Advertisement

ಹಡಿಲು ಭೂಮಿ ಕೃಷಿ ಕಟಾವಿಗೆ ಸಿದ್ಧ: 1,000 ಟನ್‌ ಉತ್ಪಾದನೆ ನಿರೀಕ್ಷೆ

08:40 PM Oct 22, 2021 | Team Udayavani |

ಉಡುಪಿ: ಉಡುಪಿ ವಿಧಾನಸಭೆ ಕ್ಷೇತ್ರದಲ್ಲಿ ಕೇದಾರೋತ್ಥಾನ ಟ್ರಸ್ಟ್‌ ನಡೆಸಿದ ಹಡಿಲು ಭೂಮಿ ಕೃಷಿ ಆಂದೋಲನದ ಫ‌ಲಶ್ರುತಿಯಾಗಿ ಫ‌ಸಲು ಬೆಳೆದು ನಿಂತಿದ್ದು ಕಟಾವಿಗೆ ಮಳೆ ಅಡ್ಡಿಯಾಗುತ್ತಿದೆ. ಈ ನಡುವೆ ಸುಮಾರು 1,000 ಟನ್‌ ಸಾವಯವ ಕುಚ್ಚಲು ಅಕ್ಕಿ ಉತ್ಪಾದನೆ ಯಾಗಬಹುದು ಎಂಬ ನಿರೀಕ್ಷೆ ಇದೆ.

Advertisement

ದೀಪಾವಳಿ ಹಬ್ಬಕ್ಕೆ ಅಕ್ಕಿ
ಒಟ್ಟು 1,400 ಎಕ್ರೆ ಹಡಿಲು ಭೂಮಿಯಲ್ಲಿ ಭತ್ತದ ನಾಟಿ ಮಾಡಲಾಗಿತ್ತು. ಇದರಿಂದ ಸ್ಫೂರ್ತಿ ಪಡೆದ ಸುಮಾರು 600 ಎಕ್ರೆ ಪ್ರದೇಶದ ಮಾಲಕರು ಸ್ವತಃ ಗದ್ದೆಯಲ್ಲಿ ಸಾಗುವಳಿ ಮಾಡಿದ್ದರು. ಜೂ. 5 ಪರಿಸರ ದಿನದಂದು ನೆಡಲಾದ ನೇಜಿ ಈಗ ಕಟಾವಿಗೆ ಬಂದಿದೆ. ಅ. 20ರಂದು ಮೊದಲ ಕಟಾವು ನಡೆದಿದೆ. ಅ. 21ರಂದು ಮಳೆ ಕಾರಣ ಕಟಾವು ನಡೆಸಲಾಗಲಿಲ್ಲ. ಅ. 22ರಂದೂ ಕಟಾವು ನಡೆದಿದೆ. ಸುಮಾರು ಹತ್ತು ಎಕ್ರೆ ಗದ್ದೆಯ ಫ‌ಸಲನ್ನು ಕಟಾವು ಮಾಡಲಾಗಿದೆ. ಅಕ್ಕಿ ಗಿರಣಿಗೆ ಒಮ್ಮೆ ಕೊಡುವುದಾದರೆ 13 ಟನ್‌ ಭತ್ತ ಬೇಕು. ಒಂದೆರಡು ದಿನಗಳಲ್ಲಿ ಈ ಭತ್ತದಿಂದ ಅಕ್ಕಿ ಉತ್ಪಾದನೆಯಾಗಲಿದೆ. ದೀಪಾವಳಿ ಹಬ್ಬದ ಹೊತ್ತಿಗೆ “ಉಡುಪಿ ಕೇದಾರ ಕಜೆ’ ಕುಚ್ಚಲು ಅಕ್ಕಿ ಬ್ರ್ಯಾಂಡ್‌ ರೂಪದಲ್ಲಿ ಹೊರಬರುವ ನಿರೀಕ್ಷೆ ಇದೆ.

ಪಾಲಿಶ್ಡ್ – ಅನ್‌ಪಾಲಿಶ್ಡ್ ಅಕ್ಕಿ
ಉಡುಪಿ ಕೇದಾರ ಕಜೆಯನ್ನು ಸಾವಯವ ಬ್ರ್ಯಾಂಡ್‌ ಮಾಡಿ ಮಾರುಕಟ್ಟೆಗೆ ಒದಗಿಸುವ ಪ್ರಯತ್ನ ನಡೆದಿದೆ. ಅ. 21ರಂದು ರಾಜ್ಯ ಸಾವಯವ ಕೃಷಿ ಮಿಷನ್‌ ಅಧಿಕಾರಿ ವರ್ಗದವರು ಗದ್ದೆಗಳಿಗೆ ಭೇಟಿ ನೀಡಿ ಹೋಗಿದ್ದಾರೆ. ಪಾಲಿಶ್ಡ್ ಮತ್ತು ಅನ್‌ಪಾಲಿಶ್ಡ್ ಎರಡು ರೀತಿಯ ಕುಚ್ಚಲು ಅಕ್ಕಿ ಬರಲಿದೆ.

ಉತ್ತಮ ದರದ ನಿರೀಕ್ಷೆ
ಮಳೆ ಬಂದ ಕಾರಣ ನಷ್ಟವಾಗುವ ಅಥವಾ ಲಾಭ ಕಡಿಮೆಯಾಗುವ ಸಾಧ್ಯತೆ ಇದೆ. ಉಡುಪಿಯಲ್ಲಿ ತುಂಡುಭೂಮಿಗಳು ಹೆಚ್ಚಿಗೆ ಇದ್ದು 1,400 ಎಕ್ರೆ ಪ್ರದೇಶವು ಸುಮಾರು 3,000 ಮಾಲಕರಿಗೆ ಸೇರಿವೆ. ಇವರು ಉಚಿತವಾಗಿ ಗದ್ದೆಯನ್ನು ನಾಟಿ ಮಾಡಲು ಬಿಟ್ಟು ಕೊಟ್ಟಿದ್ದಾರೆ. ಇವರಿಗೆ ಹುಲ್ಲು ಬಿಟ್ಟು ಕೊಡುವ ಚಿಂತನೆ ಮೊದಲಿಗೆ ಇತ್ತು. ಈಗ ಮಳೆಯಿಂದ ಹುಲ್ಲು ಹಾಳಾಗಿ ಹೋಗುತ್ತಿವೆ. ಈಗ ಇನ್ನೂ 5,000 ಎಕ್ರೆ ಪ್ರದೇಶ ಹಡಿಲು ಭೂಮಿ ಇದೆ. ಅಕ್ಕಿಗೆ ಇನ್ನೂ ದರವನ್ನು ನಿಗದಿಪಡಿಸಿಲ್ಲ. ಶುದ್ಧ ಸಾವಯವ ಉತ್ಪನ್ನವಾದ ಈ ಅಕ್ಕಿಗೆ ಉತ್ತಮ ದರ ಸಿಕ್ಕಿದರೆ ಮುಂದಿನ ವರ್ಷ ದೊಡ್ಡ ಪ್ರಮಾಣದಲ್ಲಿ ಹಡಿಲು ಭೂಮಿಯಲ್ಲಿ ಭತ್ತದ ಕೃಷಿ ನಳನಳಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ:ಸಿದ್ದರಾಮಯ್ಯ, ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ? : ಬಿಜೆಪಿ ಪ್ರಶ್ನೆ

Advertisement

ಕಾರ್ಪೋರೆಟ್‌- ಕೋ ಆಪರೇಟಿವ್‌
187 ಶಾಲಾ ಕಾಲೇಜುಗಳ ಎನ್ನೆಸ್ಸೆಸ್‌, ಸ್ಕೌಟ್ಸ್‌ ಗೈಡ್ಸ್‌, ಎನ್‌ಸಿಸಿ ವಿದ್ಯಾರ್ಥಿಗಳು, ರಾಜಕೀಯ ಪಕ್ಷದ ನಾಯಕರು, ಉದ್ಯಮಿಗಳು, ಸಿನೆಮಾ ನಟರು, ಪತ್ರಕರ್ತರು ಹೀಗೆ ವಿವಿಧ ಕ್ಷೇತ್ರಗಳ ಜನರು ನಾಟಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಆಧುನಿಕ ವಿದ್ಯೆ ಕಲಿಯುವವರು ಗದ್ದೆಗೆ ಇಳಿಯುವುದಿಲ್ಲ ಎಂಬ ಮಾತು ಇರುವ ನಡುವೆಯೂ ಸುಮಾರು 4,800 ವಿದ್ಯಾರ್ಥಿಗಳು ಗದ್ದೆಗಿಳಿದು ನಾಟಿ ಮಾಡಿದ್ದರು. ಇವರೇ ಬೆಳೆದ ಫ‌ಸಲು ಆದ ಕಾರಣ ಇದರ “ಬೇಡಿಕೆ ರುಚಿ’ಯೂ ಹೆಚ್ಚುತ್ತಿದೆ. ಕಾರ್ಪೋರೆಟ್‌ ಕೃಷಿ ಎನ್ನುತ್ತಿದ್ದ ಕಾಲವೊಂದಿತ್ತು. ಉಡುಪಿ ಕ್ಷೇತ್ರದಲ್ಲೀಗ ಕೋ ಆಪರೇಟಿವ್‌ ಕೃಷಿಯಾಗಿದೆ.

ಬರಲಿದೆ ಗಿಫ್ಟ್ ಪ್ಯಾಕ್‌
ಬೆಂಗಳೂರು, ಪುಣೆ, ಮುಂಬಯಿ, ಹುಬ್ಬಳ್ಳಿ, ಬೆಳಗಾವಿ, ನಾಗ್ಪುರ, ಶೋಲಾಪುರ ಮೊದಲಾದೆಡೆ ಇರುವ ಕರಾವಳಿಯ ಕುಚ್ಚಲು ಅಕ್ಕಿ ಸೇವನೆ ಮಾಡುವವರಿಗೆ ಈ ಅಕ್ಕಿಯನ್ನು ಪೂರೈಸುವ ಗುರಿ ಇದೆ. ಇಲ್ಲಿ ಇರುವ ಮಂಗಳೂರು ಸ್ಟೋರ್ ಮಾಲಕರಿಗೆ ಅಕ್ಕಿ ಪೂರೈಸಲಾಗುವುದು. 2, 5, 10, 25 ಕೆ.ಜಿ. ಅಕ್ಕಿಯನ್ನು ಚೀಲದಲ್ಲಿ ತುಂಬಿ ಮಾರುಕಟ್ಟೆ ಮಾಡುವ ಸಿದ್ಧತೆ ನಡೆಯುತ್ತಿದೆ. ಈ ಚೀಲಕ್ಕೆ ಉಡುಪಿ ಕೃಷ್ಣನ ಲಾಂಛನವನ್ನು ಮುದ್ರಿಸಲಾಗುತ್ತಿದೆ. ವಿಶೇಷ ಸಮಾರಂಭಗಳಲ್ಲಿ ಉಡುಗೊರೆ (ಗಿಫ್ಟ್) ಕೊಡುವ ಪರಿಪಾಠವಿರುವುದರಿಂದ ಇಂತಹವರಿಗಾಗಿ ಎರಡು ಕೆ.ಜಿ.ಯ ಗಿಫ್ಟ್ ಪ್ಯಾಕ್‌ (ಸುಮಾರು 100 ರೂ. ಅಂದಾಜು ಮೌಲ್ಯ) ಸಿದ್ಧಪಡಿಸುವ ಗುರಿಯೂ ಇದೆ. ಈಗ ಆನ್‌ಲೈನ್‌ ವ್ಯಾಪಾರ ವಹಿವಾಟು ಹೆಚ್ಚುತ್ತಿರುವುದರಿಂದ ಆನ್‌ಲೈನ್‌ ಬುಕ್ಕಿಂಗ್‌ಗೆ ಆದ್ಯತೆ ನೀಡಲಾಗುತ್ತದೆ.

ಬೇಡಿಕೆ ಹೆಚ್ಚಳ
ಈಗ ಉತ್ಪಾದಿಸುವ ಅಕ್ಕಿ ವಿಷಮುಕ್ತ ಶುದ್ಧ ಸಾವಯವ ಅಕ್ಕಿ. ಇದರ ರುಚಿ ಈಗ ಜನರಿಗೆ ಇಲ್ಲವಾಗಿದೆ. ಇದರ ರುಚಿಯನ್ನು ಜನರಿಗೆ ತೋರಿಸಿದರೆ ಮತ್ತೆ ಇದಕ್ಕೆ ಉತ್ತಮ ಬೇಡಿಕೆ ಬರುತ್ತದೆ ಎಂಬ ವಿಶ್ವಾಸವಿದೆ. ಏಕೆಂದರೆ ಹಿಂದೆ ಸಾವಯವ ಅಕ್ಕಿಯನ್ನು ಊಟ ಮಾಡಿದವರಿಂದ ಬೇಡಿಕೆ ಬರುತ್ತಿದೆ. ದೀಪಾವಳಿ ಸಮಯದಲ್ಲಿ “ಉಡುಪಿ ಕೇದಾರ ಕಜೆ’ ಬ್ರ್ಯಾಂಡೆಡ್‌ ಅಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಗುರಿ ಇರಿಸಿಕೊಂಡಿದ್ದೇವೆ.
-ಕೆ.ರಘುಪತಿ ಭಟ್‌, ಕೇದಾರೋತ್ಥಾನ ಟ್ರಸ್ಟ್‌ನ ಪದನಿಮಿತ್ತ ಅಧ್ಯಕ್ಷರು, ಶಾಸಕರು, ಉಡುಪಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next