Advertisement

ಸಾಮೂಹಿಕ ಕಣಕ್ಕೆ ಭೂಮಿ ಸಮಸ್ಯೆ

04:56 PM Oct 06, 2018 | |

ಹಾವೇರಿ: ಭೂಮಿಯ ಸಮಸ್ಯೆಯಿಂದಾಗಿ ಮಹಾತ್ಮಗಾಂಧಿ  ಉದ್ಯೋಗ ಖಾತ್ರಿ ಯೋಜನೆಯ ಮಹತ್ವಾಕಾಂಕ್ಷಿ, ರೈತೋಪಯೋಗಿ ಸಾಮೂಹಿಕ ಕಣ ನಿರ್ಮಾಣ ಯೋಜನೆಗೆ ಜಿಲ್ಲೆಯಲ್ಲಿ ಹಿನ್ನಡೆಯಾಗಿದೆ.

Advertisement

ಜಿಲ್ಲೆಯಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರೇ ಹೆಚ್ಚಾಗಿದ್ದು ಅವರಿಗೆ ಕಣ ಮಾಡಿಕೊಳ್ಳಲು ಸಹ ಪ್ರತ್ಯೇಕ ಜಾಗೆ ಇಲ್ಲ. ಹೀಗಾಗಿ ಇಂಥ ರೈತರು ತಮ್ಮ ಗ್ರಾಮದಲ್ಲಿ ಹಾದು ಹೋಗಿರುವ ರಸ್ತೆ, ಹೆದ್ದಾರಿಗಳನ್ನೇ ಕಣಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಪೊಲೀಸ್‌ ಅಧಿಕಾರಿಗಳು ರಸ್ತೆ ಮೇಲೆ ಬೆಳೆಗಳನ್ನು ಒಣಗಿಸದಿರಲು ಸೂಚಿಸುತ್ತಿದ್ದಾರೆ. ಇದರಿಂದಾಗಿ ರೈತರು ಕಣ ಸಮಸ್ಯೆ ಎದುರಿಸುತ್ತಿದ್ದಾರೆ.

ವಾಹನ, ಜನ ಸಂಚಾರದ ರಸ್ತೆಗಳನ್ನು ರೈತರು ಸುಗ್ಗಿಯ ಕಾಲದಲ್ಲಿ ಕಣಗಳಾಗಿ ಬಳಸಿಕೊಳ್ಳುತ್ತಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತದೆ. ರೈತರು, ವಾಹನ ಚಾಲಕರ ನಡುವೆ ಆಗಾಗ ವಾಗ್ವಾದ-ಜಗಳ ನಡೆಯುತ್ತಲೇ ಇದೆ. ಜತೆಗೆ ರಸ್ತೆ ಮೇಲೆ ಬೆಳೆ ಒಣಗಿಸುವುದು, ಸ್ವತ್ಛಗೊಳಿಸುವುದು ಮಾಡುವುದರಿಂದ ಅಪಘಾತಗಳಿಗೂ ಆಸ್ಪದ ನೀಡುತ್ತಿದೆ.

ಯೋಗ್ಯ ಬೆಲೆಯೂ ಸಿಗುತ್ತಿಲ್ಲ: ರೈತರು ಕಣ ಇಲ್ಲದೇ ಇರುವುದರಿಂದ ಬೆಳೆಗಳನ್ನು ತಮ್ಮೂರಿನ ರಸ್ತೆ ಮೇಲೆ ಒಂದಿಷ್ಟು ಒಣಗಿಸಿಕೊಳ್ಳುತ್ತಾರೆ. ಮತ್ತೆ ಹಲವರು ಕಣ ಇಲ್ಲದ ಸಮಸ್ಯೆಯಿಂದಾಗಿ ಬೆಳೆಯನ್ನು ಹಸಿಹಸಿಯಾಗಿಯೇ ಮಾರುಕಟ್ಟೆಗೆ ತಂದು ಮಾರುಕಟ್ಟೆ ಆವರಣದಲ್ಲಿಯೇ ಒಂದೆರಡು ದಿನ ಇದ್ದು ಒಣಗಿಸಿಕೊಳ್ಳುತ್ತಿದ್ದಾರೆ. ರಸ್ತೆ ಮೇಲೆ, ಮಾರುಕಟ್ಟೆ ಆವರಣದಲ್ಲಿ ಎಷ್ಟೇ ಒಣಗಿಸಿದರೂ ಅದು ಕಟ್ಟಡಗಳ ನೆರಳು, ಸರಿಯಾಗಿ ಇಡೀ ದಿನ ಬಿಸಿಲು ತಾಗದೆ ಇರುವ ಕಾರಣದಿಂದ ಅರೆಬರೆ ಒಣಗಿದ ಬೆಳೆಗೆ ಯೋಗ್ಯ ಬೆಲೆ ಸಿಗದೆ, ಕಡಿಮೆ ದರಕ್ಕೆ ಮಾರಿ ಮನೆಗೆ ಹೋಗುವ ದುಸ್ಥಿತಿಯೂ ರೈತದ್ದಾಗಿದೆ.

ಭೂಮಿ ಕೊರತೆ: ರಸ್ತೆಗಳನ್ನು ಕಣಗಳನ್ನಾಗಿ ಮಾಡಿಕೊಳ್ಳುವುದನ್ನು ತಪ್ಪಿಸಿ ಸಣ್ಣ ಮತ್ತು ಅತಿ ಸಣ್ಣ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮಹಾತ್ಮಾಗಾಂಧಿ  ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಮೂಹಿಕ ಕಣ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದೆ. ಆದರೆ, ಸಾಮೂಹಿಕ ಕಣ ನಿರ್ಮಾಣಕ್ಕೆ ಸರ್ಕಾರಿ ಜಾಗೆಯ ಕೊರತೆ ಯೋಜನೆ ಅನುಷ್ಠಾನಕ್ಕೆ ಅಡ್ಡಿಯಾಗಿದೆ.

Advertisement

ಜಿಲ್ಲೆಯಲ್ಲಿ ಒಟ್ಟು 400 ಸಾಮೂಹಿಕ ಕಣ ನಿರ್ಮಿಸುವ ಗುರಿ ಹೊಂದಲಾಗಿದೆ. ಆದರೆ, ಸಾಮೂಹಿಕ ಕಣ ನಿರ್ಮಾಣಕ್ಕೆ ಬೇಕಾದ ಸರ್ಕಾರಿ ಜಾಗೆ ಸೂಕ್ತ ಸ್ಥಳದಲ್ಲಿ ಸಿಗುತ್ತಲೇ ಇಲ್ಲ. ಹೀಗಾಗಿ ಈವರೆಗೆ ಕೇವಲ 15-20 ಸಾಮೂಹಿಕ ಕಣಗಳು ಮಾತ್ರ ಆಗಿವೆ. ಸರ್ಕಾರಿ ಜಮೀನು ಸಿಗದೇ ಇರುವುದರಿಂದ ಅಧಿಕಾರಿಗಳು ಸಹ ಈ ಯೋಜನೆ ಅನುಷ್ಠಾನಕ್ಕೆ ನಿರಾಸಕ್ತಿ ತೋರುತ್ತಿದ್ದು, ಸಾಮೂಹಿಕ ಕಣ ನಿರ್ಮಾಣ ಕಠಿಣವಾಗಿ ಮಾರ್ಪಟ್ಟಿದೆ.

ಸರ್ಕಾರ ರೈತರ ಅನುಕೂಲಕ್ಕಾಗಿ ನರೇಗಾ ಯೋಜನೆಯಲ್ಲಿ ಸಾಮೂಹಿಕ ಕಣ ನಿರ್ಮಾಣಕ್ಕೆ ಅವಕಾಶ ಕೊಟ್ಟಿದೆಯಾದರೂ ಅದಕ್ಕೆ ಬೇಕಾಗುವ ಭೂಮಿ ಬಗ್ಗೆ ಯಾವುದೇ ಸ್ಪಷ್ಟ ನಿರ್ದೇಶನ ನೀಡಿಲ್ಲ. ಹೀಗಾಗಿ ಸರ್ಕಾರಿ ಜಾಗೆ ಸಿಗದೇ ಇದ್ದಲ್ಲಿ ಖಾಸಗಿಯಾಗಿ ಖರೀದಿಸಿ ರೈತರಿಗೆ ನೀಡುವ ವ್ಯವಸ್ಥೆ ಜಾರಿಗೆ ತರಬೇಕಿದೆ. ಆಗ ಮಾತ್ರ ರೈತರಿಗೆ ನಿಜವಾಗಿಯೂ ಸಹಾಯ ಮಾಡಿದಂತಾಗುತ್ತದೆ.

ರಸ್ತೆಯಲ್ಲಿ ಬೆಳೆ ಹಾಕಬೇಡಿ
ರಸ್ತೆ ಮೇಲೆ ಬೆಳೆಗಳನ್ನು ಹಾಕುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಹಂಸಭಾವಿ ಪೊಲೀಸ್‌ ಠಾಣೆ ವ್ಯಾಪ್ತಿಯ ದೀವಗಿಹಳ್ಳಿ ಗ್ರಾಮದಲ್ಲಿ ಸೂರ್ಯಕಾಂತಿ ಬೆಳೆ ಹಾಕಿದ್ದರಿಂದ ವಾಹನ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ. ಕಾರಣ ರೈತರು ಯಾವುದೇ ಕಾರಣಕ್ಕೂ ಬೆಳೆಗಳನ್ನು ರಸ್ತೆಯ ಮೇಲೆ ಹಾಕಬಾರದು. ತಪ್ಪಿದಲ್ಲಿ ಅಂಥವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.
 ಕೆ. ಪರಶುರಾಮ,
ಎಸ್ಪಿ, ಹಾವೇರಿ.

ಸಾಮೂಹಿಕ ಕಣ ನಿರ್ಮಾಣ ಯೋಜನೆ ರೈತರ ಪಾಲಿಗೆ ಭಾರಿ ಬಹುಪಯೋಗಿ ಯೋಜನೆಯಾಗಿದೆ. ಆದರೆ, ಸಾಮೂಹಿಕ ಕಣ ನಿರ್ಮಾಣಕ್ಕೆ ಸರ್ಕಾರಿ ಭೂಮಿ ಸಿಗುತ್ತಿಲ್ಲ. ಹೀಗಾಗಿ ಸರ್ಕಾರ ಖಾಸಗಿಯವರಿಂದಭೂಮಿ ಖರೀದಿಸಿ ರೈತರಿಗೆ ಸಾಮೂಹಿಕ ಕಣ ನಿರ್ಮಿಸಿಕೊಡುವ ವ್ಯವಸ್ಥೆ ಮಾಡಬೇಕು.
 ಶಿವಯೋಗಿ ಬೆನ್ನೂರು, ರೈತ 

ನರೇಗಾ ಯೋಜನೆಯಲ್ಲಿ ಸಾಮೂಹಿಕ ಕಣ ನಿರ್ಮಾಣ ಮಾಡಲು ಗ್ರಾಮೀಣ ಭಾಗದಲ್ಲಿ ಸರ್ಕಾರಿ ಜಮೀನು ದೊರೆಯುತ್ತಿಲ್ಲ. ಹೀಗಾಗಿ ಸಾಕಷ್ಟು ಸಾಮೂಹಿಕ ಕಣ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು.
 ಎಸ್‌.ಕೆ. ಕರಿಯಣ್ಣನವರ,
 ಜಿಪಂ ಅಧ್ಯಕ್ಷರು

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next