ಕೈಕಂಬ, ಅ. 24: ಜನರ ಆಕಾಂಕ್ಷೆಗಳನ್ನು ಸಾಕಾರ ಗೊಳಿಸುವುದು ಶಾಸಕನಾಗಿ ನನ್ನ ಕರ್ತವ್ಯವಾಗಿದೆ. ಅವರ ನೋವುಗಳಿಗೆ ಸ್ಪಂದಿಸಿ, ಕ್ಷೇತ್ರವನ್ನು ಅಭಿವೃದ್ಧಿ ಗೊಳಿಸುವುದೇ ನನ್ನ ಮುಖ್ಯಗುರಿ. ಅಭಿವೃದ್ಧಿಗೆ ಜನ, ಕಾರ್ಯಕರ್ತರು, ಸರಕಾರ ಸಹಕರಿಸಿದ್ದಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಶಾಸಕ ಡಾ| ಭರತ್ ಶೆಟ್ಟಿ ವೈ. ಹೇಳಿದರು.
ಶನಿವಾರ ಎಡಪದವು ಗ್ರಾ.ಪಂ. ವ್ಯಾಪ್ತಿಯಲ್ಲಿ 2.62 ಕೋಟಿ ರೂ. ಅನುದಾನದಲ್ಲಿ ಎಡಪದವು ಕುಪ್ಪೆಪದವು- ಮುತ್ತೂರು ಮೂಲಕ ಬಂಟ್ವಾಳ ತಾಲೂಕು ಸಂಪರ್ಕಿಸುವ ರಾಜ್ಯ ಹೆದ್ದಾರಿಯ 4ನೇ ಹಂತದ ಅಭಿವೃದ್ಧಿ, ಎಡಪದವು ಪೇಟೆಯ ಎರಡು ರಿಕ್ಷಾ ನಿಲ್ದಾಣಗಳಿಗೆ ಛಾವಣಿ, ಇಂಟರ್‌ಲಾಕ್ ಅಳವಡಿಕೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳ ಸಹಕಾರ, ಸ್ಪಂದನೆಯಿಂದ ವಿಶೇಷ ಅನುದಾನದಲ್ಲಿ ಈ ಕಾಮಗಾರಿಗಳು ನಡೆಯುತ್ತಿವೆ. ಮಳೆ ಹಾನಿಯ ಬಗ್ಗೆ 25 ಕೋ.ರೂ. ಅನುದಾನ ಕೇಳಿದ್ದೇನೆ. ಒತ್ತಡ ಇದ್ದರೂ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಡಪದವಿ ನಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಉದ್ದೇಶವಿದ್ದು ಅದರ ಪ್ರಕ್ರಿಯೆ ಪ್ರಥಮ ಹಂತದಲ್ಲಿದೆ ಎಂದರು.
ಈ ಸಂದರ್ಭ ಕುಪ್ಪೆಪದವಿನ ಪಡೀಲ್‌ಪದವಿನ ಎರಡು ಪರಿಶಿಷ್ಟ ಪಂಗಡದ ಲೀಲಾ ಹಾಗೂ ಗಿರಿಜಾ ಅವರ ಮನೆಯ ವಿದ್ಯುದೀಕರಣಕ್ಕೆ ಶಾಸಕರು ಚಾಲನೆ ನೀಡಿದರು. ರಸ್ತೆ ಅಪಘಾತದಲ್ಲಿ ಕಾಲಿಗೆ ಬಲವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಎಡಪದವಿನ ರಮೇಶ್ ಪೂಜಾರಿ ಪಾಡ್ಯಾರ್ ಅವರ ಮನೆಗೆ ಶಾಸಕರು ತೆರಳಿ, ವೈಯಕ್ತಿಕವಾಗಿ 10 ಸಾವಿರ ರೂ. ಸಹಾಯಧನ ನೀಡಿದರು.
ಕುಪ್ಪೆಪದವಿನ ಶ್ರೀ ದುರ್ಗೇಶ್ವರೀ ದೇವಿ ದೇಗುಲ, ಮುಚ್ಚಾರು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಭೇಟಿ ನೀಡಿದರು. ಜಿ.ಪಂ. ಸದಸ್ಯ ಜನಾರ್ದನ ಗೌಡ, ತಾ.ಪಂ. ಸದಸ್ಯ ನಾಗೇಶ್ ಶೆಟ್ಟಿ,ಎಡಪದವು ಗ್ರಾ.ಪಂ. ನಿ.ಪೂ. ಅಧ್ಯಕ್ಷೆ ಮಾಲತಿ, ಲೋಕೋಪಯೋಗಿ ಎಂಜಿನಿಯರ್ ಸಂಜೀವ ಕುಮಾರ್ ಜಿ.ಕೆ., ರುಕ್ಮಯ ನಾಯ್ಕ, ಗಣೇಶ್ ಪಾಕಜೆ, ಸತೀಶ್ ಬಳ್ಳಾಜೆ, ಹರೀಶ್ ಮಿಜಾರ್, ಅಶೋಕ್ ನಾಯ್ಕ, ಜಗದೀಶ್ ಪಾಕಜೆ, ಆನಂದ ದೇವಾಡಿಗ, ರಾಮಚಂದ್ರ, ಸುಕುಮಾರ್ ದೇವಾಡಿಗ, ಜಯಂತ್ ಪೂಜಾರಿ ಉಪಸ್ಥಿತರಿ ದ್ದರು. ಗಂಗಾಧರ ಪೂಜಾರಿ ಸ್ವಾಗತಿಸಿ, ಕುಶಲ್ ಕುಮಾರ್ ನಿರೂಪಿಸಿದರು. ಪ್ರಸಾದ್ ಕುಮಾರ್ ವಂದಿಸಿದರು.
ಮೂಲರಪಟ್ಣ ಸೇತುವೆಗೆ ಟೆಂಡರ್ : ಮಂಗಳೂರು ನಗರ ಉತ್ತರ, ಬಂಟ್ವಾಳ ವಿಧಾನಸಭೆ ಕ್ಷೇತ್ರವನ್ನು ಸಂಪರ್ಕಿಸುವ ಮೂಲರಪಟ್ಣ ಸೇತುವೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಈಗಾಗಲೇ ಆಗಿದೆ. ಈ ರಸ್ತೆ ಅಭಿವೃದ್ಧಿಯ ಅಂಗವಾಗಿ ಎಡಪದವು- ಕುಪ್ಪೆಪದವು- ಮುತ್ತೂರು ತನಕ 7.40 ಕಿ.ಮೀ. ಡಾಮರು ಕಾಮಗಾರಿ ನಡೆಯಲಿದೆ. 5.50 ಮೀಟರ್ ಇದ್ದ ರಸ್ತೆಯ 7 ಮೀಟರ್ ತನಕ ವಿಸ್ತರಣೆ ಗೊಳ್ಳಲಿದೆ ಎಂದು ಶಾಸಕ ಡಾ| ಭರತ್ ಶೆಟ್ಟಿ ಹೇಳಿದರು.