ಲಂಡನ್: ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿ ಟೀಕೆಗೆ ಒಳಗಾಗಿರುವ ಶ್ರೀಲಂಕಾ ಕ್ರಿಕೆಟ್ ತಂಡ ಇದೀಗ ಬಯೋ ಬಬಲ್ ನಿಯಮ ಉಲ್ಲಂಘನೆ ಮಾಡಿ ಆಕ್ರೊಶಕ್ಕೆ ಗುರಿಯಾಗಿದೆ.
ಲಂಕಾ ತಂಡದ ಉಪನಾಯಕ ಕುಸಾಲ್ ಮೆಂಡಿಸ್ ಮತ್ತು ವಿಕೆಟ್ ಕೀಪರ್ ನಿರೋಶನ್ ಡಿಕವೆಲ್ಲಾ ಅವರು ಇಂಗ್ಲೆಂಡ್ ನ ಮಾರುಕಟ್ಟೆ ಪ್ರದೇಶದಲ್ಲಿ ಸುತ್ತಾಡಿದ ವಿಡಿಯೋ ಇದೀಗ ವೈರಲ್ ಆಗಿದೆ.
ಲಂಕಾ ತಂಡ ಮೊದಲ ಏಕದಿನ ಪಂದ್ಯಕ್ಕಾಗಿ ಡರ್ಹಾಮ್ ನಲ್ಲಿದೆ. ಲಂಕಾ ಆಟಗಾರರಿಗೆ ಕಾರ್ಡಿಫ್‌ನಲ್ಲಿ ಹೊರಗೆ ಹೋಗಲು ಅನುಮತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಡರ್ಹಾಮ್‌ನಲ್ಲಿ ಕೋವಿಡ್ -19 ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರಿಗೆ ಬಯೋ ಬಬಲ್ ಬಿಟ್ಟು ತೆರಳುವಂತಿಲ್ಲ.
ಕುಸಾಲ್ ಮೆಂಡಿಸ್ ಮತ್ತು ನಿರೋಶನ್ ಡಿಕವೆಲ್ಲಾ ಜೊತೆ ಮತ್ತೋರ್ವ ಆಟಗಾರನು ಇರುವ ಸಾಧ್ಯತೆಯಿದೆ ಎನ್ನಲಾಗಿದೆ. ಒಂದು ವೇಳೆ ಆಟಗಾರರು ನಿಯಮ ಉಲ್ಲಂಘಿಸಿರುವುದು ದೃಢವಾದರೆ ಅವರುಗಳು ಇನ್ನು ಎರಡು ವಾರಗಳವರೆಗೆ ಐಸೋಲೇಶನ್ ನಲ್ಲಿರ ಬೇಕಾಗುತ್ತದೆ. ಅಲ್ಲದೆ ಅವರಿಗೆ ಯುಕೆ ಸರ್ಕಾರವು ದಂಡವನ್ನೂ ವಿಧಿಸುತ್ತದೆ.
ಇದನ್ನೂ ಓದಿ:ಕ್ರಿಕೆಟ್ ಗೆ ಮಾತ್ರ ಕಮೆಂಟರಿ ಮಾಡುತ್ತೇನೆ,ಟಿ20 ಮಾದರಿ ಕ್ರಿಕೆಟ್ ಅಲ್ಲವೇ ಅಲ್ಲ: ಹೋಲ್ಡಿಂಗ್
ತಂಡದ ಆಡಳಿತ ಮಂಡಳಿ ಈ ಬಗ್ಗೆ ತನಿಖೆ ನಡೆಸಲಿದೆ ಎಂದು ಶ್ರೀಲಂಕಾ ವ್ಯವಸ್ಥಾಪಕ ಮನುಜಾ ಕರಿಯಪೆರುಮಾ ತಿಳಿಸಿದ್ದಾರೆ. ಆದರೆ ನಿಜವಾಗಿಯೂ ನಿಯಮ ಉಲ್ಲಂಘನೆ ನಡೆದಿದೆಯೇ ಎಂದು ಖಚಿತಪಡಿಸಲು ಇದುವರೆಗೂ ಸಾಧ್ಯವಾಗಲಿಲ್ಲ. ಮಂಗಳವಾರ ಶ್ರೀಲಂಕಾ- ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ನಡೆಯಲಿದೆ.