Advertisement
ಇತ್ತೀಚಿನ ದಿನಗಳಲ್ಲಿ ಐದಾರು ವರ್ಷದ ಮಕ್ಕಳಲ್ಲಿಯೇ ದೃಷ್ಟಿ ದೋಷ ಕಾಣಿಸಿಕೊಳ್ಳುತ್ತಿದ್ದು, ಸ್ಪಷ್ಟ ದೃಷ್ಟಿಗೆ ಆ ಮಕ್ಕಳು ಜೀವನ ಪೂರ್ತಿ ಕನ್ನಡಕ ಧರಿಸಬೇಕಾಗುತ್ತದೆ. ಕನ್ನಡಕ ಬೇಡ ಎನ್ನುವರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿ ದುಬಾರಿ ಲ್ಯಾಸಿಕ್ ಚಿಕಿತ್ಸೆ (ಲೇಜರ್ ಚಿಕಿತ್ಸೆ) ಪಡೆದುಕೊಳ್ಳುತ್ತಿದ್ದರು. ಈಗ ಮಿಂಟೋ ಆಸ್ಪತ್ರೆಯಲ್ಲಿ ಈ ಲೇಜರ್ ಚಿಕಿತ್ಸೆ ಸೌಲಭ್ಯ ಆರಂಭವಾಗುತ್ತಿದ್ದು, ಶೇ.50 ರಿಯಾಯಿತಿಯಲ್ಲಿ ದೊರೆಯಲಿದೆ.
Related Articles
Advertisement
ಫೆಬ್ರವರಿ ಅಂತ್ಯಕ್ಕೆ ಚಿಕಿತ್ಸೆ ಆರಂಭ: ಮಿಂಟೋದಲ್ಲಿ ಅನೇಕ ಶಸ್ತ್ರಚಿಕಿತ್ಸೆಗಳನ್ನು ಮ್ಯಾನುಯಲ್ ಮಾದರಿಯಲ್ಲೇ ಮಾಡಲಾಗುತ್ತಿದೆ. ಈಗ ಹೊಸ ಉಪಕರಣಗಳು ಆಸ್ಪತ್ರೆಗೆ ಬಂದಿದ್ದು, ಅವುಗಳಿಗೆ ಫೆಬ್ರವರಿಯಲ್ಲಿ ಅಧಿಕೃತವಾಗಿ ಸಚಿವರು ಚಾಲನೆ ನೀಡಲಿದ್ದಾರೆ. ಆ ತಿಂಗಳ ಅಂತ್ಯಕ್ಕೆ ಲೇಜರ್ ಚಿಕಿತ್ಸೆ ಸೇರಿದಂತೆ ವಿವಿಧ ಅತ್ಯಾಧುನಿಕ ಚಿಕಿತ್ಸೆಗಳು ಆರಂಭವಾಗಲಿವೆ. ಆಸ್ಪತ್ರೆಯಲ್ಲಿ 8 ಶಸ್ತ್ರಚಿಕಿತ್ಸಾ ಕೊಠಡಿಗಳಿದ್ದು, ಎಲ್ಲದಕ್ಕೂ ಹೊಸ ಉಪಕರಣಗಳನ್ನು ಅಳವಡಿಸಲಾಗುತ್ತಿದೆ ಎಂದು ವೈದ್ಯಾಧಿಕಾರಿ ವೆಂಕಟೇಶ್ ತಿಳಿಸಿದರು.
ದರ ಶೇ.50ರಷ್ಟು ಕಡಿಮೆ: ಪ್ರಸ್ತುತ ಲಾಸಿಕ್ ಸರ್ಜರಿಗೆ ಖಾಸಗಿ ಆಸ್ಪತ್ರೆಯಲ್ಲಿ 80 ಸಾವಿರದಿಂದ 1 ಲಕ್ಷ ರೂ. ಶುಲ್ಕವಿದೆ. ಆದರೆ, ಮಿಂಟೋದಲ್ಲಿ ಈ ಚಿಕಿತ್ಸೆಗಳು ಶೇ.50ರಷ್ಟು ರಿಯಾಯಿತಿಯಲ್ಲಿ ಲಭ್ಯವಾಗುವುದರಿಂದ 40 ಸಾವಿರ ರೂ.ಗಿಂತ ಕಡಿಮೆ ವೆಚ್ಚದಲ್ಲಿ ಎರಡೂ ಕಣ್ಣಿನ ಲಾಸಿಕ್ ಸರ್ಜರಿ ಆಗಲಿದೆ. ಜತೆಗೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಸ್ತುತ ಲಭ್ಯವಿರುವ ಎಲ್ಲಾ ಚಿಕಿತ್ಸೆಗಳು ಇಲ್ಲಿ ಅರ್ಧದಷ್ಟು ಬೆಲೆಗೆ ಸಿಗಲಿವೆ. ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ ಶುಲ್ಕ ನಿಗದಿ ಮಾಡಲಾಗುವುದು ಎಂದು ಮಿಂಟೋ ನಿರ್ದೇಶಕಿ ಸುಜಾತಾ ರಾಥೋಡ್ ತಿಳಿಸಿದರು.
ಆಯುಷ್ಮಾನ್ ಭಾರತದಲ್ಲಿ ಲಭ್ಯವಿಲ್ಲ: ಕಣ್ಣಿನ ಲೇಜರ್ ಚಿಕಿತ್ಸೆಯು ಸೌಂದರ್ಯ ವರ್ಧಕ ಚಿಕಿತ್ಸೆ ಗುಂಪಿಗೆ ಬರುವ ಕಾರಣ, ಅದು ಆರೋಗ್ಯ ಕರ್ನಾಟಕ, ಆಯುಷ್ಮಾನ್ ಭಾರತ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಈ ಚಿಕಿತ್ಸೆಗೆ ಕಡ್ಡಾಯವಾಗಿ ಶುಲ್ಕ ನೀಡಬೇಕಿದೆ. ಅಲ್ಲದೇ ರಾಜ್ಯ ಸರ್ಕಾರಿ ಆಸ್ಪತ್ರೆಗಳಲ್ಲೇ ಮೊದಲ ಬಾರಿ ಮಿಂಟೋ ಆಸ್ಪತ್ರೆಯಲ್ಲಿಯೇ ಈ ಸೇವೆ ಲಭ್ಯವಾಗುತ್ತಿದೆ.
ಅತಿ ಕಡಿಮೆ ವೆಚ್ಚದಲ್ಲಿ ಮಿಂಟೋ ಆಸ್ಪತ್ರೆಯಲ್ಲಿ ಲೇಸರ್ ಚಿಕಿತ್ಸೆ ಆರಂಭವಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಸಿಗುತಿದ್ದ ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ಇನ್ನು ಮುಂದೆ ಅರ್ಧದಷ್ಟು ದರದಲ್ಲಿ ಪಡೆಯಬಹುದಾಗಿದೆ. ಅತ್ಯಾಧುನಿಕ ಚಿಕಿತ್ಸೆಗಳಿಗಾಗಿ 12 ಕೋಟಿ ರೂ. ಮೌಲ್ಯದ ಯಂತ್ರೋಪಕರಣಗಳನ್ನು ಅಳವಡಿಸುತ್ತಿದ್ದು, ಫೆಬ್ರವರಿ ಅಂತ್ಯಕ್ಕೆ ಚಿಕಿತ್ಸೆ ಚಾಲನೆ ದೊರೆಯಲಿದೆ.-ಡಾ. ಸುಜಾತಾ ರಾಥೋಡ್, ಮಿಂಟೋ ಆಸ್ಪತ್ರೆ ನಿರ್ದೇಶಕಿ * ಜಯಪ್ರಕಾಶ್ ಬಿರಾದಾರ್