ಕಲ್ಮಕಾರಿನ ಮೆಂಟಕಜೆ, ಕೊಪ್ಪಡ್ಕ ಭಾಗದಲ್ಲಿ ಕೃಷಿ ಭೂಮಿ ಕೂಡ ಜರಿಯುತ್ತಿದೆ. ಬಾಳುಗೋಡು ಗ್ರಾಮದ ಉಪ್ಪುಕಳ, ಕೊತ್ನಡ್ಕ ಭಾಗಗಳಲ್ಲಿ ಕೂಡ ಗುಡ್ಡಗಳು ಜರಿಯುತ್ತಿವೆ. ಪರಿಸರದ ಜನತೆ ಭೀತಿಯಿಂದ ಸ್ಥಳಾಂತರಗೊಳ್ಳುತ್ತಿದ್ದಾರೆ. ಬಹುತೇಕ ಕುಟುಂಬಗಳು ಮನೆ ಮಠ ಬಿಟ್ಟು ಸಂಬಂಧಿಕರ ಮನೆ ಸೇರಿದ್ದಾರೆ.
ಕುಮಾರಪರ್ವತದ ಕೆಳಭಾಗದ ದೇವರಗದ್ದೆ, ಮಾನಾಡು ಭಾಗದಲ್ಲೂ ಭೂಕುಸಿತ ಸಂಭವಿಸಿವೆ. ಜನವಸತಿ ಇರುವ ತಳಭಾಗದ ಹಲವು ಸಂಪರ್ಕ ಸೇತುವೆಗಳು ಕೊಚ್ಚಿಹೋಗಿ ಸಂಪರ್ಕ ಕಡಿತಗೊಂಡಿದೆ.
ಜೋಡುಪಾಲಕ್ಕೆ ಖಾದರ್, ನಳಿನ್ ಭೇಟಿ
ಸುಳ್ಯ, ಆ. 18: ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಹತೋಟಿಗೆ ಬರಬೇಕಿದೆ. ಅನಂತರ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ಜೋಡುಪಾಲ ಗುಡ್ಡ ಕುಸಿತ ಹಾಗೂ ಸಂತ್ರಸ್ತ ಶಿಬಿರಕ್ಕೆ ಭೇಟಿ ನೀಡಿದ ಬಳಿಕ ಪತ್ರಕರ್ತರ ಜತೆ ಮಾತನಾಡಿದರು. ಈಗಾಗಲೇ ಗಂಜಿಕೇಂದ್ರಗಳನ್ನು ತೆರೆದು ಸಂತ್ರಸ್ತರಿಗೆ ನೆರವು ನೀಡಲಾಗಿದೆ ಎಂದರು.
ಹಲವು ಕುಟುಂಬಗಳ ರಕ್ಷಣೆ
ಜೋಡುಪಾಲ, ಮದೆನಾಡು, ಸಂಪಾಜೆಯಲ್ಲಿ ಹಲವು ಕುಟುಂಬಗಳನ್ನು ರಕ್ಷಿಸಲಾಗಿದೆ. ಸ್ಥಳೀಯರು ಸಹಕಾರ ನೀಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಹೇಳಿದರು. ಜೋಡುಪಾಲಕ್ಕೆ ಎಸ್‌ಪಿ ರವಿಕಾಂತೇ ಗೌಡ ಜತೆಗೆ ಭೇಟಿ ನೀಡಿ ಪರಿಶೀಲಿಸಿದ ಅನಂತರ ಪತ್ರಕರ್ತರ ಜತೆ ಮಾತನಾಡಿದ ಅವರು ಈಗಾಗಲೇ ಮೂರು ಕಡೆಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ ಎಂದರು.
ಈ ನಡುವೆ ಸಂಸದ ನಳಿನ್ ಕುಮಾರ್ ಕಟೀಲು ಕೂಡ ಜೋಡುಪಾಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement