Advertisement

ಹತ್ತು ದಿನದೊಳಗೆ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಜಾರಿ: ಅಶೋಕ್‌

08:42 PM Jun 18, 2020 | Sriram |

ಬೆಂಗಳೂರು: ವ್ಯವಸಾಯ ಮತ್ತು ಕೈಗಾರಿಕೆ ಒಟ್ಟಿಗೆ ಹೋದಾಗ ಮಾತ್ರ ರಾಜ್ಯದ ಬೆಳವಣಿಗೆ ಸಾಧ್ಯ. ಆ ಹಿನ್ನೆಲೆಯಲ್ಲಿ ಹತ್ತು ದಿನಗಳೊಳಗೆ ಭೂ ಸುಧಾರಣೆ ತಿದ್ದುಪಡಿ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

Advertisement

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕ ಮಹಾಸಂಸ್ಥೆ ಗುರುವಾರ ಹಮ್ಮಿಕೊಂಡಿದ್ದ “ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಹಿಂದಿನ ಕಾಯ್ದೆಯು ಕೆಲವು ಅಧಿಕಾರಿಗಳು ಹಣ ಮಾಡಿಕೊಳ್ಳಲು ಅನುಕೂಲವಾಗಿತ್ತೇ ಹೊರತು ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾಗಿರಲಿಲ್ಲ. ಹೀಗಾಗಿಯೇ ಬಿಜೆಪಿ ಸರಕಾರ ಈ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.

ಈಗಾಗಲೇ ಶೇ. 80ರಷ್ಟು ಜನ ಕಾಯ್ದೆಯನ್ನು ಸ್ವಾಗತಿಸುತ್ತಿದ್ದು, ಶೇ. 20ರಷ್ಟು ಮಂದಿ ರಾಜಕೀಯ ಕಾರಣಕ್ಕೆ ವಿರೋಧಿಸುತ್ತಿದ್ದಾರೆ ಎಂದರು.

ಆಂಧ್ರಪ್ರದೇಶ, ತಮಿಳುನಾಡು, ಗುಜರಾತ್‌, ಮಹಾರಾಷ್ಟ್ರ ಸಹಿತ ಹಲವು ರಾಜ್ಯಗಳಲ್ಲಿ ಈ ರೀತಿಯ ಕಾಯ್ದೆಯಿಲ್ಲ. ಆ ಹಿನ್ನೆಲೆಯಲ್ಲಿ ಆ ರಾಜ್ಯಗಳು ಕೃಷಿ ಮತ್ತು ಕೈಗಾರಿಕೆಗಳ ವಿಚಾರದಲ್ಲಿ ನಮ ¾ರಾಜ್ಯಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಪ್ರಗತಿ ಸಾಧಿಸಿವೆ. ರಾಜ್ಯದಲ್ಲಿ ಕೃಷಿ ಬೆಳವಣಿಗೆ ಜತೆಗೆ ಯುವಕರಿಗೆ ಉದ್ಯೋಗ ಕೂಡ ದೊರೆಯಬೇಕು ಎಂಬ ನಿಟ್ಟಿನಲ್ಲಿ ಸರಕಾರ ಈ ಹೆಜ್ಜೆಯಿರಿಸಿದೆ ಎಂದರು.

Advertisement

1974ರಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿಯಾದಂದಿನಿಂದ ಇಲ್ಲಿಯವರೆಗೂ ನಿಯಮ ಉಲ್ಲಂಘನೆ ಸಂಬಂಧಿಸಿ ಸುಮಾರು 83 ಸಾವಿರ ಪ್ರಕರಣಗಳು ದಾಖಲಾಗಿದ್ದು, 1.76 ಲಕ್ಷ ಎಕರೆ ಪ್ರದೇಶವನ್ನು ವಾಪಸ್‌ ಪಡೆಯಬೇಕಿದೆ. ಆದರೆ ಒಂದು ಎಕರೆ ಪ್ರದೇಶವನ್ನು ಕೂಡ ವಾಪಸ್‌ ಪಡೆದಿಲ್ಲ. ಈವರೆಗೂ ಅಧಿಕಾರಿಗಳು ಲಾಭ ಮಾಡಿಕೊಳ್ಳಲು ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂದರು.
ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯ ಹಿನ್ನೆಲೆಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬೀಳಲಿದೆ.

ಕೈಗಾರಿಕೆಗಳು ಕೂಡ ಹಳ್ಳಿಗಳತ್ತ ಮುಖ ಮಾಡಲಿವೆ. ರಾಜ್ಯದಲ್ಲಿ ಕೈಗಾರಿಕೆಗೆ ಶೇ. 2ರಷ್ಟು ಮಾತ್ರ ಭೂಮಿ ಬಳಕೆಯಾಗಿದ್ದು, ಒಂದು ಕೋಟಿ ಜನರಿಗೆ ಉದ್ಯೋಗ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಕೃಷಿ ವಲಯದಲ್ಲೂ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.

ಎಫ್‌ಕೆಸಿಸಿಐ ಅಧ್ಯಕ್ಷ ಸಿ. ಆರ್‌. ಜನಾರ್ದನ ಮಾತನಾಡಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದಾಗಿ ರೈತರಿಗೆ ಯಾವುದೇ ಪ್ರತಿಕೂಲ ಪರಿಣಾಮವಾಗುವುದಿಲ್ಲ. ಇದರಿಂದಾಗಿ ಕೃಷಿ ಚಟುವಟಿಕೆಗಳು ಮತ್ತಷ್ಟು ದ್ವಿಗುಣಗೊಳ್ಳುವ ಅವಕಾಶವಿದೆ. ಕೈಗಾರಿಕೆಗಳಿಗೆ ಕೃಷಿ ಭೂಮಿಯನ್ನು ಖರೀದಿಸಲು ಸರಕಾರ ಮಾನದಂಡಗಳನ್ನು ರೂಪಿಸಿದ್ದು, ಅಗತ್ಯತೆಯ ಆಧಾರದಲ್ಲಿ ಅನುಮೋದನೆ ದೊರೆಯುತ್ತದೆ. ಆ ಹಿನ್ನೆಲೆಯಲ್ಲಿ ಎಫ್ಕೆಸಿಸಿಐ ಸರಕಾರದ ನಿರ್ಧಾರವನ್ನು ಸ್ವಾಗತಿಸುತ್ತದೆ ಎಂದು ತಿಳಿಸಿದರು.

ಕೈಗಾರಿಕೆ ಉಪ ಸಮಿತಿ ಅಧ್ಯಕ್ಷ ಸತೀಶ್‌, ಎಫ್ಕೆಸಿಸಿಐನ ಹಿರಿಯ ಉಪಾಧ್ಯಕ್ಷ ಪೆರಿಕಲ್‌ ಸುಂದರ್‌, ಐ.ಎಸ್‌.ಪ್ರಸಾದ್‌ ಸಹಿತ ಮತ್ತಿತರರು ಉಪಸ್ಥಿತರಿದ್ದರು.

ಸರಕಾರದ ಆದಾಯ ಇಳಿಕೆ
ರಾಜ್ಯಕ್ಕೆ ಪ್ರತಿ ತಿಂಗಳು ಸುಮಾರು 10 ಸಾವಿರ ಕೋ. ರೂ.ಆದಾಯ ಬರುತ್ತಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ 3 ಕೋ. ರೂ.ಕೂಡ ನಿರೀಕ್ಷೆ ಮಾಡುವುದು ಈಗ ಕಷ್ಟವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಆದಾಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಸಚಿವ ಆರ್‌.ಅಶೋಕ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next