Advertisement
ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಥಮ ವರ್ಷದ ಸರ್ಕಾರಿ ಪದವಿ ಕಾಲೇಜುಗಳಲ್ಲಿ 1,9,9016 ಮಕ್ಕಳಿಗೆ ಲ್ಯಾಪ್ ಟಾಪ್ ನೀಡಲು ಈಗಾಗಲೇ ಟೆಂಡರ್ ಕರೆಯಲಾಗಿದೆ. 311 ಕೋಟಿ ರೂ. ವೆಚ್ಚದ ಈ ಯೋಜನೆಗೆ 3 ವರ್ಷದ ಹಿಂದೆ ಎಲ್ಲ ವರ್ಗದ ಮೊದಲ ವರ್ಷದ ಪದವಿ ವಿದ್ಯಾರ್ಥಿಗಳಿಗೂ ಲ್ಯಾಪ್ ಟಾಪ್ ನೀಡಲು ತೀರ್ಮಾನ ಮಾಡಲಾಗಿತ್ತು.
Related Articles
Advertisement
ಗ್ರಾಮೀಣ ಸುಮಾರ್ಗ ಯೋಜನೆ: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮೀಣ ಪ್ರದೇಶದ ಮುಖ್ಯ ರಸ್ತೆಗಳ ಅಭಿವೃದ್ಧಿ ಹಾಗೂ ಸುಸ್ಥಿತಿಯಲ್ಲಿಡಲು “ಮುಖ್ಯಮಂತ್ರಿ ಗ್ರಾಮೀಣ ಸುಮಾರ್ಗ ಯೋಜನೆ” ಜಾರಿಗೆ ತರಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ರಾಜ್ಯದ 185 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 56,362 ಕಿ.ಮೀ. ಗ್ರಾಮೀಣ ಡಾಂಬರ್ ರಸ್ತೆಗಳಿವೆ. ಕಳೆದ 15 ವರ್ಷಗಳ ಹಿಂದೆಯೇ ಹಳ್ಳಿಗಳಲ್ಲಿ ಡಾಂಬರ್ ರಸ್ತೆ ನಿರ್ಮಾಣ ಮಾಡಲಾಗಿದ್ದು, ದೇಶದಲ್ಲಿ ಕರ್ನಾಟಕ ಮೊದಲ 3 ನೇ ಸ್ಥಾನದಲ್ಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಕೇಂದ್ರ ಸರ್ಕಾರ ಗ್ರಾಮೀಣ ಮುಖ್ಯ ರಸ್ತೆಗಳನ್ನು ಗುರುತಿಸಲು ಕೆಲವು ಮಾನದಂಡ ಅನುಸರಿಸಲು ಸೂಚಿಸಿದೆ. ವಿದ್ಯಾಕೇಂದ್ರ, ಆರೋಗ್ಯ ಕೇಂದ್ರ, ಗ್ರಾಂಪಂ ಸಂಪರ್ಕ ಕಲ್ಪಿಸುವ ಆದ್ಯತಾ ರಸ್ತೆಗಳು ರಾಜ್ಯದಲ್ಲಿ 24.240 ಸಾವಿರ ಕಿ.ಮಿ.ಇದೆ. ಅವುಗಳನ್ನು ಸುಸ್ಥಿತಿಯಲ್ಲಿ ಇಡಲು ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದರು.
ಆದ್ಯತೆಯ 24 ಸಾವಿರ ಕಿ.ಮೀ ರಸ್ತೆಯಲ್ಲಿ 4 ಸಾವಿರ ರಸ್ತೆಗಳು ಸುಸ್ಥಿತಿಯಲ್ಲಿವೆ. ಉಳಿದ 20 ಸಾವಿರ ಕಿ.ಮಿ.ರಸ್ತೆಗಳಿಗೆ ಮರು ಡಾಂಬರೀಕರಣ, ಮೇಲುಸ್ತುವಾರಿ ಮಾಡಲು ಐದು ವರ್ಷಗಳ ಅವಧಿಗೆ ಯೋಜನೆ ರೂಪಿಸಲಾಗಿದೆ. ಈ ಯೋಜನೆಗೆ 7182 ಕೋಟಿ ಅಂದಾಜು ಮಾಡಲಾಗಿದೆ. ಅದರಲ್ಲಿ ಈ ವರ್ಷ 600 ಕೋಟಿ ಹೆಚ್ಚುವರಿ ಅನುದಾನ ನೀಡಲು ತೀರ್ಮಾನ ಮಾಡಲಾಗಿದೆ. 3 ಹಂತದಲ್ಲಿ.ರಸ್ತೆಗಳ ನಿರ್ಮಾಣ ಕಾರ್ಯ ನಡೆಸಲಾಗುವುದು ಎಂದರು.
ಮುಜರಾಯಿ ದೇವಸ್ಥಾನದ ಸಿಬ್ಬಂದಿಗೆ ವೇತನ ಪರಿಷ್ಕರಣೆ: ಹಿಂದೂ ಧಾರ್ಮಿಕ ದತ್ತಿ ಕಾಯ್ದೆ ಅಡಿಯಲ್ಲಿ ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರು ಹಾಗೂ ಇತರ 3500 ಸಿಬ್ಬಂದಿಗೆ ವೇತನ ಪರಿಷ್ಕರಣೆ ಮಾಡಲು ಸಂಪುಟ ತೀರ್ಮಾನಿಸಿದೆ ಎಂದು ಹೇಳಿದರು.
ಮಾನವೀಯ ದೃಷ್ಟಿಯಿಂದ ದೇವಸ್ಥಾನದ ಆದಾಯದ ಶೇ.35ರ ಅನುಪಾತಕ್ಕೆ ಒಳಪಟ್ಟು ಎ ಗ್ರೇಡ್ ದೇವಸ್ಥಾನಗಳಲ್ಲಿ 11,600 ಸಾವಿರದಿಂದ 24,600 ರ ವರೆಗೆ, ಬಿ ಗ್ರೇಡ್ 7250-17250 ರವರೆಗೆ ವೇತನ ಹೆಚ್ಚಿಸಲು ತೀರ್ಮಾನಿಸಿದೆ ಎಂದು ಹೇಳಿದರು.
ಇನ್ವೆಸ್ಟ್ ಕರ್ನಾಟಕ ಮುಂದಕ್ಕೆ: ರಾಜ್ಯದಲ್ಲಿ ಬಂಡವಾಳ ಹೂಡಲು 2020 ರ ಜನರಿಯಲ್ಲಿ ಇನ್ವೆಸ್ಟ್ ಕರ್ನಾಟಕದ ಮೂಲಕ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಲು ಸರ್ಕಾರ ಆಲೋಚಿಸಿತ್ತು. ಅದಕ್ಕೆ ಸಂಪುಟದಲ್ಲಿ ಅಪಸ್ವರ ಕೇಳಿ ಬಂದಿರುವುದರಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳದೇ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.
ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಸೂಕ್ತ ವಾತಾವರಣ ಇಲ್ಲ. ಅಲ್ಲದೇ ಜಿಂದಾಲ್‌ಗೆ ಜಮೀನು ಮಾರಾಟ ಮಾಡಿರುವ ಪ್ರಕರಣಕ್ಕೆ ವಿರೋಧ ವ್ಯಕ್ತವಾಗಿರುವುದರಿಂದ ದೊಡ್ಡ ಪ್ರಮಾಣ ಬಂಡವಾಳದಾರರು ರಾಜ್ಯದಲ್ಲಿ ಹೂಡಿಕೆಗೆ ಹಿಂದೇಟು ಹಾಕುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವನ್ನು ಕೆಲವು ಸಚಿವರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಆ ಕಾರಣಕ್ಕೆ ಇನ್ವೆಸ್ಟ್ ಕರ್ನಾಟಕ 2020 ಸಮಾವೇಶವನ್ನು ಮುಂದೂಡಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಸಂಪುಟದ ಪ್ರಮುಖ ನಿರ್ಧಾರಗಳು * ಕೇಂದ್ರ ಸರ್ಕಾರದ ಮಾದರಿ ನವೋದ್ಯಮ ನೀತಿ ತಿದ್ದುಪಡಿಗೆ ಒಪ್ಪಿಗೆ. * ಬಾದಾಮಿ ತಾಲೂಕು ರಾಜ್ಯ ಹೆದ್ದಾರಿ 44 ರಲ್ಲಿ 147-165 ನೇ.ಕಿ.ಮೀ.ವರೆಗೆ 35 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ತೀರ್ಮಾನ. * ರಾಮನಗರ ರಾಜೀವ್ ಗಾಂಧಿ ವೈದ್ಯಕೀಯ ಕಾಲೇಜು 750+250 ಹಾಸಿಗೆಯ ಮೆಡಿಕಲ್, ಡೆಂಟಲ್, ವಿದ್ಯಾರ್ಥಿ, ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ಮಾಣಕ್ಕೆ 480 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲು ಒಪ್ಪಿಗೆ. * ಗೋಕಾಕ್ ತಾಲೂಕಿನ ಕಲ್ಲಮರಡಿ ಏತ ನೀರಾವರಿ ಯೋಜನೆಗೆ ಸಂಪುಟ.ಒಪ್ಪಿಗೆ ನೀಡಿದೆ. * ತುಮಕೂರಿಗೆ ಹೇಮಾವತಿ ನಾಲೆ ಆಧುನೀಕರಣಕ್ಕೆ 475 ಕೋಟಿ ವೆಚ್ಚದ ಕಾಮಗಾರಿಗೆ ಒಪ್ಪಿಗೆ. * ಹೇಮಾವತಿಯಿಂದ ಕುಣಿಗಲ್ಗೆ ನೇರವಾಗಿ ನೀರು ನೀಡಲು 614 ಕೋಟಿ ವೆಚ್ಚದ ಯೋಜನೆ. * ಕನಕಪುರದಲ್ಲಿ ಹನಿ ನೀರಾವರಿ ಯೋಜನೆ ಜಾರಿಗೊಳಿಸಲು 70 ಕೋಟಿ ಯೋಜನೆಗೆ ಒಪ್ಪಿಗೆ. * ಕನಕಪುರದಲ್ಲಿ ಇನ್‌ಫೋಸಿಸ್ ಫೌಂಡೇಷನ್ ವತಿಯಿಂದ 26 ಕೋಟಿ ವೆಚ್ಚಲ್ಲಿ ಆಸ್ಪತ್ರೆ ನಿರ್ಮಿಸಲು ಅನುಮತಿ. * ನಿವೃತ್ತ ಐಎಎಸ್ ಅಧಿಕಾರಿ ಭರತ್ ಲಾಲ್ ಮೀನಾ ವಿರುದ್ಧ ಕ್ರಮ ಕೈಗೊಳ್ಳಲು ಲೋಕಾಯುಕ್ತರು ಮಾಡಿರುವ ಶಿಫಾರಸಿನ ಪ್ರಕಾರ ಕ್ರಮ ಕೈಗೊಳ್ಳಲು ಪುನರ್ ಪರಿಶೀಲಿಸಲು ತಿರ್ಮಾನ.