ಮೊಹಾಲಿಯ “ಐಎಸ್ ಬಿಂದ್ರಾ ಪಿಸಿಎ ಸ್ಟೇಡಿಯಂ’ ಇತಿಹಾಸ ಸೇರಲಿದೆ. ಭಾರತ-ಆಸ್ಟ್ರೇಲಿಯ ನಡುವಿನ ರವಿವಾರದ ಪಂದ್ಯವೇ ಇಲ್ಲಿನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ. ಆದರೆ ಇದರಿಂದ ಪಂಜಾಬ್
ಕ್ರಿಕೆಟ್ ಅಭಿಮಾನಿಗಳು ನಿರಾಶರಾಗಬೇಕಿಲ್ಲ. ಇನ್ನು ಮುಂದೆ ಇಲ್ಲೇ ಸಮೀಪದಲ್ಲಿರುವ ಮುಲ್ಲಾನ್ ಪುರ್‌ನ 38.2 ಎಕರೆ ಜಾಗದಲ್ಲಿ ತಲೆ ಎತ್ತುತ್ತಿರುವ ಅತ್ಯಾಧುನಿಕ ಮಾದರಿಯ ನೂತನ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯಲಿವೆ ಎಂಬುದಾಗಿ ಪಿಸಿಎ ಕಾರ್ಯದರ್ಶಿ ಆರ್.ಪಿ. ಸಿಂಗ್ಲಾ ಹೇಳಿದ್ದಾರೆ.
ಕ್ರಿಕೆಟಿನ ಅನೇಕ ಸ್ಮರಣೀಯ ಘಟನೆಗಳಿಗೆ ಸಾಕ್ಷಿಯಾದ ಮೊಹಾಲಿಯಲ್ಲಿ ಮೊದಲ ಏಕದಿನ ಪಂದ್ಯ ನಡೆದದ್ದು 1994ರಲ್ಲಿ. ಸ್ವಾರಸ್ಯವೆಂದರೆ, ರವಿವಾರದ ಭಾರತ-ಆಸ್ಟ್ರೇಲಿಯ ನಡುವಿನ ಪಂದ್ಯ ಮೊಹಾಲಿಯ 25ನೇ ಏಕದಿನ ಮುಖಾಮುಖೀಯಾಗಿದೆ.
2011ರ ಭಾರತ-ಪಾಕಿಸ್ಥಾನ ನಡುವಿನ ವಿಶ್ವಕಪ್ ಸೆಮಿಫೈನಲ್ ಮೊಹಾಲಿಯಲ್ಲಿ ನಡೆದ ಪ್ರಮುಖ ಪಂದ್ಯಗಳಲ್ಲೊಂದು. ಬ್ರಿಯಾನ್ ಲಾರಾ ಅವರ ಸರ್ವಾಧಿಕ ಟೆಸ್ಟ್ ರನ್ನುಗಳ ದಾಖಲೆಯನ್ನು ಸಚಿನ್ ತೆಂಡುಲ್ಕರ್ ಮುರಿದದ್ದು ಇದೇ ಅಂಗಳದಲ್ಲಿ. ಇಲ್ಲಿ 13 ಟೆಸ್ಟ್, 4 ಟಿ20 ಅಂತಾರಾಷ್ಟ್ರೀಯ ಪಂದ್ಯಗಳೂ ನಡೆದಿವೆ.
ಹಾಗಾದರೆ ಮೊಹಾಲಿ ಕ್ರೀಡಾಂಗಣವನ್ನು ಏನು ಮಾಡಲಾಗುತ್ತದೆ? ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಒಂದು ಮೂಲದ ಪ್ರಕಾರ, ಇಲ್ಲಿ ಐಸಿಸಿ ಅಕಾಡೆಮೆಯೊಂದು ತಲೆಯೆತ್ತುವ ಸಾಧ್ಯತೆ ಇದೆ.