ಶ್ರೀನಗರ: ಲಶ್ಕರ್ ಎ ತೈಬಾ ಉಗ್ರ ಸಂಘಟನೆಗೆ ಸೇರಿದ ಉಗ್ರಗಾಮಿ ಜಹೂರ್ ಅಹಮದ್ ನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಕುಲ್ಗಾಮ್ ಜಿಲ್ಲೆಯ ವೆಸ್ಸು ಏರಿಯಾದಲ್ಲಿ ಕಳೆದ ವರ್ಷ ನಡೆದಿದ್ದ ಮೂವರು ಬಿಜೆಪಿ ಕಾರ್ಯಕರ್ತರ ಹತ್ಯೆಯಲ್ಲಿ ಬಂಧಿತ ಉಗ್ರ ಜಹೂರ್ ಅಹಮದ್ ಭಾಗಿಯಾಗಿದ್ದ ಎನ್ನಲಾಗಿದೆ.
ಕಳೆದ ರಾತ್ರಿ ಸಾಂಬಾ ಜಿಲ್ಲೆಯಲ್ಲಿ ಜಹೂರ್ ಅಹಮದ್ ನನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗೆ ಆತನನ್ನು ಕಾಶ್ಮೀರಕ್ಕೆ ಕರೆತರಲಾಗಿದೆ.
ಇದನ್ನೂ ಓದಿ:ವ್ಯಾಲಂಟೈನ್ಸ್ ಡೇಗೆ ಮಾಲ್‌ಗಳು, ಫ್ಯಾನ್ಸಿ ಮಳಿಗೆ, ಪಾರ್ಕ್‌ಗಳಲ್ಲಿ ಹೊಸ ಜೋಶ್
ಅನಂತನಾಗ್ ನ ಪೊಲೀಸರ ತಂಡವು ಉಗ್ರ ಜಹೂರ್ ಅಹಮದ್ ಅಲಿಯಾಸ್ ಸಾಹಿಲ್ ಅಲಿಯಾಸ್ ಖಲೀದ್ ನನ್ನು ಫೆ.12ರ ಮಧ್ಯರಾತ್ರಿ ಬಂಧಿಸಿದ್ದಾರೆ. ಜಹೂರ್ ಅಹಮದ್ ಸಾಂಬಾದಲ್ಲಿ ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ಅನಂತನಾಗ್ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಉಗ್ರ ಕಳೆದ ವರ್ಷ ಕುಲ್ಗಾಮ್ ನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ. ಅದಲ್ಲದೆ ದಕ್ಷಿಣ ಕಾಶ್ಮೀರದ ಫುರಾ ದಲ್ಲಿ ನಡೆದ ಪೊಲೀಸ್ ಅಧಿಕಾರಿಯ ಹತ್ಯೆಯಲ್ಲೂ ಭಾಗಿಯಾಗಿದ್ದಾನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಉತ್ತರಾಖಂಡದಲ್ಲಿ ಮತ್ತೂಂದು ಪ್ರವಾಹ?
2020ರ ಅಕ್ಟೋಬರ್ 29ರಂದು ಕುಲ್ಗಾಮ್ ನಲ್ಲಿ ಮೂವರು ಬಿಜೆಪಿ ಕಾರ್ಯಕರ್ತರ ಹತ್ಯೆ ಮಾಡಲಾಗಿತ್ತು. ಫಿದಾ ಹುಸೇನ್, ಉಮರ್ ರಶೀದ್ ಬೇಗ್ ಮತ್ತು ಉಮರ್ ರಂಜಾನ್ ಹಜಾಮ್ ಎಂಬ ಮೂವರು ಬಿಜೆಪಿ ಸದಸ್ಯರು ಸಾಗುತ್ತಿದ್ದ ಕಾರಿಗೆ ಗುಂಡಿನ ಮಳೆಗರೆದು ಕೊಲ್ಲಲಾಗಿತ್ತು.