Advertisement

ಚಾಲನಾ ಪರೀಕ್ಷಾ ಪಥಕ್ಕೆ ಭೂಮಿ ಸಮಸ್ಯೆ?

03:15 PM Mar 12, 2022 | Team Udayavani |

ಬೀದರ: ಚಾಲಕರಲ್ಲಿ ಪಕ್ವತೆ ಮೂಡಿಸುವುದರಿಂದ ಅಪಘಾತ ಘಟನೆಗಳನ್ನು ತಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಸ್ವಯಂ ಚಾಲಿತ ವಿದ್ಯುನ್ಮಾನ ಚಾಲನಾ ಪರೀಕ್ಷಾ ಕೇಂದ್ರಗಳ ನಿರ್ಮಾಣಕ್ಕೆ ಒತ್ತು ನೀಡುತ್ತಿದ್ದು, ಅದರಂತೆ ಪ್ರಸಕ್ತ ಬಜೆಟ್‌ನಲ್ಲಿ ಆಧುನಿಕ ತಂತ್ರಜ್ಞಾನವುಳ್ಳ ಪಥವನ್ನು ಸ್ಥಾಪಿಸುವ ಬಗ್ಗೆ ಘೋಷಿಸಲಾಗಿದೆ. ಆದರೆ, ಪರೀಕ್ಷಾ ಕೇಂದ್ರ ನಗರ ಪ್ರದೇಶದಿಂದ 10 ಕಿ.ಮೀ. ದೂರದಲ್ಲಿ ಸ್ಥಾಪನೆ ಸಾಧ್ಯತೆ ಇರುವುದು ಜನರ ಬೇಸರಕ್ಕೆ ಕಾರಣವಾಗಲಿದೆ.

Advertisement

ನಗರದ ನೌಬಾದ್‌ನ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಸದ್ಯ ಕಚೇರಿಯ ಸ್ವಂತ ಜಾಗದಲ್ಲಿ ವಾಹನಗಳ ಚಾಲನಾ ಪರೀಕ್ಷೆ ನಡೆಸಲಾಗುತ್ತಿದೆ.

ಸರ್ಕಾರ ಬೀದರ ನಗರದಿಂದ 10 ಕಿ.ಮೀ. ಅಂತರದಲ್ಲಿರುವ “ಐಸಪುರ’ ಬಳಿ ವಾಹನ ಚಾಲನಾ ಪರೀಕ್ಷಾ ಕೇಂದ್ರ ನಿರ್ಮಾಣಕ್ಕಾಗಿ 8 ಎಕರೆ ಜಮೀನನ್ನು ಆರ್‌ಟಿಒ ಕಚೇರಿಗೆ ಮಂಜೂರು ಮಾಡಲಾಗಿದೆ. ಇತ್ತಿಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿರುವ ಆಯ-ವ್ಯಯದಲ್ಲಿ ರಸ್ತೆ ಸುರಕ್ಷತಾ ನಿಧಿ ಯಡಿ ಬೀದರ ಸೇರಿ 9 ನಗರಗಳಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ಸ್ಥಾಪಿಸುವುದಾಗಿ ಪ್ರಕಟಿಸಲಾಗಿದೆ.

ಸರ್ಕಾರ ಘೋಷಿಸಿರುವ ಹೊಸ ಯೋಜನೆ ಬೀದರ ಜನರಲ್ಲಿ ಸಂತಸ ಮೂಡಿಸಿದೆ. ಆದರೆ, ಈ ಮಹತ್ವದ ಪರೀಕ್ಷಾ ಕೇಂದ್ರ ನಗರದಿಂದ ಬಹು ದೂರದ ಪ್ರದೇಶದಲ್ಲಿ ಆರ್‌ಟಿಒಗೆ ಸೇರಿದ ಜಾಗದಲ್ಲಿ ಸ್ಥಾಪನೆಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಅಂದುಕೊಂಡಂತೆ ಘೋಷಿತ ಯೋಜನೆ ಅನುಷ್ಠಾನಗೊಂಡಲ್ಲಿ ವಾಹನ ಸವಾರರು ಚಾಲನಾ ಪರೀಕ್ಷೆಗಾಗಿ 10 ಕಿ.ಮೀ. ದೂರ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.

Advertisement

ಏನಿದು ವಿದ್ಯುನ್ಮಾನ ಪರೀಕ್ಷಾ ಕೇಂದ್ರ?

ಡ್ರೈವಿಂಗ್‌ ಲೈಸನ್ಸ್‌ ಮಾಡಿಸಲು ಆರ್‌ಟಿಒ ಕಚೇರಿಗೆ ತೆರಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಲೈಸನ್ಸ್‌ ಪಡೆಯಲು ಕಚೇರಿಗೆ ಬಂದರೆ ಉದ್ದದ ಕ್ಯೂ ನಿಲ್ಲಬೇಕು. ಡಿಎಲ್‌ಗಾಗಿ ಅರ್ಜಿ ಹಾಕಿದ ನಂತರ ಡ್ರೈವಿಂಗ್‌ ಟೆಸ್ಟ್‌ ಸೇರಿದಂತೆ ಹಲವು ಸುತ್ತಿನ ಪರೀಕ್ಷೆಗಳನ್ನು ಎದುರಿಸಬೇಕು. ಇದನ್ನೆಲ್ಲ ಎದುರಿಸಲಾಗದ ಹಲವರು ಮಧ್ಯವರ್ತಿಗಳ ಮೂಲಕ ಸುಲಭವಾಗಿ ಡಿಎಲ್‌ ಪಡೆಯುತ್ತಿದ್ದರು. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿದ್ಯುನ್ಮಾನ ಚಾಲನಾ ಪರೀಕ್ಷಾ ಪಥಗಳನ್ನು ಸ್ಥಾಪಿಸಲಾಗುತ್ತಿದೆ. ಈ ವಿದ್ಯುನ್ಮಾನ ಚಾಲನಾ ಪರೀಕ್ಷಾ ಕೇಂದ್ರದಲ್ಲಿ ಎಲ್ಲವೂ ಆಧುನಿಕ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಡಿಎಲ್‌ ಪಡೆಯುವವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ, ನಿಗದಿತ ಶುಲ್ಕ ಪಾವತಿಸಿದ್ದಲ್ಲಿ ಅರ್ಜಿದಾರರಿಗೆ ಪರೀಕ್ಷೆಗೆ ಹಾಜರಾಗಬೇಕಾದ ದಿನ ಮತ್ತು ಸಮಯ ನೀಡಲಾಗುತ್ತದೆ. ಡಿಎಲ್‌ ಪರೀಕ್ಷೆಗೆ ಹಾಜರಾಗುವ ಅರ್ಜಿದಾರರು ವಿದ್ಯುನ್ಮಾನ ಪರೀಕ್ಷಾ ಪಥದಲ್ಲೇ ವಾಹನ ಚಾಲನೆ ಮಾಡಬೇಕಿದ್ದು, ಈ ಸಂದರ್ಭದಲ್ಲಿ ಯಾವುದೇ ಲೋಪವಿಲ್ಲದೆ ವಾಹನ ಚಾಲನೆ ಮಾಡಿದರಷ್ಟೇ ಡಿ.ಎಲ್‌ ದೊರೆಯಲಿದೆ. ಇದರಿಂದ ಸಮಯ ಉಳಿತಾಯ, ಮಧ್ಯವರ್ತಿಗಳ ಹಾವಳಿ ತಪ್ಪಿದರೆ, ಮತ್ತೂಂದೆಡೆ ಇತರರ ನೆರವು ಪಡೆದು ಚಾಲನಾ ಪರವಾನಗಿ ಪಡೆಯುವುದು ನಿಲ್ಲಲಿದೆ.

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next