ಬೆಂಗಳೂರು: “ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುವವರಲ್ಲಿ ಶೇ.80ರಷ್ಟು ಜನ ಭೂಮಾಲಿಕರೇ ಆಗಿರುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ನಿಜವಾದ ಮಾಲಿಕರು ತಮ್ಮ ಭೂಮಿ ಹಸ್ತಾಂತರಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಬೆಂಗಳೂರು ಪ್ರಸ್‌ಕ್ಲಬ್ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದಲ್ಲಿ ಇದುವರೆಗೆ ಒಂದಿಂಚು ಭೂಮಿಯನ್ನೂ ರೈತರಿಂದ ಒತ್ತಾಯಪೂರ್ವಕವಾಗಿ ವಶಪಡಿಸಿಕೊಂಡಿಲ್ಲ. ಮನವೊಲಿಕೆ ಮಾಡಿಯೇ ಪಡೆಯಲಾಗಿದ್ದು, ಇದುವರೆಗೆ ಕೈಗಾರಿಕೆಗೆ ಬಳಕೆ ಮಾಡಿಕೊಂಡ ಭೂಮಿ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇದೆ. ಇದರಲ್ಲೂ ಮಂಜೂರಾದ ಭೂಮಿಯಲ್ಲಿ ಸತತ 3 ವರ್ಷಗಳಿಂದ ಯಾವುದೇ ಚಟುವಟಿಕೆಗಳು ನಡೆಯದ ಹಿನ್ನೆಲೆಯಲ್ಲಿ 750 ಎಕರೆ ಭೂಮಿಯನ್ನು ವಶಕ್ಕೆ ಪಡೆದು, ಕೆಲವರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.
ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ ವಿರೋಧಿಸುವವರಲ್ಲಿ ಬಹುತೇಕರು ಭೂಮಾಲಿಕರೇ ಆಗಿರುವುದಿಲ್ಲ. ಹೊರಗಿನ ಪ್ರಭಾವ ಅಥವಾ ಉದ್ದೇಶಪೂರ್ವಕವಾಗಿ ರಾಜಕೀಯ ನುಸುಳಿದ್ದರಿಂದ ವಿರೋಧ ವ್ಯಕ್ತವಾಗುತ್ತದೆ. ವಾಸ್ತವವಾಗಿ ಭೂಮಾಲಿಕರ ಪೈಕಿ ಶೇ.75ರಷ್ಟು ರೈತರು ಭೂಮಿ ನೀಡಲು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ, ಒಳ್ಳೆಯ ಪರಿಹಾರ ನೀಡಬೇಕು ಎನ್ನುವುದಷ್ಟೇ ಅವರ ಬೇಡಿಕೆಯಾಗಿರುತ್ತದೆ. ಅದು ಸಹಜ ಕೂಡ ಎಂದು ತಿಳಿಸಿದರು.
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಕುರಿತು ಪ್ರತಿಕ್ರಿಯಿಸಿದ ಅವರು, “ಸಮಾವೇಶದಲ್ಲಿ ಹರಿದುಬಂದ ಬಂಡವಾಳದ ಬಗ್ಗೆ ವೈಭವೀಕರಣದ ಅವಶ್ಯಕತೆ ಇಲ್ಲ. ಹಲವು ಸುತ್ತಿನ ಚರ್ಚೆ ಮತ್ತು ಪ್ರಾಜೆಕ್ಟ್ಗಳ ಸಾಧಕ-ಬಾಧಕಗಳ ಸಮಾಲೋಚನೆ ನಂತರವೇ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಬಂದವರೊಂದಿಗೆಲ್ಲ ಒಡಂಬಡಿಕೆ ಮಾಡಿಕೊಂಡಿಲ್ಲ. ಹಾಗೊಂದು ವೇಳೆ ವೈಭವೀಕರಿಸುವ ಉದ್ದೇಶವಿದ್ದರೆ, ಇನ್ನೂ ಎರಡು ಲಕ್ಷ ಕೋಟಿ ಹೂಡಿಕೆಗೆ ವಿವಿಧ ಕಂಪನಿಗಳು ಸಹಿ ಹಾಕಲು ಮುಂದೆ ಬಂದಿದ್ದವು. ಅದನ್ನೂ ಸೇರಿಸಿಯೇ ಹೇಳುತ್ತಿದ್ದೆವು’ ಎಂದು ಸ್ಪಷ್ಟಪಡಿಸಿದರು.
ಈ ಹಿಂದಿನ ಅಂದರೆ 2012ರ ಹೂಡಿಕೆದಾರರ ಸಮಾವೇಶದಲ್ಲಾದ ಹರಿದುಬಂದ ಬಂಡವಾಳಕ್ಕೆ ಹೋಲಿಸಿದರೆ, ಅನುಷ್ಠಾನದ ಪ್ರಮಾಣ ಶೇ. 27ರಷ್ಟು ಮಾತ್ರ ಇದೆ. ಇದಕ್ಕೆ ಬಿಜೆಪಿ ನಂತರ ಬಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸುಮಾರು 1.25 ಲಕ್ಷ ಎಕರೆ ಭೂಮಿಯನ್ನು ಡಿ-ನೋಟಿಫೈ ಮಾಡಿದ್ದು, ಅದಕ್ಕೂ ಮುನ್ನ ಅದಿರು ಗಣಿಗಾರಿಕೆಗೆ ನ್ಯಾಯಾಲಯ ನಿರ್ಬಂಧ ಹೇರಿದ್ದು ಸೇರಿ ಹಲವು ಅಂಶಗಳು ಕಾರಣಗಳಾಗಿವೆ ಎಂದು ಮಾಹಿತಿ ನೀಡಿದ ಅವರು, ಈ ಬಾರಿ ಸಮಾವೇಶದಲ್ಲಾದ ಒಡಂಬಡಿಕೆಯಲ್ಲಿ ಶೇ.90ರಷ್ಟು ಹೂಡಿಕೆ ಬೆಂಗಳೂರು ಹೊರತುಪಡಿಸಿ ಆಗುತ್ತಿದ್ದು, ಶೇ.75ರಷ್ಟು ಕಾರ್ಯರೂಪಕ್ಕೂ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರದ ಆತ್ಮನಿರ್ಭರ ಭಾರತ ಯೋಜನೆಗೆ ಅನುಗುಣವಾಗಿ ರಾಜ್ಯದ 2 ಮತ್ತು 3ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜಿಸುವುದರ ಜತೆಗೆ ಶೀಘ್ರ ರಾಜ್ಯ ಸರ್ಕಾರವು ಒಂದು ಜಿಲ್ಲೆ ಒಂದು ಉತ್ಪನ್ನ ನೀತಿಯನ್ನು ಜಾರಿಗೆ ತರಲಿದೆ. ಒಂದು ಜಿಲ್ಲೆ ಒಂದು ಉತ್ಪಾದನೆ ನೀತಿಯಿಂದ ಪ್ರತಿ ಜಿಲ್ಲೆಗೆ ಒಂದು ಉತ್ಪನ್ನವನ್ನು ಗುರುತಿಸಲಾಗುತ್ತದೆ. ಆ ಉತ್ಪನ್ನದೊಂದಿಗೆ ತೊಡಗಿಸಿಕೊಂಡ ಉದ್ಯಮಿಗಳು ಯೋಜನಾ ವೆಚ್ಚದ ಶೇ. 35ರಷ್ಟು ಕ್ರೆಡಿಟ್-ಲಿಂಕ್ ಕ್ಯಾಪಿಟಲ್ ಸಬ್ಸಿಡಿಯನ್ನು ಪ್ರತಿ ಯೂನಿಟ್‌ಗೆ ಗರಿಷ್ಠ 10 ಲಕ್ಷ ರೂಪಾಯಿ ಪಡೆಯಬಹುದು ಎಂದು ವಿವರಿಸಿದರು.
ಮಂಗಳೂರು ಮತ್ತು ಕಾರವಾರ ಬಂದರುಗಳನ್ನು ಖಾಸಗಿ-ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ)ದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಸಂವಾದದಲ್ಲಿ ಕೈಗಾರಿಕೆ ಆಯುಕ್ತರಾದ ಗುಂಜನ್ ಕೃಷ್ಣ, ಬೆಂಗಳೂರು ಪ್ರಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಬಿ.ಪಿ. ಮಲ್ಲಪ್ಪ, ಖಜಾಂಚಿ ಮೋಹನ್ ಮತ್ತಿತರರಿದ್ದರು.