Advertisement
ಆಲಂಕಾರು: ಮೊನ್ನೆಯಷ್ಟೇ ಕಾಶ್ಮೀರ ಕರಣ್‌ನಗರದಲ್ಲಿ ಸೇನಾ ಪ್ರದೇಶಕ್ಕೆ ಲಷ್ಕರ್ ಉಗ್ರರು ನುಗ್ಗಿ ಗುಂಡಿನ ದಾಳಿಶುರುವಿಟ್ಟುಕೊಂಡಿದ್ದಾರು. ಅದಾಗಿ ಕೆಲ ಹೊತ್ತಲ್ಲೇ ಉಗ್ರರನ್ನು ಸಿಆರ್‌ಪಿಎಫ್ ಜವಾನರ ತಂಡ ಹೊಸಕಿ ಹಾಕಿತ್ತು. ಈ ರೋಚಕ ಕಾರ್ಯಾಚರಣೆಯಲ್ಲಿ ಶೌರ್ಯ ಮೆರೆದು ನಾಡಿನಾದ್ಯಂತ ಜನರ ಮೆಚ್ಚುಗೆಗೆ ಪಾತ್ರರಾದವರು ಹಳೆನೇರಂಕಿಯ ಧೀರ ಯೋಧ ಜುಬೈರ್.
ಜುಬೈರ್ ಅವರ ತಂದೆ ಸಮೂನ್ ಬ್ಯಾರಿ, ತಾಯಿ ಆಮೀನಮ್ಮ ಆದರ್ಶಪ್ರಾಯರು. ಮನೆಯಲ್ಲಿ ಕಷ್ಟವಿದ್ದರೂ ಸಮೂನ್ ಅವರು ಕೂಲಿ ಕೆಲಸ, ಆಮೀನಮ್ಮ ಬೀಡಿ ಕಟ್ಟಿ ಮಕ್ಕಳ ವಿದ್ಯಾಭ್ಯಾಸಕ್ಕೆ ತಡೆಯಾಗದಂತೆ ನೋಡಿಕೊಂಡಿದ್ದಾರೆ. ಅದರಂತೆ ಜುಬೈರ್ ಅವರು ಸಿಆರ್‌ಪಿಎಫ್ ಯೋಧರಾಗಿದ್ದಾರೆ. ಅವರ ಅಣ್ಣ ರಜಾಕ್ ರಾಮಕುಂಜ ಗ್ರಾಮದ ನೀರಾಜೆ ಜುಮಾ ಮಸೀದಿಯಲ್ಲಿ ಶಿಕ್ಷಕರಾಗಿದ್ದಾರೆ. ಜುಬೈರ್ ಪತ್ನಿ ಮೆಹಾರ್ಜ, ಅತ್ತಿಗೆ ಹಫ್ಸಾ ಅವರ ಸುಂದರ ಕುಟುಂಬ ಇವರದ್ದು. ಬಾಲ್‌ಬ್ಯಾಡ್ಮಿಂಟನ್ ಕ್ರೀಡಾಪಟು
ಜುಬೈರ್ ಅವರೊಳಗೊಬ್ಬ ಬಾಲ್ ಬ್ಯಾಡ್ಮಿಂಟರ್ ಕ್ರೀಡಾಪಟುವೂ ಇದ್ದಾನೆ. ಶಾಲಾ ಜೀವನದಲ್ಲೇ ವಿವಿಧ ಸ್ಪರ್ಧೆಗಳಲ್ಲಿ ಅವರು ಭಾಗಿಯಾಗಿದ್ದು ಹೆಸರು ಮಾಡಿದ್ದರು. ಸಿಆರ್ ಪಿಎಫ್ಗೆ ಸೇರಿದ ಬಳಿಕವೂ ಅವರು ಕ್ರೀಡಾಸಾಧನೆಯನ್ನು ಮೆರೆದಿದ್ದಾರೆ.
Related Articles
ಜುಬೈರ್ ಅವರಿಗೆ ಬಾಲ್ಯದಲ್ಲಿ ಪೊಲೀಸ್, ಸೇನೆಯವರು ಎಂದರೆ ಅದೇನೋ ಆಕರ್ಷಣೆ. ಪಠ್ಯಗಳಲ್ಲಿ ದೇಶಸೇವೆಯ, ಹೋರಾಟದ ವಿಚಾರಗಳನ್ನು ಓದುತ್ತಲೇ ಸೇನೆಗೆ ಸೇರಬೇಕು ಎಂಬ ಹಂಬಲ ಹೊಂದಿದ್ದರು. ಹಳೆನೇರೆಂಕಿ ಸರಕಾರಿ ಹಿ.ಪ್ರಾ.ಶಾಲೆ, ಬಳಿಕ ಹೈಸ್ಕೂಲ್ ಮತ್ತು ಪಿಯುಸಿಯನ್ನು ಶ್ರೀರಾಮಕುಂಜೇಶ್ವರ ಪ.ಪೂ. ಕಾಲೇಜಿನಲ್ಲಿ ಪೂರೈಸಿದ್ದಾರೆ. ಅನಂತರ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡಿದ್ದರು. ಜುಬೈರ್ ಪೊಲೀಸ್ ಆಗಬೇಕೆನ್ನುವ ಉತ್ಸಾಹದಿಂದ ಕರ್ನಾಟಕ ಪೊಲೀಸ್ ನೇಮಕಾತಿ ಪರೀಕ್ಷೆ ಬರೆದಿದ್ದು, ಇದೇ ವೇಳೆ ಸಿಆರ್‌ಪಿಎಫ್ ನೇಮಕಾತಿಗೂ ಅರ್ಜಿ ಸಲ್ಲಿಸಿದ್ದರು.
Advertisement
ಅಚ್ಚರಿ ಎಂದರೆ ಎರಡಕ್ಕೂ ಆಯ್ಕೆ ಯಾಗಿದ್ದರು. ಕೊನೆಗೆ ಸಿಆರ್ ಪಿಎಫ್ಅನ್ನೇ ಅವರು ಆಯ್ಕೆ ಮಾಡಿಕೊಂಡಿದ್ದು, ಅದರಂತೆ 2013 ರಿಂದ ದೇಶಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಿಆರ್‌ಪಿಎಫ್ ಸೇರ್ಪಡೆ ಬಳಿಕ ಹೈದರಾಬಾದ್‌ನಲ್ಲಿ ತರಬೇತಿ ಸಿಕ್ಕಿದ್ದು, ಬಳಿಕ ಮಹಾರಾಷ್ಟ್ರದ ಲಾತೂರ್‌ಗೆ ಪೋಸ್ಟಿಂಗ್ ಆಗಿತ್ತು. ಕಳೆದ ಎರಡೂವರೆ ವರ್ಷ ಗಳಿಂದ ಶ್ರೀನಗರದಲ್ಲಿ ಕರ್ತವ್ಯದಲ್ಲಿದ್ದಾರೆ.
ಫೆ. 13ರ ರೋಚಕ ಕಾರ್ಯಾರಣೆ ಅಂದು ಕಾಶ್ಮೀರದ ಕರಣ್‌ನಗರದ ಸೇನೆಯ ಎರಡು ಮೂರು ಬೆಟಾಲಿಯನ್‌ಗೆ ಲಷ್ಕರ್-ಎ-ತಯ್ಯಬಾ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ನುಗ್ಗಿದ್ದರು. ಹಾಗೆ ನುಗ್ಗಿದವರೇ ಪಕ್ಕದ ಕಟ್ಟಡವೊಂದರಲ್ಲಿ ಅಡಗಿದ್ದು, ಯೋಧರನ್ನು ಗುರಿಯಾಗಿಸಿ ನಿರಂತರ ಗುಂಡಿನ ದಾಳಿ ನಡೆಸುತ್ತಿದ್ದರು. ದಾಳಿ ಮಾಹಿತಿ ತಿಳಿದಾಕ್ಷಣ ಸಿಆರ್‌ಪಿಎಫ್ ಯೋಧರು ಕಾರ್ಯಾಚರಣೆಗಿಳಿದಿದ್ದು, ಕೂಡಲೇ ಸ್ಥಳವನ್ನು ಸುತ್ತುವರಿದಿದ್ದರು. ನಂತರ ಉಗ್ರರನ್ನು ಮಟ್ಟ ಹಾಕುವ ಕಾರ್ಯಾಚರಣೆ ನಡೆದಿದ್ದು, ತಂಡದಲ್ಲಿ ಜುಬೈರ್ ಅವರೂ ನೇಮಕವಾಗಿದ್ದರು. ಒಟ್ಟು 32 ಗಂಟೆ ಕಾರ್ಯಾಚರಣೆ ನಡೆದಿದ್ದು, ಶಸ್ತ್ರಾಸ್ತ್ರದೊಂದಿಗೆ ಬಂದಿದ್ದ ಉಗ್ರರನ್ನು ಮಟ್ಟ ಹಾಕಲಾಗಿತ್ತು. ಕಾರ್ಯಾಚರಣೆ ವೇಳೆ ಜುಬೈರ್ ಅವರ ತಂಡ ಮನೆಯೊಳಗೆ ನುಗ್ಗಿದ್ದು, ಉಗ್ರರನ್ನು ಎದೆಗೊಟ್ಟು ಎದುರಿಸಿತ್ತು. ಸಿಆರ್‌ಪಿಎಫ್ ಯೋಧರ ಬಲದ ಮುಂದೆ ಉಗ್ರರ ಆಟ ನಡೆಯದೇ ಸ್ಥಳದಲ್ಲೇ ಹೆಣವಾಗಿದ್ದರು. ಈ ಯಶಸ್ವಿ ಕಾರ್ಯಾಚರಣೆಯ ಈ ಸಾಧನೆಗಾಗಿ ಜುಬೈರ್ ಅವರ ತಂಡಕ್ಕೆ ಸಿಆರ್ ಪಿಎಫ್‌ನ ಮಹಾನಿರ್ದೇಶಕರಾದ ರಾಜೀವ್ ರಾಯ್ ಭಟ್ನಾಗರ್ ‘ಡಿಜಿ ಡಿಸ್ಕ್ ಆವಾರ್ಡ್’ ನೀಡಿ ಗೌರವಿಸಿದ್ದಾರೆ. ಜತೆಗೆ ಜನತೆಯಿಂದಲೂ ಅಪಾರ ಮನ್ನಣೆ ಸಿಕ್ಕಿದೆ. ಒಂದು ಪುಟ್ಟ ದೇಶಸೇವೆ
ರಕ್ಷಣಾ ಪಡೆಗಳಲ್ಲಿ ಕರಾವಳಿಯವರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ದೇಶಸೇವೆಗೈಯುವ ಉತ್ಸಾಹಿತರಿಗೆ ರಕ್ಷಣಾ ವಿಭಾಗ ಒಂದು ಅತ್ಯುತ್ತಮ ಅವಕಾಶ. ಇದು ಸಣ್ಣ ದೇಶ ಸೇವೆ. ರಕ್ಷಣಾ ಪಡೆಯಲ್ಲಿರುವ ಬಗ್ಗೆ ಹೆಮ್ಮೆ ಇದೆ .
– ಜುಬೈರ್ ಜನ್ಮ ಸಾರ್ಥಕ
ದೇಶಸೇವೆಗೈವ ಮಗನ ಆಸೆಗೆ ಲೋಪವಾಗಬಾರದೆಂದು ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದೇನೆ. ಮಗ ದೇಶಸೇವೆಗೈಯುತ್ತಿರುವುದು ನನಗೀಗ ಅತ್ಯಂತ ಹೆಮ್ಮೆಯ ವಿಚಾರ. ನನ್ನ ಜನ್ಮ ಸಾರ್ಥಕವಾಗಿದೆ.
-ಸಮೂನ್ ಬ್ಯಾರಿ, ಜುಬೈರ್ ತಂದೆ ಭವಿಷ್ಯ ಉಜ್ವಲವಾಗಿರಲಿ
ದೇಶಸೇವೆ ಮೂಲಕ ನಾಡಿನ ಹೆಸರನ್ನು ಉನ್ನತಿಗೇರಿಸಿದ ತಮ್ಮನ ಸಾಧನೆ ಬಣ್ಣಿಸಲು ಸಾಧ್ಯವಿಲ್ಲ. ಆತನ ಭವಿಷ್ಯ ಉಜ್ವಲವಾಗಿರಲಿ ಎಂಬ ಹಾರೈಕೆ ನಮ್ಮದು.
-ರಜಾಕ್, ಸಹೋದರ ಸದಾನಂದ ಆಲಂಕಾರು