ಗಡಿ ವಿಚಾರದಲ್ಲಿ ಮಹಾಜನ್ ವರದಿ ಅಂತಿಮ ಎಂಬುದನ್ನು ಸಾಕಷ್ಟು ಬಾರಿ ಪ್ರತಿಪಾದನೆ ಮಾಡಿದ್ದರೂ ಮಹಾರಾಷ್ಟ್ರದ ರಾಜಕಾರಣಿಗಳ ರಾಜಕೀಯ ಲಾಭದ ಕ್ಯಾತೆ ಮಾತ್ರ ನಿಂತಿಲ್ಲ. ಇದು ಒಂದು ರೀತಿಯಲ್ಲಿ ಕಾಲು ಕೆರೆದು ಜಗಳಕ್ಕೆ ಬರುವ ಗುಣದಂತಾಗಿದೆ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಇದ್ದಕ್ಕಿದ್ದಂತೆ ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು, ಆ ರೀತಿಯ ಕನಸನ್ನು ಶಿವಸೇನೆ ಸಂಸ್ಥಾಪಕ ಬಾಳ ಠಾಕ್ರೆಯವರು ಕಂಡಿದ್ದರು ಎಂದು ಹೇಳುವ ಮೂಲಕ ಕನ್ನಡಿಗರ ಸ್ವಾಭಿಮಾನ ಕೆಣಕುವ ಕೆಲಸ ಮಾಡಿದ್ದು ನಮ್ಮ ರಾಜ್ಯದ ನಾಯಕರು ಈ ವಿಚಾರದಲ್ಲಿ ಪಕ್ಷಾತೀತವಾಗಿ ಆಕ್ರೋಶ ಹೊರಹಾಕಿ ಬೆಳಗಾವಿ ಎಂದೆಂದಿಗೂ ಕರ್ನಾಟಕದ್ದೇ ಎಂದು ಹೇಳುವ ಮೂಲಕ ಮಹಾರಾಷ್ಟ್ರ ನಾಯಕರಿಗೆ ಸೂಕ್ತ ಉತ್ತರ ನೀಡಿದ್ದಾರೆ.
ರಾಜ್ಯದ ಗಡಿ ಭಾಗದ ಬೆಳಗಾವಿ ಕರ್ನಾಟಕದ ಕಿರೀಟ ಇದ್ದಂತೆ. ಯಾವುದೇ ಕಾರಣಕ್ಕೂ ಬೆಳಗಾವಿ ಸೇರಿದಂತೆ ಕರ್ನಾಟಕದ ಯಾವ ಭಾಗವನ್ನೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಆಡಳಿತಾರೂಢ ಬಿಜೆಪಿಯ ಸಚಿವರು ಶಾಸಕರು ಸಹಿತ ಎಲ್ಲರೂ ಪ್ರತಿಪಾದಿಸಿದ್ದಾರೆ. ಈ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ವಿಪಕ್ಷ ನಾಯಕರೂ ಸಹ ಈ ವಿಚಾರದಲ್ಲಿ ಖಡಕ್ ಆಗಿಯೇ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿರುವಂತೆ ಬೆಳಗಾವಿ, ಕಾರವಾರ, ನಿಪ್ಪಾಣಿ ಕರ್ನಾಟಕದ ಅವಿಭಾಜ್ಯ ಅಂಗಗಳು. ಇಲ್ಲಿನ ಕನ್ನಡಿಗರು- ಮರಾಠಿಗರು ಸಹೋದರರಂತೆ ಬದುಕುತ್ತಿದ್ದಾರೆ. ಮಹಾರಾಷ್ಟ್ರದ ನಾಯಕರು ಬೇಕೆಂದೆ ಆಗ್ಗಾಗ್ಗೆ ಇಂತಹ ಹೇಳಿಕೆ ನೀಡುವ ಮೂಲಕ ಕನ್ನಡಿಗರನ್ನು ಕೆರಳಿಸಿ ಕೆಣಕಿ ವಿವಾದ ಸೃಷ್ಟಿಸಿ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಸುವುದು ಹೊಸದಲ್ಲ. ಹಿಂದಿನಿಂದಲೂ ಗಡಿ ವಿಚಾರ ಬಂದಾಗಲೆಲ್ಲ ನಮ್ಮ ಸರಕಾರವೂ ಧೈರ್ಯವಾಗಿಯೇ ಮಹಾಜನ್ ವರದಿ ಅಂತಿಮ ಎಂದು ಹೇಳುತ್ತಲೇ ಬಂದಿದೆ. ಆದರೂ ಮಹಾರಾಷ್ಟ್ರದ ಕ್ಯಾತೆ ನಿಂತಿಲ್ಲ.
ಮುಂದೆಯೂ ರಾಜ್ಯ ಸರಕಾರ ಗಡಿ ವಿಚಾರದಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಿ ಯಾವುದೇ ಮುಲಾಜಿಲ್ಲದೆ ಕರ್ನಾಟಕ, ನಾಡು, ನುಡಿ, ನೆಲ-ಜಲದ ವಿಚಾರ ಬಂದಾಗ ನಮ್ಮ ಸಾರ್ವಭೌಮತ್ವ ಬಿಟ್ಟುಕೊಡಬಾರದು. ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ರಾಜಕೀಯ ಪಕ್ಷಗಳು ರಾಜಕೀಯ ಬದಿಗೊತ್ತಿ ರಾಜ್ಯದ ಪರ ನಿಂತು ಧ್ವನಿ ಎತ್ತಬೇಕು. ಆಗ ಮಾತ್ರ ಗಡಿ ವಿಚಾರದಲ್ಲಿ ಕಿಡಿಗೇಡಿತನ ಮಾಡುವ ಮಹಾರಾಷ್ಟ್ರದ ಕೆಲವು ರಾಜಕಾರಣಿಗಳಾಗಲಿ ಅಥವಾ ನಾಡು-ನುಡಿ ಜಲ ವಿಷಯದಲ್ಲಿ ಕ್ಯಾತೆ ತೆಗೆಯುವವರನ್ನು ಹದ್ದುಬಸ್ತಿನಲ್ಲಿಡಲು ಸಾಧ್ಯವಾಗುತ್ತದೆ. ಗಟ್ಟಿ ಧ್ವನಿಯ ಸಂದೇಶವೂ ರವಾನೆಯಾಗುತ್ತದೆ.
ರಾಜಕೀಯವಾಗಿ ಮಾತ್ರವಲ್ಲದೆಕನ್ನಡ ಪರ ಸಂಘಟನೆಗಳ ಸಹಿತ ಸಾಮಾಜಿಕ ಸಂಘ-ಸಂಸ್ಥೆಗಳೂ ಈ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಅಗತ್ಯವಿದೆ. ಇದು ಕನ್ನಡಿಗರ ಅಸ್ಮಿತೆಯ ಪ್ರಶ್ನೆಯಾಗಿರುವುದರಿಂದ ರಾಜ್ಯದ ಗಡಿ ಭಾಗಗಳನ್ನು ರಕ್ಷಿಸುವ ನಿಟ್ಟಿನಲ್ಲಿ ದನಿ ಎತ್ತಲೇಬೇಕಾಗಿದೆ. ರಾಜ್ಯದ ನೆಲ, ಜಲದ ಪ್ರಶ್ನೆ ಬಂದಾಗ ಕನ್ನಡಿಗರು ಏಕಕಂಠದಿಂದ ನೆರೆಯ ರಾಜ್ಯಗಳ ಕ್ಯಾತೆಗೆ ಪ್ರತ್ಯುತ್ತರ ನೀಡಬೇಕು. ರಾಜಕೀಯ ನಾಯಕರು ಮತ್ತು ಸ್ಥಳೀಯ ಭಾಷಾ ಸಂಘಟನೆಗಳು ಪದೇಪದೆ ಅಂತಾರಾಜ್ಯ ಗಡಿ ವಿವಾದಗಳನ್ನು ಕೆದಕುವ ಮೂಲಕ ಕನ್ನಡಿಗರನ್ನು ಕೆರಳಿಸುವ ಚಾಳಿಗೆ ಕಡಿವಾಣ ಹಾಕಲು ಕೇಂದ್ರ ಸರಕಾರ ಅಂತಾರಾಜ್ಯ ಗಡಿ ತಕರಾರುಗಳಿಗೆ ಶಾಶ್ವತ ಪರಿಹಾರ ಸೂತ್ರವನ್ನು ರೂಪಿಸುವ ಅಗತ್ಯವಿದೆ.