ಕನ್ನಡ ಚಿತ್ರರಂಗದ ಖುಷಿಯಾಗಿದೆ. ಸಿನಿಮಾ ಮಂದಿಯ ಮೊಗದಲ್ಲಿ ನಗು ಮೂಡಿದೆ. ಅದಕ್ಕೆ ಕಾರಣ ಇತ್ತೀಚೆಗೆ ಸಿಗುತ್ತಿರುವ ಗೆಲುವು. ಬಿಡುಗಡೆಯಾದ ಸಿನಿಮಾಗಳು ಗೆಲುವಿನ ದಾರಿಯಲ್ಲಿ ಸಾಗುತ್ತಿರುವುದರಿಂದ ಇದು ಮತ್ತೂಂದಿಷ್ಟು ಮಂದಿಗೆ ಸ್ಫೂರ್ತಿಯಾಗುತ್ತಿದೆ. ಒಂದು ಗೆಲುವು ಅನೇಕರಿಗೆ ವಿಶ್ವಾಸವನ್ನು ತುಂಬುವುದರಲ್ಲಿ ಎರಡು ಮಾತಿಲ್ಲ. ಸದ್ಯ ಕನ್ನಡದಲ್ಲಿ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುತ್ತಿವೆ. ಬಿಡುಗಡೆ ಯಾದ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕ ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಮೂಲಕ ಯಶಸ್ಸು ಸಿಗುತ್ತಿದೆ.
ಇತ್ತೀಚೆಗೆ ಬಿಡುಗಡೆಯಾದ “ಗರುಡ ಗಮನ ವೃಷಭ ವಾಹನ’, “ಬಡವ ರಾಸ್ಕಲ್’, “ರೈಡರ್’, “ಸಲಗ’, “ಸಖತ್’, “ಬೈ ಟು ಲವ್’, “ಲವ್ ಮಾಕ್ಟೇಲ್-2′, “ಏಕ್ ಲವ್ ಯಾ’, “ಓಲ್ಡ್‌ಮಾಂಕ್’… ಗೆಲುವಿನ ನಗೆ ಬೀರಿದ ಸಿನಿಮಾಗಳ ಪಟಿ ಬೆಳೆಯುತ್ತಲೇ ಹೋಗುತ್ತದೆ. ಅದರಲ್ಲೂ ಕಡಿಮೆ ಬಜೆಟ್‌ನಲ್ಲಿ ಕಂಟೆಂಟ್ ಇಟ್ಟುಕೊಂಡು ಬಂದ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲ್ಲುವ ಮೂಲಕ ಚಿತ್ರರಂಗಕ್ಕೆ ಬರುವ ಹೊಸಬರಿಗೆ ಪ್ರೇರಣೆಯಾಗುತ್ತಿವೆ. ಕೋವಿಡ್‌ನಿಂದಾಗಿ ನಲುಗಿ ಹೋಗಿದ್ದ ಕನ್ನಡ ಚಿತ್ರರಂಗಕ್ಕೆ ಇಂತಹ ಇನ್ನಷ್ಟು ಗೆಲುವುಗಳ ಅಗತ್ಯವಿದೆ.
ಇಲ್ಲಿ ಗಮನಿಸಬೇಕಾದ ಮತ್ತೂಂದು ಪ್ರಮುಖ ಅಂಶವೆಂದರೆ ದೊಡ್ಡ ಸ್ಟಾರ್ ಹಾಗೂ ಬಿಗ್ ಬಜೆಟ್ ಅಲ್ಲದ ಸಿನಿಮಾಗಳು ಹಿಟ್ ಆಗುವ ಜೊತೆಗೆ ಕೋಟಿ ಕೋಟಿ ಬಾಚುತ್ತಿವೆ. ಅದಕ್ಕೆ ಉದಾಹರಣೆಯಾಗಿ ಹೇಳಬೇಕಾದರೆ ಡಾರ್ಲಿಂಗ್ ಕೃಷ್ಣ ನಟನೆಯ “ಲವ್ ಮಾಕ್ಟೇಲ್’, ರಾಜ್ ಬಿ ಶೆಟ್ಟಿಯ “ಗರುಡ ಗಮನ ವೃಷಭ ವಾಹನ’, ಡಾಲಿ ಧನಂಜಯ್ ನಟನೆಯ “ಬಡವ ರಾಸ್ಕಲ್’… ಹೀಗೆ ಇನ್ನೂ ಒಂದಷ್ಟು ಚಿತ್ರಗಳು ಈ ಬಾರಿ ಕಲೆಕ್ಷನ್ ವಿಷಯದಲ್ಲಿ ಗಮನ ಸೆಳೆದಿವೆ. ಹಾಗೆ ನೋಡಿದರೆ ಈ ಸಿನಿಮಾಗಳು ಬಿಗ್ ಬಜೆಟ್ ಸಿನಿಮಾಗಳೇನಲ್ಲ. ಸಿನಿಮಾದ ಕಥೆಗೆ ಏನು ಬೇಕೋ, ಅದನ್ನ ನೀಟಾಗಿ ಕಟ್ಟಿಕೊಟ್ಟು, ಪ್ರೇಕ್ಷಕರ ಮುಂದೆ ತರಲಾಗಿತ್ತು. ಆದರೆ, ಚಿತ್ರದಲ್ಲಿನ ಕಂಟೆಂಟ್ ಮಜವಾಗಿತ್ತು. ಇವತ್ತಿನ ಪ್ರೇಕ್ಷಕರಿಗೆ ಬೇಕಾಗಿರೋದು, ಕಂಟೆಂಟ್ ಇಲ್ಲದ ಕೋಟಿ ಕೋಟಿ ಹಾಕಿ ನಿರ್ಮಿಸಿದ ಚಿತ್ರಗಳಲ್ಲ. ಬದಲಾಗಿ, ಎರಡು ಚಿತ್ರಮಂದಿರದಲ್ಲಿ ನೀಟಾಗಿ ಕೂರಿಸುವ ಬೋರ್ ಆಗದಂತೆ ಹಿಡಿದಿಡುವ ಸಿನಿಮಾಗಳು. ಇಷ್ಟನ್ನು ಕೊಟ್ಟರೆ ಪ್ರೇಕ್ಷಕ ಖುಷಿಯಿಂದ ಸಿನಿಮಾವನ್ನು ಕಣ್ತುಂಬಿಕೊಂಡು “ಗೆಲುವಿನತ್ತ’ ಹಾದಿ ಮಾಡಿಕೊಡುತ್ತಾನೆ.
ಇದನ್ನೂ ಓದಿ:‘ಜೇಮ್ಸ್’ ಟು ‘ತೋತಾಪುರಿ’; ಬೇಸಿಗೆಯಲ್ಲಿ ಮನರಂಜನೆಯ ಮಹಾ ಪರ್ವ
ಹಾಗೆ ನೋಡಿದರೆ ಸದ್ಯ ಕನ್ನಡ ಚಿತ್ರರಂಗಕ್ಕೆ ಈ ತರಹದ ಸಿನಿಮಾಗಳ ಗೆಲುವಿನ ಅಗತ್ಯವಿದೆ. ಸ್ಟಾರ್ ಸಿನಿಮಾಗಳ ಗೆಲುವು ಚಿತ್ರರಂಗಕ್ಕೆ ಎಷ್ಟು ಮುಖ್ಯವೋ, ಈ ತರಹದ ಮೀಡಿಯಂ ಬಜೆಟ್ ಸಿನಿಮಾಗಳ, ನಟರ ಸಿನಿಮಾಗಳ ಗೆಲುವು ಕೂಡಾ ಅಷ್ಟೇ ಮುಖ್ಯ. ಸ್ಟಾರ್‌ಗಳು ಎರಡು ವರ್ಷಕ್ಕೊಂದು ಸಿನಿಮಾ ಮಾಡುತ್ತಾರೆ, ಈ ತರಹ ಆಗುವುದರಿಂದ ಚಿತ್ರರಂಗದ ಗೆಲುವಿನ ಮೇಲೆ ಪರಿಣಾಮ ಬೀರುತ್ತದೆ ಎಂಬ ಮಾತು ಆಗಾಗ ಕೇಳಿಬರುತ್ತಿದೆ. ಜೊತೆಗೆ ಸ್ಟಾರ್‌ಗಳು ವರ್ಷಕ್ಕೆರಡು ಸಿನಿಮಾ ಮಾಡಬೇಕೆಂಬ ಒತ್ತಾಯ ಕೂಡಾ ಇದೆ. ಹೀಗಿರುವಾಗ ಬಿಗ್ ಸ್ಟಾರ್ ಸಿನಿಮಾಗಳ ಜೊತೆ ಇತರ ನಟರ ಹಾಗೂ ಮೀಡಿಯಂ ಬಜೆಟ್ ಚಿತ್ರಗಳು ಗೆಲ್ಲುವುದರಿಂದ ನಿರ್ಮಾಪಕರು ಕೂಡಾ ಈ ತರಹದ ಸಿನಿಮಾ ಮಾಡಲು ಮನಸ್ಸು ಮಾಡುತ್ತಾರೆ.
ಟ್ರೇಲರ್, ಟೀಸರ್ ಹಬ್ಬ: ಸಿನಿಮಾಗಳ ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಟೀಸರ್, ಟ್ರೇಲರ್, ಸಾಂಗ್, ಫಸ್ಟ್‌ಲುಕ್‌ಗಳು ಸಾಲು ಸಾಲು ಬಿಡುಗಡೆಯಾಗುತ್ತಿದ್ದು, ಈ ಮೂಲಕ ತಮ್ಮ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನದಲ್ಲಿ ತೊಡಗಿವೆ. ಈಗಾಗಲೇ ಪುನೀತ್ ರಾಜ್‌ಕುಮಾರ್ ಅವರ “ಜೇಮ್ಸ್’ ಚಿತ್ರದ ಟೀಸರ್ ಹಾಗೂ ಬಿಡುಗಡೆ ಯಾಗಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಜೊತೆಗೆ ‘, “ರಾಣಾ’, “ಮ್ಯಾಟ್ನಿ’, “ತೋತಾಪುರಿ’, “ಶಿವ 143”, “ಶೋಕಿವಾಲ’, “ಗೌಳಿ’, “ನೋಡಿ ಸ್ವಾಮಿ ಇವನು ಇರೋದೇ ಹೀಗೆ’, “ಗುರು ಶಿಷ್ಯರು’, “ಅದ್ಧೂರಿ ಲವರ್’, “ಅತ್ಯುತ್ತಮ’ ಚಿತ್ರಗಳ ಟ್ರೇಲರ್, ಟೀಸರ್, ಸಾಂಗ್ ಹಾಗೂ ಫಸ್ಟ್‌ಲುಕ್ ರಿಲೀಸ್ ಆಗಿ ಸದ್ದು ಮಾಡುತ್ತಿವೆ. ಬಿಡುಗಡೆಯಾಗಿರುವ ಒಂದೊಂದು ಟ್ರೇಲರ್, ಟೀಸರ್ ಕೂಡಾ ಪ್ರೇಕ್ಷಕರನ್ನು ಸೆಳೆಯುವಂತಿದೆ. ಈ ಮೂಲಕ ಭವಿಷ್ಯದ ಭರವಸೆ ಹೆಚ್ಚಿದೆ.
ರವಿಪ್ರಕಾಶ್ ರೈ