ಮೂಡುಬಿದಿರೆ: ತಾಲೂಕಿನ ಪಡುಮಾರ್ನಾಡು ಗ್ರಾಮದ ತಂಡ್ರಕೆರೆ ಗಂಪದಡ್ಕ ಸರಕಾರಿ ಜಾಗದಲ್ಲಿ ಅಕ್ರಮ ಗ್ರಾನೈಟ್ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಮೂಡುಬಿದಿರೆ ತಹಶೀಲ್ದಾರ್ ಪುಟ್ಟರಾಜು ನೇತೃತ್ವದ ತಂಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ರವಿವಾರ ರಾತ್ರಿ ದಾಳಿ ನಡೆಸಿ ಭಾರೀ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸುಮಾರು ಮೂರು ವಾರಗಳಿಂದ ಗಣಿಗಾರಿಕೆ ನಡೆಯುತ್ತಿತ್ತು. ಇದಕ್ಕೆ ಹೊಂದಿಕೊಂಡು ಖಾಸಗಿ ಜಮೀನು ಇದ್ದು, ಈ ಜಾಗದ ಮೂಲಕ ಗಣಿಗಾರಿಕೆ ಸ್ಥಳಕ್ಕೆ ಹೋಗುವ ವ್ಯವಸ್ಥೆ ಮಾಡಲಾಗಿತ್ತು. ಮೇಲ್ನೋಟಕ್ಕೆ ಪಟ್ಟಾ ಜಾಗದಲ್ಲೆ ಗಣಿಗಾರಿಕೆ ನಡೆಯುತ್ತಿದೆ ಎಂದು ಕೆಲವರು ಭಾವಿಸಿದ್ದರು. ಇಲ್ಲಿ ಸುಮಾರು ಮೂರು ವಾರಗಳಿಂದ ತೆಗೆಯುತ್ತಿದ್ದ ಗ್ರಾನೈಟ್ ಕಲ್ಲುಗಳನ್ನು ಹೊರ ರಾಜ್ಯಕ್ಕೆ ಸಾಗಿಸಲಾಗುತ್ತಿತ್ತೆನ್ನಲಾಗಿದೆ.
ದಾಳಿಯ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾನೈಟ್ ತುಂಬಿದ್ದ ಲಾರಿಯನ್ನು ಚಾಲಕ ಅಮನೊಟ್ಟು ಒಳರಸ್ತೆಯಲ್ಲಿ ಕೊಂಡೊಯ್ದು ತಪ್ಪಿಸಿಕೊಳ್ಳಲೆತ್ನಿಸಿದ್ದ ಎನ್ನಲಾಗಿದೆ. ಅಧಿಕಾರಿಗಳು ಹಿಂಬಾಲಿಸಿಕೊಂಡು ಹೋಗಿ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಲಾರಿಯಲ್ಲಿ ಎರಡು ಬೃಹತ್ ಗ್ರಾನೈಟ್ ಕಲ್ಲುಗಳಿದ್ದವು. ಗಣಿಗಾರಿಕೆ ಸ್ಥಳದಿಂದ ಒಂದು ಹಿಟಾಚಿ ಹಾಗೂ ಕಲ್ಲುಕೊರೆಯುವ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೊಂದು ಲಾರಿಯನ್ನು ಎಲ್ಲೋ ಅಡಗಿಸಿಡಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಪ್ರವಾಹ ಪೀಡಿತ ಪ್ರದೇಶಗಳಿಗೆ ಇಲಾಖಾ ಸಚಿವರ ಭೇಟಿ: ಸಿಎಂ
ಜಾಗದ ಮಾಲಕ ಮತ್ತು ಹಾಸನ ಮೂಲದ ಗಣಿ ಉದ್ಯಮಿ ಈ ಪ್ರಕರಣದ ಹಿಂದಿರುವುದಾಗಿ ತಿಳಿದುಬಂದಿದೆ. ಮುಂದಿನ ಕ್ರಮಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖಾಧಿಕಾರಿಗಳಿಗೆ ಪ್ರಕರಣವನ್ನು ವರ್ಗಾಯಿಸಲಾಗಿದೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ತೆರೆಮರೆಯಿಂದ ಪ್ರಯತ್ನಗಳಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.