ದೇವದುರ್ಗ: ತಾಲೂಕಿನಾದ್ಯಂತ ನೂರಾರು ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು, ಸರಕಾರಿ ಕಚೇರಿ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮ ಸೆ.19, 20ರಂದು ನಡೆಯಲಿವೆ ಎಂದು ಶಾಸಕ ಕೆ.ಶಿವನಗೌಡ ನಾಯಕ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಬಿಜೆಪಿ ಸರಕಾರದ ಅವಧಿ ಯಲ್ಲಿ ಈಗಾಗಲೇ ನೂರಾರು ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಮಸರಕಲ್ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಉದ್ಘಾಟನೆ, ಡಾ| ಬಿ.ಆರ್. ಅಂಬೇಡ್ಕರ್ ಭವನ, ಪಶು ಚಿಕಿತ್ಸಾಲಯಕ್ಕೆ ಅಡಿಗಲ್ಲು, ಮಸರಕಲ್ ಗ್ರಾಮದಿಂದ ಚಿಂತಲಕುಂಟಿವರೆಗೆ ಬಿಟಿ ರಸ್ತೆ, ಚಿಂತಲಕುಂಟಿ ಗ್ರಾಮದಲ್ಲಿ ಮುಖ್ಯಮಂತ್ರಿ ಮಾದರಿ ಗ್ರಾಮ ಯೋಜನೆ ಉದ್ಘಾಟನೆ ನಡೆಯಲಿದೆ ಎಂದರು.
ಧರ್ಮನಾಯಕ ತಾಂಡಾದಲ್ಲಿ ಸ.ಕಿ.ಪ್ರಾ.ಶಾಲೆಯ ಎರಡು ಕೋಣೆಗಳ ನಿರ್ಮಾಣಕ್ಕೆಅಡಿಗಲ್ಲು, ರಾಮದುರ್ಗ ಕ್ರಾಸ್ ಅಪ್ರೋಚ್ ಬಿ.ಟಿ. ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು, ಚಿಕ್ಕಹೊನ್ನಕುಣಿ ಗ್ರಾಮದಲ್ಲಿ ಕೆಬಿಜೆಎನ್‌ಎಲ್ ಕಚೇರಿಗಳ ಆಂತರಿಕ ರಸ್ತೆ ನಿರ್ಮಾಣಕ್ಕೆ ಚಾಲನೆ, ಕೊಪ್ಪರ ಗ್ರಾಮದ ಶಾಂತಿನಗರದಲ್ಲಿ ಅಂಗನವಾಡಿ ಕೇಂದ್ರಕ್ಕೆ ಅಡಿಗಲ್ಲು, ದೇವರಗುಡ್ಡ ಗ್ರಾಮದಲ್ಲಿ ಅಪ್ರೋಚ್ ಬಿಟಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಕೋಣಚಪ್ಪಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಣೆ ನಿರ್ಮಾಣಕ್ಕೆ ಅಡಿಗಲ್ಲು, ಅಡುಗೆ ಕೋಣೆ ಉದ್ಘಾಟನೆ ನಡೆಯಲಿದೆ. ಬೆಣೆಕಲ್ ಗ್ರಾಮದಿಂದ ಗುಂಡಗುರ್ತಿವರೆಗೆ ಬಿಟಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಅಡಿಗಲ್ಲು,ಕುರ್ಕಿಹಳ್ಳಿ ಗ್ರಾಮದಲ್ಲಿ ಕುಡಿವ ನೀರಿನ ಯೋಜನೆಗೆ ಕಾಮಗಾರಿಗೆ ಅಡಿಗಲ್ಲು ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.
ತಿಂಥಿಣಿ ಬ್ರಿಜ್, ವೀರಗೋಟ ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ ಉದ್ಘಾಟನೆ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳ ನಿರ್ಮಾಣಕ್ಕೆ ಅಡಿಗಲ್ಲು, ಕಾಂಪೌಂಡ್ ಉದ್ಘಾಟನೆ, ಜಾಲಹಳ್ಳಿ ಗ್ರಾಮದ ವಾರ್ಡ್ ನಂ.2.5.6ರಲ್ಲಿ ಶುದ್ಧ ಕುಡಿವ ನೀರಿನ ಘಟಕಗಳ ಉದ್ಘಾಟನೆ. ಜಾಲಹಳ್ಳಿ ಗ್ರಾಮದಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯ ವಿವಿಧ ಕಾಮಗಾರಿಗಳ ಉದ್ಘಾಟನೆ ನಡೆಯಲಿದೆ ಎಂದು ವಿವರಿಸಿದರು.
ಅಮರಾಪುರು ಗ್ರಾಮದ ಕೆಬಿಜೆಎನ್‌ಎಲ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಉಪವಿಭಾಗ 14ರ ನೂತನ ಕಚೇರಿ ಅಡಿಗಲ್ಲು ಮತ್ತು ಕಚೇರಿ ದುರಸ್ತಿ ಹಾಗೂ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಅಡಿಗಲ್ಲು ನಡೆಯಲಿದೆ. ಅಮರಾಪುರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎರಡು ಶಾಲಾ ಕೊಠಡಿಗಳ ಉದ್ಘಾಟನೆ ಜರುಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನೂರಾರು ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಚುನಾವಣೆ ಸಂದರ್ಭ ಗ್ರಾಮೀಣ ಭಾಗದಲ್ಲಿ ಮತದಾರರಿಗೆ ಕೊಟ್ಟ ಮಾತಿನಂತೆ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳು ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಕಾಶ ಪಾಟೀಲ, ಚಂದ್ರಶೇಖರ ಚಲುವಾದಿ, ಜಹೀರಪಾಷಾ ಸೇರಿ ಇತರರು ಇದ್ದರು.