ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲನುಭವಿಸಿದೆ. ಆದರೆ ಈ ಪಂದ್ಯದಲ್ಲಿ ಸಿಎಸ್ ಕೆ ಬೌಲರ್ ಡ್ವೇನ್ ಬ್ರಾವೋ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.
ಲಕ್ನೋ ತಂಡದ ಬ್ಯಾಟರ್ ದೀಪಕ್ ಹೂಡಾ ವಿಕೆಟ್ ಪಡೆದ ಬ್ರಾವೋ ಐಪಿಎಲ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದರು. ಈ ದಾಖಲೆ ಇದುವರೆಗೆ ಲಸಿತ್ ಮಾಲಿಂಗ ಹೆಸರಿನಲ್ಲಿತ್ತು.
ಮಾಜಿ ಮುಂಬೈ ಇಂಡಿಯನ್ಸ್ ಆಟಗಾರ ಲಸಿತ್ ಮಾಲಿಂಗ ಐಪಿಎಲ್ ನಲ್ಲಿ 170 ವಿಕೆಟ್ ಕಿತ್ತು ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಆದರೆ ಗುರುವಾರ ಬ್ರೆಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬ್ರಾವೋ 171 ನೇ ವಿಕೆಟ್ ಕಿತ್ತು ಮಾಲಿಂಗ ದಾಖಲೆ ಮುರಿದಿದ್ದಾರೆ.
ಇದನ್ನೂ ಓದಿ:ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ಆಸೀಸ್ ಕೀಪರ್ ಪೀಟರ್ ನೆವಿಲ್
ಬ್ರಾವೋ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಲಸಿತ್ ಮಾಲಿಂಗ ಚೆನ್ನೈ ಬೌಲರ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಾಲಿಂಗ, “ ಬ್ರಾವೋ ಒಬ್ಬ ಚಾಂಪಿಯನ್. ಐಪಿಎಲ್ ನಲ್ಲಿ ಅತೀ ಹೆಚ್ಚು ವಿಕೆಟ್ ಕಿತ್ತ ಸಾಧನೆ ಮಾಡಿರುವದಕ್ಕೆ ಅಭಿನಂದನೆಗಳು ಗೆಳೆಯ” ಎಂದಿದ್ದಾರೆ.
20 ಓವರ್ ಗಳಲ್ಲಿ 210 ರನ್ ಗಳಿಸಿದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೋಲು ತಪ್ಪಿಸಲಾಗಲಿಲ್ಲ. ಕ್ವಿಂಟನ್ ಡಿಕಾಕ್, ಎವಿನ್ ಲೆವಿಸ್ ಬ್ಯಾಟಿಂಗ್ ನೆರವಿನಿಂದ ರಾಹುಲ್ ಪಡೆ ಕೂಟದ ಮೊದಲ ಜಯ ಸಾಧಿಸಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಮೊದಲೆರಡು ಪಂದ್ಯಗಳಲ್ಲಿ ಸೋಲನುಭವಿಸಿತು.