ಮಂಗಳೂರು: ಭಾಷೆ ಹಾಗೂ ಸಂಸ್ಕೃತಿ ಎನ್ನುವುದು ಒಂದು ಸಮುದಾಯದ ಜೀವನಾಡಿ ಇದ್ದಂತೆ. ಒಂದು ಭಾಷೆಯಲ್ಲಿ ನಿಘಂಟು ಹೊರಬಂದರೆ ಅದು ಜ್ಞಾನದ ಅಣೆಕಟ್ಟು ನಿರ್ಮಾಣ ಆದ ಹಾಗೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ| ಅರವಿಂದ ಮಾಲಗತ್ತಿ ತಿಳಿಸಿದರು.
ಅವರು ಸೋಮವಾರ ನಗರದ ಪುರಭವನದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹೊರತಂದ ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು ಲೋಕಾರ್ಪಣೆ ಸಮಾರಂಭದಲ್ಲಿ ಉದ್ಘಾಟನಾ ಭಾಷಣ ಮಾಡಿದರು. ಭಾಷೆಯಲ್ಲಿ ಶುದ್ಧ ಹಾಗೂ ಅಶುದ್ಧ ಎಂಬುದಿಲ್ಲ. ಬ್ಯಾರಿ ಭಾಷೆಯಲ್ಲಿ ನಿಘಂಟನ್ನು ಹೊರ ತರಲು ಅಕಾಡೆಮಿ ಪ್ರಯತ್ನಿಸಿರುವುದು ಶ್ಲಾಘನೀಯ ಕಾರ್ಯ. ಇದರಲ್ಲಿ ಕನ್ನಡ ಭಾಷೆಯನ್ನೂ ಸೇರಿಸುವ ಮೂಲಕ ಅವರು ಭಾಷಾ ಪ್ರೇಮವನ್ನು ಪ್ರದರ್ಶಿಸಿದ್ದಾರೆ. ಜತೆಗೆ ಇದು ಸಾಮರಸ್ಯಕ್ಕೂ ಹಾದಿಯಾಗಿರುತ್ತದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ನಿಘಂಟನ್ನು ಲೋಕಾರ್ಪಣೆಗೊಳಿಸಿದರು. ರಾಜ್ಯ ಆಹಾರ ಸಚಿವ ಯು.ಟಿ. ಖಾದರ್ ಅವರು “ಬೆಲ್ಕಿರಿ’ ವಿಶೇಷಾಂಕ ಬಿಡುಗಡೆಗೊಳಿಸಿದರು.
ಶಾಸಕ ಜೆ.ಆರ್. ಲೋಬೊ, ಮೇಯರ್ ಕವಿತಾ ಸನಿಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಮುಡಾ ಮಾಜಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ ಉಪಸ್ಥಿತರಿದ್ದರು.
ಗೌರವ: ನಿಘಂಟು ತಯಾರಿಯಲ್ಲಿ ಶ್ರಮಿಸಿದ ಕರ್ನಾಟಕ ಮುಕ್ತ ವಿವಿಯ ವಿಶ್ರಾಂತ ಕುಲಪತಿ ಪ್ರೊ| ಬಿ.ಎ. ವಿವೇಕ ರೈ, ಹಿರಿಯ ಪತ್ರಕರ್ತ ಬಿ.ಎಂ. ಹನೀಫ್, ವಿಶ್ರಾಂತ ಪ್ರಾಧ್ಯಾಪಕ ಪ್ರೊ| ಸುರೇಂದ್ರ ರಾವ್, ಅಕಾಡೆಮಿಯ ಸದಸ್ಯೆ ಝೊಹರಾ ಅಬ್ಟಾಸ್, ನಿಘಂಟಿನ ಸಂಪಾದಕ ಪ್ರೊ| ಬಿ.ಎಂ. ಇಚ್ಲಂಗೋಡು, ಬಿ.ಎ. ಸಂಶುದ್ದೀನ್ ಮಡಿಕೇರಿ, ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಮೊದಲಾದವರನ್ನು ಗೌರವಿಸಲಾಯಿತು.
ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಪ್ರಸ್ತಾವನೆಗೈದರು. ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಸ್ವಾಗತಿಸಿ, ಅಬ್ದುಲ್ ಲತೀಫ್ ನೇರಳಕಟ್ಟೆ ವಂದಿಸಿದರು. ಬಿ.ಎ. ಮುಹಮ್ಮದ್ ಆಲಿ ನಿರ್ವಹಿಸಿದರು.