Advertisement

ಲಂಗ ದಾವಣಿಯಲಿ ಲಾಲಿ ಸುವ್ವಲಾಲಿ!

06:00 AM Oct 24, 2018 | |

ಹಿಂದೆಲ್ಲಾ ಅಜ್ಜಿ ಅಥವಾ ಅಮ್ಮನ ಸೀರೆಯಿಂದ ಲಂಗ ದಾವಣಿಯನ್ನು ಹೊಲಿಸುತ್ತಿದ್ದರು. ಹೀಗಾಗಿ ಅವುಗಳಿಗೆ ಭಾವನಾತ್ಮಕ ವಾದ ಸೆಳೆತವೂ ಇರುತ್ತಿತ್ತು. 

Advertisement

ಲಂಗ ದಾವಣಿಯ ಪರಿಚಯ ಬಹುತೇಕರಿಗಿರುತ್ತದೆ. ಈಗ ಮತ್ತೆ ಅದು ಟ್ರಿಂಡಿನಲ್ಲಿದೆ. ಅಜ್ಜಿ, ಅಮ್ಮ, ಅತ್ತೆ, ದೊಡ್ಡಮ್ಮ- ಚಿಕ್ಕಮ್ಮಂದಿರು ಲಂಗ ದಾವಣಿ ಉಟ್ಟಿರುವ ಚಿತ್ರಗಳನ್ನು ನೋಡಿರುತ್ತೀರಿ. ಇಂಗ್ಲಿಷ್‌ನಲ್ಲಿ ಟೂ ಪೀಸ್‌ ಸೀರೆ ಅಥವಾ ಹಾಫ್ ಸಾರಿ, ತೆಲುಗಿನಲ್ಲಿ ಲಂಗ ವೋಣಿ ಮತ್ತು ತಮಿಳಿನಲ್ಲಿ ಪಟ್ಟು ಪಾವಡೈ ಎಂದು ಕರೆಯಲಾಗುವ ಈ ಲಂಗ ದಾವಣಿಯನ್ನು ಸಿನಿಮಾಗಳಲ್ಲಿ ಉಟ್ಟು ಮುದ್ದಾಗಿ ಕಂಡ ನಟಿಯರು ಇದ್ದಾರೆ. 

ಉತ್ತರದಲ್ಲಿ ಘಾಗ್ರಾ
ದಕ್ಷಿಣ ಭಾರತದ ಮಹಿಳೆಯರು ಉಡುವ ಈ ಲಂಗ ದಾವಣಿಯಂಥದ್ದೇ ಉಡುಗೆಯನ್ನು ಉತ್ತರ ಭಾರತದ ಮಹಿಳೆಯರೂ ಉಡುತ್ತಾರೆ. ಅದನ್ನು ಘಾಗ್ರಾ ಚೋಲಿ ಎಂದು ಕರೆಯುತ್ತಾರೆ. ಇದೀಗ ಹಬ್ಬದ ಮಾಸವಾಗಿರುವುದರಿಂದ ಹೆಣ್ಣು ಮಕ್ಕಳಲ್ಲಿ ಸಾಂಪ್ರದಾಯಿಕ ಉಡುಗೆ- ತೊಡುಗೆಗೆ ಬೇಡಿಕೆ ಹೆಚ್ಚಾಗಿದೆ. ರವಿಕೆ, ಲಂಗ ಮತ್ತು ಶಾಲು ಅಥವಾ ದುಪಟ್ಟಾ ಹೊಂದಿರುವ ಈ ಉಡುಗೆ ತೊಟ್ಟರೆ ಯಾರೇ ಆಗಲಿ, ಮುದ್ದಾಗಿ ಕಾಣುವುದರಲ್ಲಿ ಅನುಮಾನವೇ ಬೇಡ.

ಸೆಂಟಿಮೆಂಟಲ್‌ ಟಚ್‌
ಹಿಂದೆಲ್ಲಾ ಅಜ್ಜಿ ಅಥವಾ ಅಮ್ಮನ ಸೀರೆಯಿಂದ ಲಂಗ ದಾವಣಿಯನ್ನು ಹೊಲಿಸುತ್ತಿದ್ದರು. ಹೀಗಾಗಿ ಅವುಗಳಿಗೆ ಭಾವನಾತ್ಮಕ ವಾದ ಸೆಳೆತವೂ ಇರುತ್ತಿತ್ತು. ಆದರೀಗ ರೆಡಿಮೇಡ್‌ ಲಂಗ ದಾವಣಿಗಳು ಅಂಗಡಿಗಳಲ್ಲಿ ಸಿಗುತ್ತವೆ. ಅಷ್ಟೇ ಅಲ್ಲ. ಆನ್‌ಲೈನ್‌ ಮೂಲಕವೂ ಈ ದಿರಿಸನ್ನು ಆರ್ಡರ್‌ ಮಾಡಬಹುದು. ನವರಾತ್ರಿ, ದಸರಾ, ದೀಪಾವಳಿ ಎಲ್ಲಾ ಆಚರಣೆಗಳಲ್ಲೂ ಲಂಗ ದಾವಣಿ ತೊಟ್ಟು ಮಿಂಚಬಹುದು! ಚಿಕ್ಕ ಮಕ್ಕಳಿಗೆ ಉಡುಗೊರೆ ನೀಡುವುದಾದರೆ ಇಂಥ ರೆಡಿಮೇಡ್‌ ಲಂಗ ದಾವಣಿಯನ್ನು ಖಂಡಿತ ನೀಡಬಹುದು. ಮಕ್ಕಳು ಲಂಗ ದಾವಣಿ ಉಟ್ಟರೆ, ಇನ್ನಷ್ಟು  ಮುದ್ದಾಗಿ ಕಾಣುವರು! 

ಕೋಲಾಟಕ್ಕೆ ಹೇಳಿ ಮಾಡಿಸಿದ್ದು
ಗುಜರಾತ್‌, ರಾಜಸ್ಥಾನ ಮತ್ತಿತರ ರಾಜ್ಯದ ಮಹಿಳೆಯರು ಕರ್ನಾಟಕ ಮತ್ತು ಮಹಾರಾಷ್ಟ್ರದ ಜನರಂತೆಯೇ ಕೋಲಾಟ ಆಡುತ್ತಾರೆ. ಆದರೆ ನವರಾತ್ರಿ ವೇಳೆ ವಿಶೇಷವಾಗಿ ಡಾಂಡಿಯಾ ಅಥವಾ ಗರ್ಬಾ ಆಡುತ್ತಾರೆ. ನಲಿಯುತ್ತಾ, ಕೋಲಾಟವಾಡಲು ಲಂಗ ದಾವಣಿಯಂಥ ಅಂದದ ದಿರಿಸು ಉಡುತ್ತಾರೆ. ಕುಣಿಯುವಾಗ ದಿರಿಸಿನ ಅಂದ ಹೆಚ್ಚುವುದು. ಜೋಡಿಗಳು ಒಂದೇ ಬಣ್ಣದ ದಿರಿಸು ಉಟ್ಟು ಈ ಉತ್ಸವದ ನೃತ್ಯದಲ್ಲಿ ಭಾಗವಹಿಸುತ್ತಾರೆ. ಖುಷಿಯಲ್ಲಿ ತಲ್ಲೀನರಾದ ಜನರು ಬಣ್ಣ ಬಣ್ಣದ ಬಟ್ಟೆ ಮತ್ತು ಕೋಲು ಹಿಡಿದು ಆಡುವುದನ್ನು ನೋಡುವುದೂ ಒಂದು ಖುಷಿಯೇ ಸರಿ.

Advertisement

ಜಡೆ, ತುರುಬು ಪೋನಿ ಟೇಲ್‌
ಈ ದಿರಿಸಿನಲ್ಲಿ ರವಿಕೆ ಮತ್ತು ಲಂಗ ಒಂದೇ ಬಣ್ಣದ್ದಾಗಿದ್ದು ಸೆರಗಿಗಾಗಿ ಬಳಸುವ ಶಾಲು ಅಥವಾ ದುಪಟ್ಟಾ ಮಾತ್ರ ಬೇರೆ ಬಣ್ಣ¨ªಾಗಿರುತ್ತದೆ. ಹೆಚ್ಚಾಗಿ, ರವಿಕೆ ಮತ್ತು ಲಂಗದಲ್ಲಿರುವ ಜರಿಯ ಬಣ್ಣದ ದುಪಟ್ಟಾವನ್ನು ಉಡಲಾಗುತ್ತದೆ. ಈ ಉಡುಗೆ ಜೊತೆ ಜಡೆ, ತುರುಬು, ಹೈ ಪೋನಿ ಟೇಲ್‌ (ಜುಟ್ಟು), ಎಲ್ಲಾ ತರಹದ ಕೇಶಾಲಂಕಾರ ಒಪ್ಪುತ್ತದೆ. ಲಂಗ ದಾವಣಿ ತೊಟ್ಟಾಗಲೆಲ್ಲ ಬಾಲಕಿಯರು ಎರಡು ಜಡೆಯನ್ನೂ ಪೋಣಿಸಿ, ಜಾಜಿ- ಮಲ್ಲಿಗೆಯ ಮಾಲೆಯನ್ನೂ ಮುಡಿದುಕೊಳ್ಳುತ್ತಾರೆ. ಹಿಂದೆಲ್ಲ ಲಂಗ ದಾವಣಿಯ ರವಿಕೆಗೆ, ಉದ್ದ ಲಂಗದಂತೆ ಪಫx… ಸ್ಲಿವ್ಸ್ ಇರುತ್ತಿದ್ದವು. ಆದರೀಗ ಇಡೀ ತೋಳು ಅಂದರೆ ಫ‌ುಲ್‌ ಸ್ಲಿವ್ಸ್ ರವಿಕೆ ಟ್ರೆಂಡ್‌ ಆಗುತ್ತಿದೆ. ಲಂಗ ದಾವಣಿ ಜೊತೆ ಸೊಂಟ ಪಟ್ಟಿಯನ್ನು ತೊಟ್ಟು ಉಡುಗೆಯ ಅಂದವನ್ನು ಇನ್ನೂ ಹೆಚ್ಚಿಸಬಹುದು.

ಉಡಲೂ ಸುಲಭ
ಕಾಲ ಬದಲಾದಂತೆ, ಲಂಗ ದಾವಣಿಯೂ ಹೊಸ ಶೈಲಿಗಳಲ್ಲಿ ಮಾರುಕಟ್ಟೆಗಳಲ್ಲಿ ಕಾಣಸಿಗುತ್ತಿದೆ. ಹೆಣ್ಣುಮಕ್ಕಳು ಒಂದು ಬಣ್ಣದ ರವಿಕೆ, ಬೇರೆ ಬಣ್ಣದ ಲಂಗ ಹಾಗು ಮತ್ತೂಂದು ಬಣ್ಣದ ದುಪಟ್ಟಾದ ಜೊತೆ ಉಟ್ಟು ಪ್ರಯೋಗ ಮಾಡುತ್ತಿ¨ªಾರೆ. ತೋಳುಗಳು ಇಲ್ಲದ (ಸ್ಲಿವ್‌ಲೆಸ್‌) ಲಂಗ ದಾವಣಿಗಳೂ ಲಭ್ಯ ಇವೆ! ಸೀರೆ ಉಡಲು ಗೊತ್ತಿದ್ದವರಿಗೆ ಲಂಗ ದಾವಣಿ ತೊಡುವುದು ಬ್ರಹ್ಮವಿದ್ಯೆ ಏನಲ್ಲ. ಆದರೆ ಎರಡನ್ನೂ ಉಡಲು ಗೊತ್ತಿಲ್ಲದವರಿಗೆ ಲಂಗ ದಾವಣಿ ತೊಡುವುದು ಹೇಗೆ ಎನ್ನುವುದರ ಬಗ್ಗೆ ಯೂಟ್ಯೂಬ…ನಲ್ಲಿ ವಿಡಿಯೊಗಳೂ ಇವೆ!

ಅದಿತಿ ಮಾನಸ

Advertisement

Udayavani is now on Telegram. Click here to join our channel and stay updated with the latest news.

Next