ಹಿರಿಯರ ಆಚಾರ-ವಿಚಾರ, ಚಿಂತನೆ ಹಾಗೂ ಇವತ್ತಿನ ಕಿರಿಯರ ಆಚಾರಗಳ ನಡುವೆ ಸಣ್ಣ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಇವತ್ತಿನ ಯುವ ಜನಾಂಗ ಕೂಡಾ ತಮ್ಮ ಸಂಪ್ರದಾಯವನ್ನೇ ಪಾಲಿಸಬೇಕೆಂದು ಬಯಸಿದರೆ, ಯುವಕರು ಅಜ್ಜ ನೆಟ್ಟ ಆಲದ ಮರವೇ ಯಾಕೆ… ಎಂಬ ಮನಸ್ಥಿತಿಯಲ್ಲಿ ಇರುತ್ತಾರೆ. ಈ ವಾರ ತೆರೆಕಂಡಿರುವ “ಲಂಗೋಟಿ ಮ್ಯಾನ್’ ಸಿನಿಮಾ ಕೂಡಾ ಇದೇ ಅಂಶವನ್ನಿಟ್ಟುಕೊಂಡು ಬಂದಿರುವ ಚಿತ್ರ.
ನಿರ್ದೇಶಕಿ ಸಂಜೋತಾ ಒಂದು ಸೂಕ್ಷ್ಮ ಅಂಶಗಳನ್ನೊಳಗೊಂಡಿರುವ ಕಥೆಯನ್ನು ಆಯ್ಕೆ ಮಾಡಿಕೊಂಡು ಅದನ್ನು ಅಚ್ಚುಕಟ್ಟಾಗಿ ನಿರೂಪಿಸಲು ಪ್ರಯತ್ನಿಸಿದ್ದಾರೆ. ಕಥೆಯ ಬಗ್ಗೆ ಹೇಳುವುದಾದರೆ ತಾತ ಮೊಮ್ಮಗನ ಸುತ್ತ ಮುತ್ತ ನಡೆಯುವ ಕಥೆಯಿದು. ತಾತನಿಗೆ ಮೊಮ್ಮಗ ಲಂಗೋಟಿ ಹಾಕಿಕೊಳ್ಳಬೇಕು ಎಂಬ ಬಯಕೆ. ಮೊಮ್ಮಗನಿಗೆ ಅಂಡರ್ ವೇರ್ ಹಾಕಿಕೊಳ್ಳುವ ಆಸೆ. ತಾತ ಇರುವವರೆಗೂ ಅಂಡರ್ ವೇರ್ ಹಾಕಲು ಬಿಡಲ್ಲ. ಇತ್ತ ಕಡೆ ಅವರು ಸಾಯುತ್ತಿಲ್ಲ. ನಾನು ಅಂಡರ್ ವೇರ್ ಹಾಕಲು ಆಗುತ್ತಿಲ್ಲ ಎಂಬುದು ಮೊಮ್ಮಗನ ಕೊರಗು ಹೆಚ್ಚಾಗುತ್ತದೆ. ಕೊನೆಗೂ ಮೊಮ್ಮಗ ಒಂದು ನಿರ್ಧಾರಕ್ಕೆ ಬರುತ್ತಾನೆ. ಅದೇನು ಎಂಬುದನ್ನು ತೆರೆಮೇಲೆಯೇ ನೋಡಬೇಕು.
ಈ ರೀತಿಯ ಕಥೆಯನ್ನು ಹಾಸ್ಯ ರೂಪದಲ್ಲಿ ಚಿತ್ರದ ಮೂಲಕ ತೆರೆಗೆ ತರಲಾಗಿದೆ. ಇದರ ಜೊತೆಗೆ ಇನ್ನೊಂದಿಷ್ಟು ಅಂಶಗಳನ್ನು ಹೇಳಲಾಗಿದೆ. ಒಂದಷ್ಟು ಪ್ರಯೋಗಾತ್ಮಕ ವಿಚಾರಗಳನ್ನು ಕೂಡಾ ನಿರ್ದೇಶಕರು ಪ್ರಯತ್ನಿಸಿದ್ದಾರೆ. ಆರಂಭದಲ್ಲಿ ಜಾಲಿರೈಡ್ ಆಗಿ ಸಾಗುವ ಸಿನಿಮಾ ದ್ವಿತೀಯಾರ್ಧದಲ್ಲಿ ಗಂಭೀರವಾಗುತ್ತದೆ. ಅದಕ್ಕೆ ಕಾರಣವೂ ಇದೆ. ನಿರ್ದೇಶಕರು ಸಾವಧಾನವಾಗಿ ಕಥೆಯನ್ನು ಹೇಳಲು ಹೊರಟಿರುವುದು ಚಿತ್ರದಲ್ಲಿ ಎದ್ದು ಕಾಣುತ್ತದೆ. ಒಂದು ಪ್ರಯತ್ನವಾಗಿ ಮೆಚ್ಚಬಹುದು.
ಚಿತ್ರದಲ್ಲಿ ಆಕಾಶ್ ರ್‍ಯಾಂಬೋ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಸಂಹಿತಾ, ಸ್ನೇಹ ಹಾಗೂ ಇತರರು ಪಾತ್ರಕ್ಕೆ ಹೊಂದಿಕೊಂಡಿದ್ದಾರೆ.
ಆರ್.ಪಿ.ರೈ