Advertisement
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ನಾನಾ ಸ್ವಯಂ ಸೇವಾಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬ್ರೈಲ್ ದಿನಾಚರಣೆ ಸಮಾರಂಭದಲ್ಲಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಸಾಂಕೇತಿಕವಾಗಿ 50 ಮಂದಿ ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ವಿತರಿಸಿದರು.
Related Articles
Advertisement
ದೃಷ್ಟಿ ವಿಕಲಚೇತನರು ತಮ್ಮಲ್ಲಿ ನ್ಯೂನತೆ ಇದೆ ಎಂದು ಮಾನಸಿಕವಾಗಿ ಕುಗ್ಗಬಾರದು. ಭೌತಿಕ ದೃಷ್ಟಿಯಿಲ್ಲದಿದ್ದರೂ ಅಂತಃದೃಷ್ಟಿಯಿಂದಲೇ ಆತ್ಮವಿಶ್ವಾಸದಿಂದ ಜೀವನ ನಡೆಸುವುದನ್ನು ರೂಢಿಸಿಕೊಳ್ಳಬೇಕು. ಸರ್ಕಾರವು ವಿಕಲಚೇತನರನ್ನೂ ರಾಷ್ಟ್ರದ ಸಂಪತ್ತು ಎಂದು ಪರಿಗಣಿಸಿ, ಅಗತ್ಯ ಸೌಲಭ್ಯ ಕಲ್ಪಿಸುತ್ತಿದೆ. ಸೌಲಭ್ಯ ಬಳಸಿಕೊಂಡು ಮುಂದೆ ದೇಶಕ್ಕೆ ಕೊಡುಗೆ ನೀಡುವಷ್ಟರ ಮಟ್ಟಿಗೆ ಸಬಲರಾಗಬೇಕು ಎಂದು ಹೇಳಿದರು.
ಇದೇ ವೇಳೆ ದೃಷ್ಟಿ ವಿಕಲಚೇತನರು ನಡೆಸಿಕೊಟ್ಟ ಗೀತ ಗಾಯನಕ್ಕೆ ಸಭಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಧಾರವಾಡದ ಮನಗುಂದಿಯ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮಿ, ಮಾತೃಛಾಯಾ ಸಂಸ್ಥೆಯ ರಾಜ್ಯಶ್ರೀ ಸತೀಶ್, ಪರಶಿವಮೂರ್ತಿ, ಅಮರನಾಥ್ ಇತರರು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದಲ್ಲೂ ವಿತರಣೆ: ರಾಜ್ಯದಲ್ಲಿ 1000ಕ್ಕೂ ಹೆಚ್ಚು ದೃಷ್ಟಿ ವಿಕಲಚೇತನರು ಎಸ್‌ಎಸ್‌ಎಲ್‌ಸಿ ನಂತರದ ಪದವಿಪೂರ್ವ, ಪದವಿ ಮತ್ತು ಇತರ ಶಿಕ್ಷಣ ಪಡೆಯುತ್ತಿದ್ದು, ಈ ವಿದ್ಯಾರ್ಥಿಗಳಿಗೆ ಇಲಾಖೆಯಿಂದ 2016-17ನೇ ಸಾಲಿಗೆ ಸಂಬಂಧಿಸಿದಂತೆ ಉಚಿತವಾಗಿ ಟಾಕಿಂಗ್ ಲ್ಯಾಪ್‌ಟಾಪ್ ನೀಡಲಾಗುತ್ತಿದೆ.
ಟಾಕಿಂಗ್ ಲ್ಯಾಪ್‌ಟಾಪ್ ವಿತರಣೆಗೆ ಇಲಾಖೆಯು ಬೆಂಗಳೂರಿನಲ್ಲಿ ಚಾಲನೆ ನೀಡಿದ್ದು, ಮುಂದೆ ಜಿಲ್ಲಾ ಮಟ್ಟದಲ್ಲೂ ವಿತರಿಸಲಿದೆ. ಸುಮಾರು 45,000 ರೂ. ಮೌಲ್ಯದ ಟಾಕಿಂಗ್ ಲ್ಯಾಪ್‌ಟಾಪ್ ನೀಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ವಿಶೇಷ ಸಾಫ್ಟ್ವೇರ್: ದೃಷ್ಟಿ ವಿಕಲಚೇತನರು ಸುಲಭವಾಗಿ ಬಳಸಲು ಅನುಕೂಲವಾಗುವಂತೆ ಟಾಕಿಂಗ್ ಲ್ಯಾಪ್‌ಟಾಪ್‌ನಲ್ಲಿ ವಿಶೇಷ ಸಾಫ್ಟ್ವೇರ್ ಅಳವಡಿಸಲಾಗಿದೆ. ಇದರಿಂದ ಇ-ಮೇಲ್ ಸೇರಿದಂತೆ ಇತರೆ ಸಂದೇಶಗಳು ರವಾನೆಯಾದಾಗ ಅಲರ್ಟ್ ಸಂದೇಶ ಮೊಳಗಲಿದೆ.
ಅಲ್ಲದೆ, ಧ್ವನಿ ಸಂಕೇತಗಳ ಮೂಲಕ ಸುಲಭವಾಗಿ ಬಳಸಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯಬಿದ್ದರೆ ದೃಷ್ಟಿ ವಿಕಲಚೇತನರಿಗೆ ಟಾಕಿಂಗ್ ಲ್ಯಾಪ್‌ಟಾಪ್ ಬಳಕೆ ಬಗ್ಗೆಯೂ ತಿಳಿಸಿಕೊಡಲಾಗುವುದು ಎಂದು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.