ಸಕಲೇಶಪುರ: ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಲು ಬಳಿ ಗುಡ್ಡಕುಸಿತಗೊಂಡು ಹಲವು ವಾಹನಗಳು ಮಣ್ಣಿನಡಿ ಸಿಲುಕಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ಮಂಗಳವಾರವಷ್ಟೇ ದೊಡ್ಡತಪ್ಲು ಭೂ ಕುಸಿತ ಸಂಭವಿಸಿದ್ದು ಇಂದು ಮತ್ತೆ ಗುಡ್ಡ ಕುಸಿದು ಕಂಟೈನರ್ ವಾಹನ ಸೇರಿದಂತೆ ಹಲವು ವಾಹನಗಳು ಮಣ್ಣಿನಡಿ ಸಿಲುಕಿದೆ, ಪಲ್ಡಿಯಾದ ಕಂಟೇನರ್‌ನಲ್ಲಿ ಚಾಲಕ ಸಿಲುಕಿದ್ದು ರಕ್ಷಣೆ ಕಾರ್ಯ ನಡೆಯುತ್ತಿದೆ.
ಗುಡ್ಡ ಕುಸಿತದಿಂದ ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು – ಮಂಗಳೂರು ಸಂಪರ್ಕ ಕಡಿತಗೊಂಡು ಸಂಚಾರ ಬಂದ್ ಆಗಿದೆ.
ಗುಡ್ಡ ಜರಿತದಿಂದ ಹೆದ್ದಾರಿಯ ಎರಡೂ ಬದಿಯಲ್ಲೂ ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತಿದ್ದು ಸವಾರರು ಪರದಾಡುವಂತಾಗಿದೆ.
ಇಂದು ಬೆಳಿಗ್ಗೆ ಇದೇ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣಭೈರೇಗೌಡ ಭೇಟಿ ನೀಡಿದ್ದು ಸಂಜೆಯ ವೇಳೆ ಸುರಿದ ಧಾರಾಕಾರ ಮಳೆಯಿಂದ ಗುಡ್ಡ ಕುಸಿದಿದೆ. ಪರಿಣಾಮ ಶಿರಾಡಿಘಾಟ್ ರಸ್ತೆಯಲ್ಲಿ ಮತ್ತೆ ಸಂಚಾರ ಬಂದ್ ಆಗಿದೆ.