“ಲೂಸ್ ಮಾದ’ ಖ್ಯಾತಿಯ ಯೋಗಿಅಭಿನಯದ “ಲಂಕೆ’ ಚಿತ್ರ ಗಣೇಶನಹಬ್ಬದದಿನ ಬಿಡುಗಡೆಯಾಗಿರೋದು ನಿಮಗೆ ಗೊತ್ತೇ ಇದೆ. ಎರಡನೇ ಲಾಕ್‌ಡೌನ್ ನಂತರ ಅದ್ಧೂರಿಯಾಗಿ ಬಿಡುಗಡೆಯಾದ ಚಿತ್ರ ಇದಾಗಿದ್ದು,ಈಗ ಎರಡನೇ ವಾರಕ್ಕೆ ಕಾಲಿಟ್ಟಿದೆ.
ಔಟ್ ಅಂಡ್ ಔಟ್ ಕಮರ್ಷಿಯಲ್ ಆ್ಯಕ್ಷನ್ ಸಿನಿಮಾವಾಗಿ ಮೂಡಿಬಂದ “ಲಂಕೆ’ಯನ್ನು ಮಾಸ್ ಆಡಿಯನ್ಸ್ ಇಷ್ಟಪಟ್ಟಿದ್ದರಿಂದ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಇದರಿಂದ ಚಿತ್ರತಂಡ ಖುಷಿಯಾಗಿದೆ.
ಚಿತ್ರದಲ್ಲಿ ಅಂಡರ್‌ವರ್ಲ್ಡ್, ವಿಲನ್‌ವೊಬ್ಬಳ ಆಟ ಈ ಮಧ್ಯೆ ಸೆಂಟಿಮೆಂಟ್… ಹೀಗೆ ಸಾಕಷ್ಟುಅಂಶಗಳೊಂದಿಗೆ ಸಿನಿಮಾ ಸಾಗುತ್ತದೆ. ಸಮಾಜ ಸೇವಕಿ ಮುಖವಾಡದ ಹಿಂದಿನ ಕರಾಳ ಮುಖ, ಮತ್ತೂಬ್ಟಾಕೆಯ ಮಾತೃಹೃದಯ, ಸಿಟ್ಟಿಗೆ ಬಲಿಯಾಗಿ ಜೈಲಿಗೆ ಹೋಗಿ ಬಂದಿರುವ ನಾಯಕ… ಈ ಅಂಶಗಳನ್ನು ನಿರ್ದೇಶಕರು ಎಲ್ಲೂ ಬೋರ್ ಆಗದಂತೆ ಜೋಡಿಸಿದ್ದು, ಪ್ರೇಕ್ಷಕರಿಗೆ ಇಷ್ಟವಾಗಿದೆ.
ಈ ಚಿತ್ರವನ್ನು ರಾಮ್‌ಪ್ರಸಾದ್ ಎಂ.ಡಿ ನಿರ್ದೇಶಿಸಿದ್ದು, ಪಟೇಲ್ ಶ್ರೀನಿವಾಸ, ಸುರೇಖಾ ರಾಮ್‌ಪ್ರಸಾದ್ ನಿರ್ಮಿಸಿದ್ದಾರೆ. ಇಡೀ ಸಿನಿಮಾವನ್ನು ಔಟ್ ಅಂಡ್ ಔಟ್ ಕಮರ್ಷಿಯಲ್ ಆಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ನಿರ್ದೇಶಕ ಟಾರ್ಗೆಟ್ ಆಡಿಯನ್ಸ್ ಮಾಸ್. ಜೊತೆಗೆ ಫ್ಯಾಮಿಲಿ. ಆ ನಿಟ್ಟಿನಲ್ಲಿ ಚಿತ್ರದಲ್ಲಿ ಹೊಡೆದಾಟ, ಬಡಿದಾಟದ ಜೊತೆಗೆ ಲವ್, ಸೆಂಟಿಮೆಂಟ್ ಅಂಶಗಳನ್ನು ಕೂಡಾ ನೀಟಾಗಿ ಜೋಡಿಸಿರುವುದರಿಂದ ಸಿನಿಮಾಕ್ಕೆ ಪ್ರೇಕ್ಷಕರು ಜೈ ಎಂದಿದ್ದಾರೆಂಬುದು ಚಿತ್ರತಂಡದ ಮಾತು.
“ಲಂಕೆ’ಚಿತ್ರದಲ್ಲಿ ನಾಯಕ ಯೋಗಿ ಜೊತೆಗೆ ಕೃಷಿ ತಾಪಂಡ, ಕಾವ್ಯ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಿಧನರಾದ ನಟ ಸಂಚಾರಿ ವಿಜಯ್ ಕೂಡ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಉಳಿದಂತೆ ಶರತ್ ಲೋಹಿತಾಶ್ವ, ಶೋಭರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಮೂಸಾ, ಆದ್ಯಾ ನಾಯಕ್, ಗಾಯಿತ್ರಿ ಜಯರಾಂ, ಎಸ್ತಾರ್ ನರೋನ, ಪ್ರಶಾಂತ್ ಸಿದ್ದಿ ಮುಂತಾದವರು “ಲಂಕೆ’ಯ ಇತರ ಪಾತ್ರಗಳಲ್ಲಿಅಭಿನಯಿಸಿದ್ದಾರೆ.