Advertisement

ತಿಹಾರ್ ಸೆಂಟ್ರಲ್ ಜೈಲು ಹೇಗಿದೆ ಗೊತ್ತಾ…ಘಟಾನುಘಟಿಗಳು ಇಲ್ಲಿ ಜೈಲುಕಂಬಿ ಎಣಿಸಿದ್ದರು!

10:42 AM Sep 21, 2019 | Nagendra Trasi |

ನವದೆಹಲಿ: ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರನ್ನು ಗುರುವಾರ ಬೆಳಗ್ಗೆ ಆರ್ ಎಂ ಎಲ್ ಆಸ್ಪತ್ರೆಯಿಂದ ತಿಹಾರ್ ಜೈಲಿನ ಸೆಲ್ ನಂ.7ಕ್ಕೆ ಸ್ಥಳಾಂತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಏಷ್ಯಾದಲ್ಲಿಯೇ ಅತೀ ದೊಡ್ಡ ಕಾರಾಗೃಹ ಎನ್ನಿಸಿಕೊಂಡ ತಿಹಾರ್ ಜೈಲು ಹೇಗಿದೆ..ಈವರೆಗೆ ತಿಹಾರ್ ಜೈಲುಕಂಬಿ ಎಣಿಸಿದ್ದ ಘಟಾನುಘಟಿ ರಾಜಕೀಯ ನಾಯಕರು, ನಟೋರಿಯಸ್ ಕ್ರಿಮಿನಲ್ ಗಳ ಸಂಕ್ತಿಪ್ತ ನೋಟ ಇಲ್ಲಿದೆ…

Advertisement

ತಿಹಾರ್ ಜೈಲು ಯಾವಾಗ ಆರಂಭವಾಯ್ತು?
1958ರಲ್ಲಿ ತಿಹಾರ್ ಎಂಬ ಗ್ರಾಮದಲ್ಲಿ ತಿಹಾರ್ ಸೆಂಟ್ರಲ್ ಜೈಲು ನಿರ್ಮಾಣವಾಗಿತ್ತು. ಇದು ಇಡೀ ದೇಶಕ್ಕೆ ಇದ್ದ ಏಕೈಕ ಸೆಂಟ್ರಲ್ ಜೈಲಾಗಿತ್ತು. ಆಗ ಈ ಜೈಲಿನಲ್ಲಿ ಕೇವಲ 1273 ಕೈದಿಗಳನ್ನು ಇರಿಸಲು ಮಾತ್ರ ಸಾಧ್ಯವಾಗುತ್ತಿತ್ತು. 1966ರಲ್ಲಿ ಈ ಜೈಲಿನ ಉಸ್ತುವಾರಿ ಹೊಣೆಗಾರಿಕೆ ದೆಹಲಿಗೆ ವರ್ಗಾವಣೆಗೊಂಡಿತ್ತು. 1984ರಲ್ಲಿ ಹೆಚ್ಚುವರಿ ಸೌಲಭ್ಯದೊಂದಿಗೆ ತಿಹಾರ್ ಜೈಲನ್ನು ನಿರ್ಮಾಣ ಮಾಡಲಾಗಿದ್ದು, ಬಳಿಕ ಇದು ಭಾರತದಲ್ಲಿಯೇ ಅತೀ ದೊಡ್ಡ ಕಾರಾಗೃಹ ಎನ್ನಿಸಿಕೊಂಡಿತ್ತು.

1961ರಲ್ಲಿ ತಿಹಾರ್ ಸೆಂಟ್ರಲ್ ಜೈಲಿನ ನಂ.2ರಲ್ಲಿ ಜೈಲಿನ ಫ್ಯಾಕ್ಟರಿ ಆರಂಭಿಸಲಾಗಿತ್ತು. ಅಲ್ಲಿ ಮರಗೆಲಸ, ಕೈಮಗ್ಗ, ಟೈಲರಿಂಗ್, ಕೆಮಿಕಲ್, ಪೇಪರ್ ತಯಾರಿಕೆ, ಬೇಕರಿ ಕೆಲಸಗಳನ್ನು ಕೈದಿಗಳಿಂದ ಮಾಡಿಸಲಾಗುತ್ತಿತ್ತು. 2009ರಲ್ಲಿ ಶೂ ಉತ್ಪಾದನಾ ಘಟಕ ಆರಂಭಿಸಲಾಗಿತ್ತು. ಪ್ರಸ್ತುತ 700 ಕೈದಿಗಳು ಶೂ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಪರಿಹಾರ ಧನ ನೀಡಲಾಗುತ್ತದೆ.

ಈಗ ತಿಹಾರ್ ಜೈಲಿನಲ್ಲಿ ಹತ್ತು ಸಾವಿರಕ್ಕೂ ಅಧಿಕ ಕೈದಿಗಳಿದ್ದಾರೆ. ಕಿರಣ್ ಬೇಡಿ ತಿಹಾರ್ ಜೈಲಿನ ಇನ್ಸ್ ಪೆಕ್ಟರ್ ಜನರಲ್ ಆಗಿದ್ದಾಗ ಹಲವಾರು ಕೈದಿಗಳ ಮನಃ ಪರಿವರ್ತನೆ ಮಾಡಿಸಿದ್ದರು. ಅಲ್ಲದೇ ತಿಹಾರ್ ಜೈಲಿನ ಹೆಸರನ್ನು ತಿಹಾರ್ ಆಶ್ರಮ ಎಂದು ಬದಲಾಯಿಸಿದದರು. ಅಷ್ಟೇ ಅಲ್ಲ ಕೈದಿಗಳು ಮತ್ತು ಜೈಲು ಸಿಬ್ಬಂದಿಗಳಿಗೆ ವಿಪಾಸ್ಸನಾ ಧ್ಯಾನ ಕಾರ್ಯಕ್ರಮ ಆರಂಭಿಸಿದ್ದರು. ಜೈಲಿನಲ್ಲಿದ್ದ ಹಲವಾರು ಕೈದಿಗಳು ದೂರಶಿಕ್ಷಣದ ಮೂಲಕ ಉನ್ನತ ಪದವಿ ಪಡೆದಿದ್ದರು.

ಘಟಾನುಘಟಿ ರಾಜಕಾರಣಿಗಳು ತಿಹಾರ್ ಜೈಲುಕಂಬಿ ಎಣಿಸಿದ್ದರು:
ಇಂದಿರಾಗಾಂಧಿ ಪುತ್ರ ಸಂಜಯ್ ಗಾಂಧಿ, ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್, ಖ್ಯಾತ ಉದ್ಯಮಿ ಸುಬ್ರತೋ ರಾಯ್, ಭೂಗತ ಪಾತಕಿ ಛೋಟಾ ರಾಜನ್, ಪತ್ರಕರ್ತ ಸುಧೀರ್ ಚೌದರಿ, ಇಂದಿರಾ ಹಂತಕರಾದ ಸತ್ವಂತ್ ಸಿಂಗ್, ಕೇಹರ್ ಸಿಂಗ್, ಅಂತಾರಾಷ್ಟ್ರೀಯ ಸರಣಿ ಹಂತಕ ಚಾರ್ಲ್ಸ್ ಶೋಭಾರಾಜ್, ಅಸ್ಸಾಂನ ಶಿಕ್ಷಣ ಸಚಿವ ರಿಪುನ್ ಬೋರಾ, ಎ.ರಾಜಾ, ವಿನೋದ್ ಗೋಯೆಂಕಾ, ಸುರೇಶ್ ಕಲ್ಮಾಡಿ, ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಅರವಿಂದ್ ಕೇಜ್ರಿವಾಲ್, ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದ ಮಿಲ್ಕಾ ಸಿಂಗ್, ಐಎನ್ ಎಕ್ಸ್ ಪ್ರಕರಣದಲ್ಲಿ ಪಿ.ಚಿದಂಬರಂ, ಅಕ್ರಮ ಹಣ ವರ್ಗಾವಣೆಯಲ್ಲಿ ಡಿಕೆ ಶಿವಕುಮಾರ್ ಹೀಗೆ ಘಟಾನುಘಟಿ ರಾಜಕಾರಣಿಗಳು, ಭೂಗತ ಪಾತಕಿಗಳು, ಖ್ಯಾತ ಉದ್ಯಮಿಗಳು ತಿಹಾರ್ ಜೈಲು ಕಂಬಿ ಎಣಿಸಿದ್ದರು.

Advertisement

ಬಿಗಿ ಭದ್ರತೆಯ ಸೆಂಟ್ರಲ್ ಜೈಲ್:
ಸುಮಾರು 400ಎಕರೆಯಲ್ಲಿ ನಿರ್ಮಾಣಗೊಂಡಿರುವ ಏಷ್ಯಾದ ಅತೀ ದೊಡ್ಡ ತಿಹಾರ್ ಜೈಲಿನಲ್ಲಿ ಬಿಗಿ ಬಂದೋಬಸ್ತ್ ಹೊಂದಿದೆ. ಭೂಗತ ಪಾತಕಿ ಛೋಟಾ ರಾಜನ್ ನಂತಹ ನಟೋರಿಯಸ್ ಕ್ರಿಮಿನಲ್ ಗಳನ್ನು ಕೋಣೆಯ ಸುತ್ತ ಸರ್ಪಗಾವಲು ಹಾಕಲಾಗುತ್ತದೆ. ಪ್ರತಿ ಸೆಲ್ ನಲ್ಲಿ ಟೆಲಿವಿಷನ್ ಇರುತ್ತದೆ. ಪ್ರತಿ ಸೆಲ್ ನ ಸುತ್ತ ರೌಂಡ್ ಕ್ಲಾಕ್ ಪೊಲೀಸ್ ಕಾವಲು. ಕೈದಿಗಳು ಕೇವಲ ತಮ್ಮ ಮನೆಯವರು ಮತ್ತು ವಕೀಲರು ಹಾಗೂ ಜೈಲು ಅಧಿಕಾರಿಗಳನ್ನು ಭೇಟಿಯಾಗಲು ಅವಕಾಶ ಇರುತ್ತದೆ.

ಕೈದಿಗಳಿಗೆ ಇರುವ ಸೌಲಭ್ಯ:
ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುವ ಕೈದಿಗಳಿಗೆ ಶುದ್ಧ ಕುಡಿಯುವ ನೀರು, ಕೇಬಲ್ ಟಿವಿ, ಒಳಾಂಗಣ, ಹೊರಾಂಗಣ ಗೇಮ್ಸ್, ಕ್ಯಾಂಟೀನ್, ಉನ್ನತ ದರ್ಜೆಯ ಶೌಚಾಲಯ, ಹಸಿರು ವಾತಾವರಣ, ಮೆಡಿಕಲ್ , ಕಾನೂನು ನೆರವು, ಆಧುನಿಕ ಅಡುಗೆ ಮನೆ, ಸಂದರ್ಶಕರ ಜತೆಗಿನ ಸಂದರ್ಶನಕ್ಕೆ ಅವಕಾಶದ ಸ್ಥಳ, ದೂರವಾಣಿ ಹೀಗೆ ಹಲವು ಸೌಲಭ್ಯಗಳು ಲಭ್ಯ.

Advertisement

Udayavani is now on Telegram. Click here to join our channel and stay updated with the latest news.

Next