ಹೊಸಕೋಟೆ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕೊಡುಗೆ ನೀಡುತ್ತಿರುವುದು ಸಹಕಾರಿಯಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ನಗರದಶ್ರೀಕ್ಷೇತ್ರಧರ್ಮಸ್ಥಳಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಏರ್ಪಡಿಸಿದ್ದ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಂತ್ರಜ್ಞಾನ ಅಳವಡಿಸಿಕೊಂಡು ಶಿಕ್ಷಣ ಮುಂದುವರಿಸಲು ಪ್ರೋತ್ಸಾಹ ದೊರಕಲಿದೆ ಎಂದರು.
ದಾಖಲಾತಿ ಹೆಚ್ಚಳ: ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಒದಗಿಸಲು ಖಾಸಗಿ ಸಹಭಾಗಿತ್ವ ಅತ್ಯವಶ್ಯವಾಗಿದ್ದು, ಕೊಠಡಿ ನಿರ್ಮಾಣ, ಪೀಠೊಪಕರಣ, ಪ್ರಯೋಗಾಲಯ, ಶೌಚಾಲಯ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಇದರಿಂದಾಗಿ ಸಮುದಾಯದಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಅಭಿಮಾನ ಮೂಡುವುದೇ ಅಲ್ಲದೇ ದಾಖಲಾತಿ ವೃದ್ಧಿಗೊಳ್ಳಲಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕೀಳರಿಮೆ ನಿವಾರಿಸಿಕೊಂಡು ಅಂತರ್ಜಾಲದ ಮೂಲಕ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಡುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ನಿರ್ಧಾರ ಅಭಿನಂದನಾರ್ಹ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾ. ಅಧಿಕಾರಿ ಬೋಜ ಮಾತನಾಡಿ, ಎಸ್ಸೆಸ್ಸೆಲ್ಸಿ ಮತ್ತು ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗ್ರಾಮೀಣ ಪ್ರದೇಶದ ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರ 147 ಮಕ್ಕಳಿಗೆ ಜ್ಞಾನ ತಾಣ ಯೋಜನೆಯಡಿ ಲ್ಯಾಪ್‌ಟಾಪ್ ಮತ್ತು ಟ್ಯಾಬ್‌ಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ತರಗತಿಗಳಿಗೆ ಅನುಗುಣವಾಗಿ ಇವುಗಳಲ್ಲಿ ವಿದ್ಯಾರ್ಥಿಗಳಿಗೆ ಕ್ಲಿಷ್ಟಕರವಾದ ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ಪಠ್ಯಗಳ ವಿಷಯಗಳನ್ನು ಸಹ ಅಳವಡಿಸಿದ್ದು ಸುಲಭವಾಗಿ ಅರ್ಥೈಸಿಕೊಳ್ಳಬಹುದಾಗಿದೆ. ಪ್ರಸ್ತುತ ಸಾಂದರ್ಭಿಕವಾಗಿ 5 ವಿದ್ಯಾರ್ಥಿಗಳಿಗೆ ವಿತರಿಸುತ್ತಿದ್ದು ಆಯಾ ಪ್ರದೇಶಗಲ್ಲಿಯೇ ಸ್ಥಳೀಯ ಒಕ್ಕೂಟದ ಮೂಲಕ ಇವುಗಳನ್ನು ಪಡೆಯಲು ವ್ಯವಸ್ಥೆ ಮಾಡಲಾಗಿದೆ ಎಂದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ನಿಶ್ಮಿತಾ, ಒಕ್ಕೂಟದ ಅಧ್ಯಕ್ಷರಾದ ಮಂಜುನಾಥ್ , ನಟರಾಜ್ ಇತರರು ಇದ್ದರು.