ಚಾಮರಾಜನಗರ: ವಯನಾಡು ಜಿಲ್ಲೆಯ ಚೂರಲ್‌ವುಲ ಟೀ ಎಸ್ಟೇಟ್‌ನಲ್ಲಿ ಟೀ ಎಲೆ ಕೀಳುವ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಗೌರಮ್ಮ ಕುಟುಂಬ ಚಾಮರಾಜನಗರ ತಾಲೂಕಿನ ಮಂಗಲದಿಂದ ವಲಸೆ ಹೋಗಿ 50 ವರ್ಷಗಳಿಂದ ಅಲ್ಲಿ ನೆಲೆಸಿದೆ. ಗೌರಮ್ಮ ಮತ್ತು ಅವರ ಪುತ್ರ ವಿನೋದ್, ಗೌರಮ್ಮ ಅವರ ಸೋದರನ ಕುಟುಂಬ ಭೂಕುಸಿತದಿಂದ ಉಂಟಾದ ಪ್ರವಾಹದಿಂದ ಪಾರಾಗಿ ಈಗ ಮೇಪ್ಪಾಡಿಯ ಕಾಳಜಿ ಕೇಂದ್ರದಲ್ಲಿದೆ.
ಮಂಗಳವಾರ ಮಧ್ಯರಾತ್ರಿ ನಡೆದ ದುರಂತದಲ್ಲಿ ಪಾರಾಗಿ ಸುಮಾರು 18 ಗಂಟೆಗಳ ಕಾಲ ಪಕ್ಕದ ಗುಡ್ಡದಲ್ಲಿ ರಕ್ಷಣೆ ಪಡೆದು, ರಕ್ಷಣಾ ಪಡೆಗಳ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿ ಬಂದ ರೋಚಕ ಕಥೆಯನ್ನು ಗೌರಮ್ಮ ಅವರ ಪುತ್ರ ವಿನೋದ್ “ಉದಯವಾಣಿ’ಯೊಂದಿಗೆ ಹಂಚಿಕೊಂಡದ್ದು ಹೀಗೆ:
ಮಂಗಳವಾರ ಬೆಳಗಿನ ಜಾವ ನಮ್ಮ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ 20 ಹಸುಗಳು ಜೋರಾಗಿ ಕೂಗುತ್ತಿರುವ ಶಬ್ದ ಕೇಳಿಸಿತು. ಶಬ್ದಕ್ಕೆ ನಮಗೆ ನಿದ್ರೆಯಿಂದ ಎಚ್ಚರವಾಯಿತು. ಕರೆಂಟ್ ಇರಲಿಲ್ಲ. ಟಾರ್ಚ್ ಬೆಳಕು ಹಿಡಿದು ದನಗಳ ಕೊಟ್ಟಿಗೆಗೆ ಬಂದು ನೋಡಿದಾಗ ನೀರು ಆವರಿಸಿತ್ತು. ಕಟ್ಟಿ ಹಾಕಿದ್ದ ಹಸುಗಳ ಹಗ್ಗ ಬಿಡಿಸಿದೆವು. ಅಷ್ಟರಲ್ಲಿ ನೀರು ನಮ್ಮ ಎದೆ ಮಟ್ಟಕ್ಕೆ ಬಂತು. ನಾವು ಛಾವಣಿಯ ಶೀಟ್ ಒಡೆದು ಮೇಲೆ ಬಂದೆವು. ಚಿಕ್ಕ ಗುಡ್ಡಕ್ಕೆ ಹೋಗಿ ನಿಂತೆವು. ಅಲ್ಲಿ ಎಸ್ಟೇಟ್ ಅಸಿಸ್ಟೆಂಟ್ ಮ್ಯಾನೇಜರ್ ಬಂಗಲೆ ಇದೆ. ಅಕ್ಕಪಕ್ಕದಿಂದ ಜನರು ಸೇರಿ ಒಟ್ಟು 120 ಜನ ಸೇರಿದೆವು. ನಮ್ಮ ಎಸ್ಟೇಟಿನಿಂದ ಮೇಲ್ಭಾಗದಲ್ಲಿ ಮುಂಡಕೈ ಬೆಟ್ಟ ಇದೆ. ಅಲ್ಲಿ ಗುಡ್ಡ ಇನ್ನೊಮ್ಮೆ ಕುಸಿಯಿತು. 6 ಗಂಟೆ ನಸುಕಿನಲ್ಲಿ ಗುಡ್ಡದಿಂದ ನೋಡಿದರೆ ನಮ್ಮ ಊರೇ ಇಲ್ಲ. ನಮ್ಮ ಮನೆಗಳೆಲ್ಲ ನೆಲಸಮವಾಗಿತ್ತು. ನಮ್ಮ ಗುಂಪಿನಲ್ಲೊಬ್ಬರು ಕೇರಳದ ಪತ್ರಕರ್ತರಿಗೆ ಕರೆ ಮಾಡಿ ಲೊಕೇಷನ್ ಕಳಿಸಿದರು. ಮಧ್ಯಾಹ್ನದ ಹೊತ್ತಿಗೆ ಎಸ್‌ಡಿಆರ್‌ಎಫ್ ರಕ್ಷಣ ಪಡೆಯವರು ಬಂದರು. ನಮ್ಮನ್ನು ಎಚ್ಚರಿಸಿದ ಹಸುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ನಾವು ಹಗ್ಗ ಬಿಚ್ಚಿದ್ದೆವು. ಕತ್ತಲೆಯಲ್ಲಿ ಅವು ಎತ್ತ ಕೊಚ್ಚಿಕೊಂಡು ಹೋದವು ಎಂಬುದೂ ಗೊತ್ತಾಗಲಿಲ್ಲ.
ರಾಜೇಂದ್ರ ಶವಪತ್ತೆ,
ರತ್ನಮ್ಮ ಇನ್ನೂ ನಾಪತ್ತೆ
ಚಾಮರಾಜನಗರ: ಚೂರಲ್‌ವುಲದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಚಾ.ನಗರ ಮೂಲದ ರಾಜೇಂದ್ರ (50) ಅವರ ಶವ ಕೇರಳದ ನೆಲಂಬೂರಿನಲ್ಲಿ ಪತ್ತೆಯಾಗಿದೆ. ಅವರ ಪತ್ನಿ ರತ್ನಮ್ಮ ಸಹ ಮೃತಪಟ್ಟಿದ್ದಾರೆಂದು ಹೇಳಲಾಗಿದ್ದು ಅವರ ಶವ ಇನ್ನೂ ಸಿಕ್ಕಿಲ್ಲ. ರಾಜೇಂದ್ರ ಅವರ ತಂದೆ ಚಿಕ್ಕಮೋಳೆಯವರು. ಇವರ ಕುಟುಂಬದವರು 50 ವರ್ಷಗಳ ಹಿಂದೆಯೇ ಟೀ ಎಸ್ಟೇಟ್‌ಗೆ ತೆರಳಿ ಗಾರೆ ಕೆಲಸ ಮಾಡಿಕೊಂಡಿತ್ತು. ರಾಜೇಂದ್ರ ಅವರು 6 ತಿಂಗಳ ಹಿಂದೆ ಗೃಹಪ್ರವೇಶ ಮಾಡಿದ್ದ ಮನೆ ಕೊಚ್ಚಿಕೊಂಡು ಹೋಗಿದೆ. ದಂಪತಿಗೆ ಮಕ್ಕಳಿರಲಿಲ್ಲ.