂತಿಮಗೊಳಿಸಿರಲಿಲ್ಲ. ಈ ಬಾರಿ ಹವಾಮಾನ ಇಲಾಖೆ ಅತಿ ಮಳೆ ಎನ್ನುತ್ತಿದೆ. ಹಾಗಾದರೆ ಬೆಳೆ ಉಳಿಸಿಕೊಳ್ಳುವದು ಹೇಗೆ ಎಂದು ಆತಂಕ ಎದುರಾಗಿತ್ತು. ಹವಾಮಾನ ಆಧಾರಿತ ಬೆಳೆ ವಿಮೆ ರೈತರಿಗೆ ಆಂತರಿಕ ಧೈರ್ಯ ಕೊಟ್ಟಿದ್ದು ಸುಳ್ಳಲ್ಲ.

ವಿಳಂಬದ ಆದೇಶ: ಜೂನ್‌ ಅರ್ಧ ಭಾಗ ಉರುಳಿದರೂ ಯಾವುದೇ ಸೂಚನೆ ನೀಡಿದ ಸರಕಾರ ಏಕಾಏಕಿ ಐದು ದಿನಗಳ ಅವಕಾಶ ನೀಡಿ ತೋಟಗಾರಿಕಾ ಬೆಳೆಗಳಿಗೆ ಹವಾಮಾನ ಆಧರಿತ ಬೆಳೆ ವಿಮೆಗೆ ಸೂಚಿಸಿದೆ. 2016ರಿಂದ ಈ ಯೋಜನೆ ಜಾರಿಗೆ ತರಲಾಗಿದ್ದು, ಅಡಕೆ, ಕಾಳುಮೆಣಸಿಗೆ ವಿಮಾ ಮೊತ್ತದ ಶೇ.5ರಷ್ಟನ್ನು ಕಟ್ಟಿಸಿಕೊಳ್ಳಲಾಗಿತ್ತು. ಉಳಿದ ಹಣವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ತಲಾ ಶೇ. 12.50 ಭರಿಸಿಕೊಳ್ಳುತ್ತಿತ್ತು. ಮಳೆ ಆಧಾರದಲ್ಲಿ ವಿಮೆ ಕೊಡಲಾಗುತ್ತಿತ್ತು. ಈಗಿನ ಬೆರಳೆಣಿಕೆ ಅವಧಿಯಲ್ಲಿ ವಿಮೆ ಕನ್ನಡಿಯೊಳಗಿನ ಗಂಟಾಗುವ ಸಾಧ್ಯತೆ ಇದೆ.

Advertisement

ಅಡಕೆಗೆ ವಿಮಾ ಮೊತ್ತ 1,28,000 ರೂ. ಆದರೆ, ಹೆಕ್ಟೇರ್‌ಗೆ 6400 ರೂ. ಬರಲಿದೆ. ಕಾಳು ಮೆಣಸಿಗೆ ಹೆ.ಗೆ 47 ಸಾವಿರ ವಿಮಾ ಕಂತಾದರೆ ರೈತರ ಪಾಲಿಗೆ 2350 ರೂ. ವಿಮಾ ಕಂತು ಬರಲಿದೆ. 2020, 2021, 2022 ವರ್ಷಗಳಿಗೆ ಈ ಯೋಜನೆ ಅನ್ವಯಿಸಿ ಸರಕಾರ ಆದೇಶ ಹೊರಡಿಸಿದ್ದು, ಮೂರು ವರ್ಷಗಳ ಪಾಲಿಗೆ ಈ ವಿಮೆಗೆ ಪ್ರತ್ಯೇಕ ಆದೇಶ ಬೇಡವಾಗಿದೆ.

ಬೆಳೆ ಸಾಲದ ಜೊತೆಗೆ ವಿಮೆ ಕಟ್ಟಲು ಹಿಂದೆಲ್ಲ ಅವಕಾಶ ಇತ್ತು. ಈಗ ಮೇ ಕೊನೆಯೊಳಗೆ ಹಣ ಮರುಪಾವತಿಸಿ ಮರಳಿ ಬೆಳೆ ಸಾಲ ಪಡೆದವರೂ ಇದ್ದಾರೆ. ಈಗ ಹೊಸತಾಗಿ ಬೆಳೆ ವಿಮೆ ದಾಖಲಿಸಲು ಕನಿಷ್ಠ 15 ದಿನ ಹೆಚ್ಚುವರಿ ಅವಕಾಶ ಒದಗಿಸಬೇಕು. -ಜಿ.ಆರ್‌. ಹೆಗಡೆ ಬೆಳ್ಳೇಕೇರಿ, ಯಡಹಳ್ಳಿ ಸೊಸೈಟಿ ಅಧ್ಯಕ್ಷ

 

-ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next