Advertisement

ಬಿಬಿಎಂಪಿಗೆ ಭೂಮಿ ಹಸ್ತಾಂತರ

06:20 AM Mar 06, 2019 | |

ಬೆಂಗಳೂರು: “ನಮ್ಮ ಮೆಟ್ರೋ’ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು ಅನುಮತಿ ಸೇರಿದಂತೆ ನಗರದ ಮೂಲಸೌಕರ್ಯಗಳಿಗೆ ಅಗತ್ಯ ಇರುವ ರಕ್ಷಣಾ ಇಲಾಖೆಯ ಭೂಮಿ ಕೊನೆಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಭೂಮಿ ಹಸ್ತಾಂತರಗೊಂಡಿತು. ಈ ಮೂಲಕ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಚಾಲನೆ ದೊರಕಿತು.

Advertisement

ನಗರದ ವಿವಿಧೆಡೆ ಸುಮಾರು ಎಂಟು ಯೋಜನೆಗಳಿಗಾಗಿ 45,165 ಚದರ ಮೀಟರ್‌ (11.17 ಎಕರೆ) ಭೂಮಿಯನ್ನು ರಕ್ಷಣಾ ಇಲಾಖೆಯು ಹಸ್ತಾಂತರಿಸಿತು. ಇದಲ್ಲದೆ, 10,207 ಚ.ಮೀ. ಭೂಮಿಯನ್ನು ಲೈಸನ್ಸ್‌ ಆಧಾರದಲ್ಲಿ ಹಾಗೂ ಎಂ.ಜಿ. ರಸ್ತೆ-ವೆಲ್ಲಾರ ಜಂಕ್ಷನ್‌ ನಡುವೆ ಮೆಟ್ರೋ ಸುರಂಗ ಮಾರ್ಗ ನಿರ್ಮಾಣಕ್ಕಾಗಿ 8,754 ಚ.ಮೀ. ಭೂಮಿಯನ್ನು ನೀಡಿತು.

ಇದಕ್ಕೆ ಪ್ರತಿಯಾಗಿ ಮುಂದಿನ ಎರಡು ತಿಂಗಳಲ್ಲಿ ಈಗಾಗಲೇ ಗುರುತಿಸಿರುವ ಅಂದಾಜು 72 ಎಕರೆ ಭೂಮಿಯನ್ನು ಪಾಲಿಕೆಯು ರಕ್ಷಣಾ ಇಲಾಖೆಗೆ ನೀಡಲಿದೆ. ಇದರ ಮೌಲ್ಯ ರಕ್ಷಣಾ ಇಲಾಖೆ ನೀಡುತ್ತಿರುವ ಭೂಮಿಯ ಮೌಲ್ಯಕ್ಕಿಂತ 61 ಕೋಟಿ ರೂ. ಹೆಚ್ಚಾಗುತ್ತದೆ.  

ನಗರದ ಮೋದಿ ಗಾರ್ಡನ್‌ ಬಳಿ ನಡೆದ ಸಮಾರಂಭದಲ್ಲಿ ಮಂಗಳವಾರ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಹಾಗೂ ರಕ್ಷಣಾ ಇಲಾಖೆಯ ಲೆಫ್ಟಿನೆಂಟ್‌ ಜನರಲ್‌ ಬಾಬು ಅವರು ಪರಸ್ಪರ ಪತ್ರಗಳ ಹಸ್ತಾಂತರ ಮಾಡಿದರು. ಇದಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ ಎಲ್ಲ ಯೋಜನೆಗಳಿಗೆ ಚಾಲನೆ ನೀಡಲಾಯಿತು.
 
ಸಣ್ಣ ಭೂಮಿ; ದೊಡ್ಡ ಅಡೆತಡೆ: ನಿರ್ಮಲಾ ಸೀತಾರಾಮನ್‌ ಮಾತನಾಡಿ, ಸಣ್ಣ ಗಾತ್ರದ ಭೂಮಿಯ ತುಣುಕುಗಳ ಕೊರತೆಯು ಮೂಲಸೌಕರ್ಯ ಯೋಜನೆಗಳಿಗೆ ದಶಕಗಳಿಂದ ದೊಡ್ಡ ತಡೆಗೋಡೆಗಳಾಗಿ ಪರಿಣಮಿಸಿದ್ದವು. ಇವು ಅಂತಿಮವಾಗಿ ಜನರಿಗೆ ಸಮಸ್ಯೆಗಳಾಗಿದ್ದವು. ರಕ್ಷಣಾ ಇಲಾಖೆಯು ಈಗ ಆ ಎಲ್ಲ ಅಡತಡೆಗಳನ್ನು ತೆಗೆದುಹಾಕಿದೆ. ಈ ಮೂಲಕ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗಳನ್ನು ಪೂರ್ಣಗೊಳಿಸಲು ಅನುವು ಮಾಡಿಕೊಟ್ಟಿದೆ ಎಂದರು. 

ಸಾಮಾನ್ಯವಾಗಿ ರಕ್ಷಣಾ ಇಲಾಖೆ ಭೂಮಿಯನ್ನು ಹೀಗೆ ಹಸ್ತಾಂತರಿಸಲು ಬರುವುದಿಲ್ಲ. ಸಮಾನ ಮೌಲ್ಯದ ಹಾಗೂ ಸೂಕ್ತ ಜಾಗದಲ್ಲಿ ಲಭ್ಯವಿರುವ ಭೂಮಿ ಇದ್ದರೆ, ಇದಕ್ಕೆ ಅವಕಾಶ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೂಲಸೌಕರ್ಯಕ್ಕೆ ಪ್ರಧಾನ ಆದ್ಯತೆ ನೀಡಿದ್ದಾರೆ. ಅದರ ಪ್ರತಿಫ‌ಲವೇ ಈಗ ಭೂಮಿ ಹಸ್ತಾಂತರ ಮಾಡಲಾಗುತ್ತಿದೆ ಎಂದು ಹೇಳಿದರು. 

Advertisement

ಉಪನಗರ ಯೋಜನೆ ಶೀಘ್ರ ಜಾರಿ: ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, ನಗರದ ಒಟ್ಟಾರೆ 12 ವಿವಿಧ ಯೋಜನೆಗಳಿಗೆ ಭೂಮಿ ಹಸ್ತಾಂತರಿಸುವ ಮೂಲಕ ರಕ್ಷಣಾ ಇಲಾಖೆಯು ನಮಗೆ ಸ್ಪಂದಿಸಿದೆ. ಇದನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲಾಗುವುದು. ಅಲ್ಲದೆ, ಉಪನಗರ ರೈಲು ಯೋಜನೆಗೂ ಕೇಂದ್ರದ ಒಪ್ಪಿಗೆ ದೊರಕಿದ್ದು, ಶೀಘ್ರ ಜಾರಿ ಆಗಲಿದೆ. ಪೆರಿಫ‌ರಲ್‌ ರಿಂಗ್‌ ರೋಡ್‌, ಎಲಿವೇಟೆಡ್‌ ಕಾರಿಡಾರ್‌ ಕೂಡ ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು ಎಂದರು. 

ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಮಾತನಾಡಿ, ಈವರೆಗೆ ಇದ್ದ ಅಡತಡೆಗಳು ನಿವಾರಣೆ ಆಗಿವೆ ಎಂದರು. ಶಾಸಕ ಅಖಂಡ ಶ್ರೀನಿವಾಸ ದಿಣ್ಣೂರು ರಸ್ತೆ ವಿಸ್ತರಣೆ ಸೇರಿದಂತೆ ಹಲವು ಬೇಡಿಕೆಗಳಿಗೆ ಮನವಿ ಸಲ್ಲಿಸಿದರು. ಸಚಿವ ಕೆ.ಜೆ. ಜಾರ್ಜ್‌, ಮಾಜಿ ಸಚಿವ ರೋಷನ್‌ ಬೇಗ್‌, ಸಂಸದ ಪಿ.ಸಿ. ಮೋಹನ್‌, ಮೇಯರ್‌ ಗಂಗಾಂಬಿಕಾ ಮಲ್ಲಿಕಾರ್ಜುನ, ಮಾಜಿ ಮೇಯರ್‌ ಸಂಪತ್‌ ರಾಜ್‌, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌, ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್‌ ಮತ್ತಿತರರು ಉಪಸ್ಥಿತರಿದ್ದರು.

ಬಿಬಿಎಂಪಿಗೆ ಹಸ್ತಾಂತರಗೊಳ್ಳುತ್ತಿರುವ ಭೂಮಿ
-5.34 ಎಕರೆ- ಈಜಿಪುರ ಒಳವರ್ತುಲ ರಸ್ತೆಯಿಂದ ಸರ್ಜಾಪುರ ಮುಖ್ಯರಸ್ತೆವರೆಗೆ ರಸ್ತೆ ನಿರ್ಮಾಣ 
-0.94 ಎಕರೆ- ಬ್ಯಾಟರಾಯನಪುರದ ರಾಷ್ಟ್ರೀಯ ಹೆದ್ದಾರಿ-7ರಿಂದ ಸಂಜೀವಿನಿನಗರವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ 
-0.50 ಎಕರೆ- ರಾಷ್ಟ್ರೀಯ ಹೆದ್ದಾರಿ-7 ಮತ್ತು ಹೆಬ್ಟಾಳ ಸರೋವರ ಬಡಾವಣೆ ಮಧ್ಯೆ ಆಮೊRà ಬಡಾವಣೆ ಮೂಲಕ ಸಂಪರ್ಕ ರಸ್ತೆ 
-2.63 ಎಕರೆ- ಹೊಸೂರು-ಲಷ್ಕರ್‌ ರಸ್ತೆ ವಿಸ್ತರಣೆಗೆ 
-0.42 ಎಕರೆ- ಹಾಸ್ಮ್ಯಾಟ್‌ ಆಸ್ಪತ್ರೆಯಿಂದ ವಿವೇಕನಗರ 1ನೇ ಮುಖ್ಯರಸ್ತೆವರೆಗಿನ ಅಗರ ರಸ್ತೆ ಅಭಿವೃದ್ಧಿಗೆ 
-0.08 ಎಕರೆ – ಲೊಯರ್‌ ಅಗರ ರಸ್ತೆ ವಿಸ್ತರಣೆಗೆ 
-1.14 ಎಕರೆ- ಡಿ.ಜೆ. ಹಳ್ಳಿಯ ಕಾವಲ್‌ ಬೈರಸಂದ್ರದಿಂದ ಮೋದಿ ಗಾರ್ಡನ್‌ವರೆಗೆ ಪರ್ಯಾಯ ರಸ್ತೆಗೆ 
-0.12 ಎಕರೆ- ಈಜಿಪುರ ಮುಖ್ಯರಸ್ತೆ, ಒಳವರ್ತುಲ ರಸ್ತೆ ಜಂಕ್ಷನ್‌, ಸೋನಿ ವರ್ಲ್ಡ್ ಜಂಕ್ಷನ್‌ ಮತ್ತು ಕೇಂದ್ರೀಯ ಸದನ ಜಂಕ್ಷನ್‌ ಸೇರಿಸಿ ಎಲಿವೇಟೆಡ್‌ ಕಾರಿಡಾರ್‌ ಯೋಜನೆಗೆ ಜಮೀನು

ಲೈಸನ್ಸ್‌ ಆಧಾರದಲ್ಲಿ ಪಡೆದ ಜಮೀನು
-446.85 ಚ.ಮೀ.- ಬಾಣಸವಾಡಿ ಮಾರುತಿ ಸೇವಾನಗರ ಆರ್‌ಒಬಿಗೆ ಹೆಚ್ಚುವರಿ ಲೂಪ್‌ ನಿರ್ಮಾಣ 
-10,207 ಚ.ಮೀ.- ಬೈಯಪ್ಪನಹಳ್ಳಿ ಆರ್‌ಒಬಿ ನಿರ್ಮಾಣ
-1,557 ಚ.ಮೀ.- ಮೆಟ್ರೋ ಸುರಂಗ ಮಾರ್ಗ ನಿರ್ಮಾಣಕ್ಕೆ ಕಾಯಂ ಹಸ್ತಾಂತರ 
-7,197 ಚ.ಮೀ.- ಸುರಂಗ ನಿರ್ಮಾಣಕ್ಕೆ ತಾತ್ಕಾಲಿಕ ಅನುಮತಿ

ರಕ್ಷಣಾ ಇಲಾಖೆಗೆ ನೀಡಲಿರುವ ಭೂಮಿ ವಿವರ
-3.21 ಎಕರೆ- ಕೆ-ಪಾರ್ಕ್‌ ಮತ್ತು ಕೆನ್ಸಿಂಗ್‌ಟನ್‌ ರಸ್ತೆ ಬಳಿ ಸೇರಿ ಒಟ್ಟು ಜಮೀನು 
-6.34 ಎಕರೆ- ಸಕಲೇಶಪುರ ಬಳಿಯ ಕಂದಾಯ ಭೂಮಿ
-12 ಎಕರೆ- ರಾಮನಗರದ ಮಂಚನಬೆಲೆ ಬಳಿ ಕಂದಾಯ ಭೂಮಿ
-50 ಎಕರೆ- ಮಂಡೂರಿನ ಬಿದರಹಳ್ಳಿ ಹೋಬಳಿಯ ಬೆಂಗಳೂರು ಪೂರ್ವ ತಾಲ್ಲೂಕಿನಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next