Advertisement

ಸ್ಮಾಲ್‌ ವಂಡರ್‌

09:45 AM Dec 24, 2019 | mahesh |

ಇರುವುದರಲ್ಲೇ ನಮ್ಮ ಎಲ್ಲಾ ಇಷ್ಟಾರ್ಥಗಳನ್ನೂ ಪೂರೈಸಿಕೊಳ್ಳುವುದು ಜಾಣತನ. ವೈಭವಯುತ ಅನ್ನುವ ರೀತಿಯಲ್ಲಿ ಅಲ್ಲದಿದ್ದರೂ, ಅಂದವಾಗಿ ಇರಬೇಕು ಎಂಬುದು ಎಲ್ಲರ ಬಯಕೆಯೂ ಆಗಿರುತ್ತದೆ. ಜಾಗ ಚಿಕ್ಕದಿದ್ದರೂ ಜಾಣತನದಿಂದ, ಮನೆ ದೊಡ್ಡದಾಗಿ ಕಾಣುವಂತೆ ಕಟ್ಟಿಕೊಳ್ಳುವುದು ಸಾಧ್ಯ!

Advertisement

ಈಗಿನ ಕಾಲದಲ್ಲಿ ನಿವೇಶನ ಖರೀದಿಸುವುದೇ ದುಸ್ಸಾಹಸ. ಖರೀದಿಸಿದಮೇಲೆ, ಅದು ಸಣ್ಣಗಿದೆ, ಉದ್ದಕ್ಕಿದೆ ಎಂದು ತಲೆ ಬಿಸಿ ಮಾಡಿಕೊಳ್ಳಲು ಆಗುವುದಿಲ್ಲ. ಅವರವರಿಗೆ ಅವರವರ ಮನೆ ಸಾಕಷ್ಟು ವಿಶಾಲವಾಗಿ, ದೊಡ್ಡಮನೆಯಂತೆ ಇರಬೇಕು ಎಂಬ ಆಸೆ ಇರುತ್ತದೆ. ನಮ್ಮ ಬಳಿ ಹಣ, ಮಿತಿಯಲ್ಲೇ ಇದ್ದರೂ, ನಮ್ಮ ಅಗತ್ಯಗಳು ಹೆಚ್ಚಿರುತ್ತವೆ. ಇರುವುದರಲ್ಲೇ ನಮ್ಮ ಎಲ್ಲಾ ಇಷ್ಟಾರ್ಥಗಳನ್ನೂ ಪೂರೈಸಿಕೊಳ್ಳುವುದು ಜಾಣತನ. ಜೊತೆಗೆ, ವೈಭವಯುತ ಅನ್ನುವ ರೀತಿಯಲ್ಲಿ ಅಲ್ಲದಿದ್ದರೂ, ಅಂದವಾಗಿ ಇರಲೇಬೇಕು ಎಂಬುದು ಎಲ್ಲರ ಬಯಕೆಯಾಗಿರುತ್ತದೆ. ಕೆಲವೊಮ್ಮೆ ದೊಡ್ಡ ನಿವೇಶನಗಳಲ್ಲಿ ಕಟ್ಟಿದ ಮನೆಗಳೂ ಚಿಕ್ಕದಾಗಿ ಕಾಣಬಹುದು. ಹಾಗೆಯೇ, ಚಿಕ್ಕ ನಿವೇಶನದಲ್ಲಿ ಚೊಕ್ಕವಾಗಿ ಕಟ್ಟಿದ್ದು ದೊಡ್ಡಮನೆಯಂತೆ ಕಾಣಬಹುದು. ಹೀಗಾಗಲು ಮುಖ್ಯ ಕಾರಣ- ಗರಿಗೆದರಿ ನರ್ತಿಸುವ ನವಿಲಿನಂತೆ, ಇಷ್ಟುದ್ದ ಇರುವ ಹಕ್ಕಿಯ ಪುಕ್ಕ ತೆರೆದಿಟ್ಟಾಗ ಮಾರುದ್ದದ ಅರ್ಧಚಂದ್ರಾಕೃತಿಯಲ್ಲಿ ಹರಡಿ, ದೊಡ್ಡಗಾತ್ರದ ಅನುಭವ ಕೊಡುತ್ತದೆ. ಜೊತೆಗೆ ಆ ಒಂದು ಪ್ರಕೃತಿ ಸಹಜ ಕಲಾತ್ಮಕತೆಯೂ ಜೊತೆಗೂಡಿ ವಿಶೇಷವಾದ ಅನುಭವವನ್ನು ನೀಡುತ್ತದೆ. ಅದೇ ರೀತಿಯಲ್ಲಿ, ಮನೆಯ ವಿವಿಧ ಭಾಗಗಳ ಆಯ- ಅಳತೆ, ಒಳಾಂಗಣ ವಿನ್ಯಾಸ, ಬಣ್ಣಗಳ ಸಂಯೋಜನೆ, ಹಾಗೆಯೇ ಎಲಿವೇಷನ್‌ ವಿವರಗಳು- ಸಣ್ಣ ನಿವೇಶನದ ಮನೆಯನ್ನೂ ದೊಡ್ಡದಾಗಿ ಬಿಂಬಿಸಬಹುದು! ಹಾಗಾಗಿ, ನಾವು ಸಣ್ಣ ನಿವೇಶನದ ಮನೆಯ ವಿನ್ಯಾಸ ಮಾಡುವಾಗ ಡೀಟೇಲ್ಸ್‌ ಬಗ್ಗೆ ಹೆಚ್ಚು ಒತ್ತು ಕೊಡಬೇಕಾಗುತ್ತದೆ.

ಸ್ಥಳ ಹೊಂದಿಸುವ ರೀತಿ
ಇಪ್ಪತ್ತು ಅಡಿಗೆ ಮೂವತ್ತು ಅಡಿ ಇರುವ ನಿವೇಶನದಲ್ಲಿ, ಅಕ್ಕಪಕ್ಕ ಎರಡು ಹತ್ತು ಅಡಿ ಅಗಲದ ಕೋಣೆಗಳನ್ನು ವಿನ್ಯಾಸ ಮಾಡಲು ನೋಡಿದರೆ, ಅದು ಸೆಟ್‌ಬ್ಯಾಕ್‌(ತೊಂದರೆ)- ಏಕೆಂದರೆ, ಹಾಗೆ ಮಾಡುವುದರಿಂದ ನಿವೇಶನದ ತೆರೆದ ಸ್ಥಳವನ್ನೆಲ್ಲ ನುಂಗಿಹಾಕಿಬಿಡುತ್ತದೆ. ಹಾಗಾಗಿ, ನಾವು ಎಲ್ಲವನ್ನೂ ನೆಲಮಹಡಿಯಲ್ಲೇ ತುರುಕಲು ಪ್ರಯತ್ನ ಮಾಡದೆ, ಒಂದೆರಡು ಅಂತಸ್ತುಗಳಲ್ಲಿ ಮನೆಯನ್ನು ಮಾಡಲು ನಿರ್ಧರಿಸಬೇಕಾಗುತ್ತದೆ. ಮನೆಯಲ್ಲಿ ವಯೋವೃದ್ಧರಿದ್ದರೆ, ಮೆಟ್ಟಿಲು ಏರಿ ಇಳಿಯಲು ಕಷ್ಟ ಎಂದು ಒಂದು ಮಲಗುವ ಕೋಣೆಯನ್ನಾದರೂ ಕೆಳಗೆ ಇಟ್ಟುಕೊಳ್ಳುವುದು ಉತ್ತಮ. ಹೀಗೆ, ನಮ್ಮ ನಿವೇಶನದ ಮಿತಿಗಳನ್ನು ಅರ್ಥ ಮಾಡಿಕೊಂಡು, ಕೆಲವು ಅಗತ್ಯಗಳನ್ನು ಮೊದಲ ಮಹಡಿಗೆ ಹಾಕಿಕೊಂಡರೆ, ಆಗ ನಮ್ಮ ನಿವೇಶನದ ವಿಸ್ತೀರ್ಣ ಇಪ್ಪತ್ತು ಅಡಿಗೆ ಮೂವತ್ತು ಅಡಿ ಮಿತಿಯಲ್ಲಿ ಇರುವ ಬದಲು, ನಲವತ್ತು ಅಡಿಗೆ ಮೂವತ್ತು ಅಡಿ ಇದ್ದಂತೆ ಆಗಿಬಿಡುತ್ತದೆ! ಈ ರೀತಿಯಾಗಿ ವಿವಿಧ ಕೋಣೆಗಳನ್ನು ವಿವಿಧ ಮಹಡಿಗಳಿಗೆ ಹಂಚುವ ಮೂಲಕ, ಸಣ್ಣ ನಿವೇಶನದಲ್ಲೂ ದೊಡ್ಡ ದೊಡ್ಡ ರೂಮುಗಳು ಬರುವಂತೆ ಮಾಡಬಹುದು.

ವಿವಿಧ ಕೋಣೆಗಳ ವಿವರ- ಡೀಟೈಲಿಂಗ್‌
ಗಾಢಬಣ್ಣ, ಸ್ಥಳವನ್ನು ಕಡಿಮೆಯಿರುವಂತೆ ತೋರುತ್ತದೆ. ಹಾಗೆಯೇ, ತೆಳು ಬಣ್ಣಗಳು ಇರುವ ಸ್ಥಳವನ್ನೇ ವಿಸ್ತಾರವಾಗಿ ಕಾಣುವಂತೆ ಮಾಡುತ್ತವೆ! ಹಾಗೆಯೇ ಗೋಡೆ ಹಾಗೂ ಸೂರು- ಸೀಲಿಂಗ್‌ ಸೇರುವ ಮೂಲೆಯಲ್ಲಿ ಕಾನೀಸ್‌ ಮಾದರಿಯ ವಿನ್ಯಾಸವನ್ನು ಪ್ಲಾಸ್ಟರ್‌ ಆಫ್ ಪ್ಯಾರಿಸ್‌ನಲ್ಲಿ ಮಾಡಿದರೆ, ಅದೂ ಕೂಡ ಸ್ಥಳವನ್ನು ಹಿಗ್ಗಿದಂತೆ ಕಾಣಿಸುತ್ತದೆ. ಸೂರು ಗೋಡೆ ಸೇರುವ ಸ್ಥಳದಲ್ಲಿ, ಒಂದು ಗಾಡಿ ಅಂದರೆ, ಅರ್ಧ ಇಂಚಿಗೆ ಒಂದು ಇಂಚಿನಷ್ಟು ಪಟ್ಟಿಯನ್ನು ಸಿಮೆಂಟ್‌ನಲ್ಲಿ ಇಲ್ಲವೇ ಸುಮ್ಮನೆ ಒಂದು ಗೆರೆಯನ್ನು ಗಾಢ ಬಣ್ಣದಲ್ಲಿ ಬಳಿದರೂ- ಸೂರು ತೇಲುತ್ತಿರುವ ಅನುಭವ ನೀಡಿ, ಸ್ಥಳ ಹಿಗ್ಗಿದಂತೆ ಅನಿಸುತ್ತದೆ! ಲವಲವಿಕೆಯಿಂದ ಕೂಡಿದ ವಿವಿಧ ಬಣ್ಣಗಳ ಚಿತ್ತಾರವೂ ಸಣ್ಣ ಸ್ಥಳವನ್ನು ಹಿಗ್ಗಿಸುವ ಗುಣ ಹೊಂದಿರುತ್ತದೆ. ಸಣ್ಣ ನಿವೇಶನದಲ್ಲಿ ಎಲ್ಲವನ್ನೂ ಕಟ್ಟಿಬಿಟ್ಟರೆ, ತೆರೆದ ಸ್ಥಳವೇ ಇಲ್ಲದಿದ್ದರೆ, ಗಾಳಿ ಬೆಳಕು ಕಡಿಮೆಯಾಗಿ, ಇರುವ ಸ್ಥಳವೂ ಕುಗ್ಗಿದಂತೆ ತೋರುತ್ತದೆ. ಆದ್ದರಿಂದ ನಮ್ಮ ನಿವೇಶನ ಎಷ್ಟೇ ಚಿಕ್ಕದಿದ್ದರೂ, ಒಂದಷ್ಟು ತೆರೆದ ಸ್ಥಳವನ್ನು ನೀಡಲು ಮರೆಯಬಾರದು.

ಅನಗತ್ಯವಾಗಿ ಸ್ಥಳ ವೇಸ್ಟ್‌ ಆಗದಂತೆ ನೋಡಿಕೊಳ್ಳಿ. ಚದರ ಅಡಿಗೆ ಸಾವಿರಾರು ರೂಪಾಯಿ ಕೊಟ್ಟು ಖರೀದಿಸಿದ ನಿವೇಶನದ ಪ್ರತಿ ಸಣ್ಣ ಸ್ಥಳವನ್ನೂ ಯೋಚಿಸಿ ವಿನ್ಯಾಸ ಮಾಡಿದರೆ, ನಮ್ಮ ಎಲ್ಲ ಅಗತ್ಯಗಳನ್ನೂ ಸರಿಹೊಂದಿಸಿಕೊಳ್ಳುವುದರ ಜೊತೆಗೆ, ದೊಡ್ಡಮನೆಯಂತೆ ಕಾಣುವ ಹಾಗೆಯೂ ಮಾಡಬಹುದು!

Advertisement

ಕಿಟಕಿಗಳ ಮಹಾತ್ಮೆ
ಸಣ್ಣ ಕೋಣೆಗಳಲ್ಲಿ ಬೆಡ್‌ ಅಳವಡಿಸಲು ಒಂದಷ್ಟು ಗೋಡೆ ಸ್ಥಳ ವ್ಯಯವಾದರೆ, ವಾರ್ಡ್‌ರೋಬ್‌, ಸ್ಟಡಿ ಟೇಬಲ್‌ ಇತ್ಯಾದಿ ಅಳವಡಿಸಲು ಮತ್ತೂಂದಷ್ಟು ಸ್ಥಳ ವ್ಯಯಿಸಿದ ನಂತರ, ಕಿಟಕಿಗಳನ್ನು ಇಡಲು ಸ್ಥಳ ಇಲ್ಲದಂತೆ ಆಗಿಬಿಡುತ್ತದೆ. ಹಾಗಾಗಿ, ಆಯಾ ಸ್ಥಳದ ಪೀಠೊಪಕರಣಗಳನ್ನು ಅಳವಡಿಸುವ ವಿನ್ಯಾಸವನ್ನು ಅಂತಿಮಗೊಳಿಸುವ ಮೊದಲು, ಕಿಟಕಿಗಳ ಸ್ಥಳವನ್ನೂ ಗುರುತಿಸುವುದು ಉತ್ತಮ. ಒಂದು ಕೋಣೆಯ ವಿಸ್ತೀರ್ಣದ ಕಾಲುಭಾಗದಷ್ಟು ಅಂದರೆ, ಹತ್ತು ಅಡಿಗೆ ಹತ್ತು ಅಡಿ ಕೋಣೆಯ ಕಿಟಕಿಯ ವಿಸ್ತೀರ್ಣ ಇಪ್ಪತ್ತೈದು ಚದರ ಅಡಿಯಷ್ಟಾದರೂ ಇದ್ದರೆ ಒಳ್ಳೆಯದು. ಅಂದರೆ, ಆರು ಅಡಿಗೆ ನಾಲ್ಕು ಅಡಿ ಇಲ್ಲವೆ ಕಡೇ ಪಕ್ಷ, ಐದು ಅಡಿಗೆ ನಾಲ್ಕೂವರೆ ಅಡಿಯಷ್ಟಾದರೂ ಇರಬೇಕಾಗುತ್ತದೆ. ಇದು, ಆಯಾ ನಗರಪ್ರದೇಶದ ಕಾರ್ಪೊರೇಷನ್‌ ನಿಯಮಾವಳಿಯ ಪ್ರಕಾರ ಕೂಡ ಕಡ್ಡಾಯವಾಗಿರುತ್ತದೆ. ಸಾಮಾನ್ಯವಾಗಿ, ಒಂದು ದೊಡ್ಡ ಕಿಟಕಿ ನೀಡುವ ಬದಲು, ಎರಡು ಕೊಡುವುದು ಉತ್ತಮ. ಕಿಟಕಿಗಳನ್ನು ಒಂದೇ ಗೋಡೆಗೆ ಅಳವಡಿಸುವ ಬದಲು, ಅಕ್ಕಪಕ್ಕದ ಗೋಡೆಗಳಿಗೆ ಅಳವಡಿಸಿದರೆ, ಕ್ರಾಸ್‌ ವೆಂಟಿಲೇಷನ್‌- ಗಾಳಿ ಹರಿವು ಹೆಚ್ಚಾಗುತ್ತದೆ. ಮೂರು ಅಡಿಗೆ ನಾಲ್ಕೂವರೆ ಅಡಿಯ ಎರಡು ಕಿಟಕಿಗಳನ್ನು, ಸುಮಾರು ನೂರು ಚದರ ಅಡಿಯ ಕೋಣೆಗಳಿಗೆ ಹಾಕಿದರೆ, ಬೇಸಿಗೆಯಲ್ಲೂ ಮನೆ ತಂಪಾಗಿರುತ್ತದೆ. ಜೊತೆಗೆ, ಆರೋಗ್ಯದ ದೃಷ್ಟಿಯಿಂದಲೂ ಉತ್ತಮ.

ಗಾಳಿ ಬೆಳಕಿನ ಚಮತ್ಕಾರ
ಮನೆಯ ಕೆಲ ಭಾಗಗಳನ್ನು, ಮುಖ್ಯವಾಗಿ ಲಿವಿಂಗ್‌ರೂಮ್‌ಅನ್ನು ಮಾಮೂಲಿ ಹತ್ತು ಅಡಿಗೆ ಮಿತಿಗೊಳಿಸದೆ, ಒಂದೂವರೆ ಸೂರು ಎತ್ತರ- ಹದಿನೈದು ಅಡಿ ಇಲ್ಲವೆ ಡಬಲ್‌ ಹೈಟ್‌- ಎರಡು ಮಹಡಿ ಎತ್ತರ ಇಡಿ. ಆಗ, ಸಹಜವಾಗಿಯೇ ಮನೆಗೆ ಆ ಒಂದು ದೊಡ್ಡ ಸ್ಥಳದ ಅನುಭವ ಸಿಗುತ್ತದೆ. ಈ ಮಾದರಿಯ ಮನೆಗಳನ್ನು “ಡುಪ್ಲೆ’ ಮನೆ ಅಥವ ಬಂಗಲೆ ಎನ್ನಲಾಗುತ್ತದೆ. ಕೆಲವೊಮ್ಮೆ ಡೈನಿಂಗ್‌ ಭಾಗವನ್ನೂ ಎತ್ತರಿಸಿಕೊಳ್ಳಬಹುದು, ಇಲ್ಲದಿದ್ದರೆ ಒಂದಷ್ಟು ತೆರೆದ ಸ್ಥಳವನ್ನು ಕೋರ್ಟ್‌ಯಾರ್ಡ್‌ ಮಾದರಿಯಲ್ಲಿ ಆಕಾಶಕ್ಕೆ ತೆರೆದಿಟ್ಟರೂ, ಮನೆಯೊಳಗೆ ಧಾರಾಳವಾಗಿ ಗಾಳಿ ಬೆಳಕು ಹರಿದುಬರುವುದರ ಜೊತೆಗೆ, ಎಲ್ಲವೂ ವಿಸ್ತಾರವಾಗಿರುವಂತೆ ಕಂಡುಬರುತ್ತದೆ. ಇದ್ಯಾವುದೂ ಸಾಧ್ಯವಾಗದಿದ್ದರೂ, ಮನೆ ಎಂದಮೇಲೆ ಅದಕ್ಕೊಂದು ಮೆಟ್ಟಿಲು ಇರಲೇಬೇಕಲ್ಲ! ಆ ಸ್ಥಳವನ್ನು ಸ್ವಲ್ಪ ತೆರದಂತೆ ವಿನ್ಯಾಸ ಮಾಡಿಕೊಂಡರೆ, ಮನೆಗೆ ದೊಡ್ಡಮನೆಯ ನೋಟ ದೊರೆಯುತ್ತದೆ. ಮೆಟ್ಟಿಲು ಹಾಗೂ ಏರುವಿಕೆಗೆ ಸಾಂಪ್ರದಾಯಿಕವಾಗಿ ನಾನಾ ಆರ್ಥಗಳಿದ್ದು, ಮನೆಗೆ ದೊಡ್ಮನೆ ನೋಟ ನೀಡುವಲ್ಲಿ ಮೆಟ್ಟಿಲುಗಳು ಮುಖ್ಯ ಪಾತ್ರ ವಹಿಸಬಲ್ಲವು!

ಹೆಚ್ಚಿನ ಮಾಹಿತಿಗೆ: 9844132826

– ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next