Advertisement

ಸ್ಮಶಾನ ಜಾಗಕ್ಕೆ ಜಮೀನು: ಕಾಲಮಿತಿ ಕ್ರಿಯಾಯೋಜನೆ ರೂಪಿಸಿ

07:07 AM Jul 03, 2019 | Lakshmi GovindaRaj |

ಬೆಂಗಳೂರು: “ಸತ್ತ ವ್ಯಕ್ತಿಯ ಸಭ್ಯ ಹಾಗೂ ಘನತೆಯ ಅಂತ್ಯಕ್ರಿಯೆ’ಗೆ ಅವಕಾಶಮಾಡಿಕೊಡುವ ನಿಟ್ಟಿನಲ್ಲಿ ಸ್ಮಶಾನ ಜಾಗ ಇಲ್ಲದ ರಾಜ್ಯದ 6,053 ಕಂದಾಯ ಗ್ರಾಮಗಳು ಹಾಗೂ 281 ಪಟ್ಟಣಗಳಲ್ಲಿ ಸ್ಮಶಾನಕ್ಕಾಗಿ ಅಗತ್ಯ ಜಮೀನು ಒದಗಿಸಲು ಕಾಲಮಿತಿ ಕ್ರಿಯಾ ಯೋಜನೆ ರೂಪಿಸಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹೈಕೋರ್ಟ್‌ ಮಂಗಳವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

Advertisement

ಈ ಕುರಿತಂತೆ ಬೆಂಗಳೂರಿನ ಆರ್‌.ಟಿ. ನಗರದ ನಿವಾಸಿ ಮೊಹಮ್ಮದ್‌ ಇಕ್ಬಾಲ್‌ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಹಾಗೂ ನ್ಯಾ. ಎಚ್‌.ಟಿ. ನರೇಂದ್ರ ಪ್ರಸಾದ್‌ ಅವರಿದ್ದ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ, ಸರ್ಕಾರದ ಪರ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಹಣ ಬಿಡುಗಡೆ ಮಾಡಲಾಗಿದೆ. ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಸರ್ಕಾರದ ವಾದ ಒಪ್ಪತಕ್ಕದ್ದಲ್ಲ. ಸತ್ತ ವ್ಯಕ್ತಿಯ “ಸಭ್ಯ ಮತ್ತು ಘನತೆಯ ಅಂತ್ಯಕ್ರಿಯೆ’ಗೆ ಸೌಲಭ್ಯ ಒದಗಿಸುವುದು ಸರ್ಕಾರದ ಆದ್ಯ ಜವಾಬ್ದಾರಿ.

ಆದ್ದರಿಂದ ಸ್ಮಶಾನ ಜಾಗ ಇಲ್ಲದ ಕಂದಾಯ ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಸ್ಮಶಾನಕ್ಕಾಗಿ ಜಮೀನು ಮಂಜೂರು ಮಾಡಲು ಕಾಲಮಿತಿ ಕ್ರಿಯಾ ಯೋಜನೆ ರೂಪಿಸಿ ಅದರ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರ್ಕಾರಕ್ಕೆ ತಾಕೀತು ಮಾಡಿ ವಿಚಾರಣೆಯನ್ನು ಆಗಸ್ಟ್‌ 20ಕ್ಕೆ ಮುಂದೂಡಿತು.

ಅಲ್ಲದೇ, ರಾಜ್ಯದ ಸುಮಾರು 7,700 ಕಂದಾಯ ಗ್ರಾಮಗಳಲ್ಲಿ ಸ್ಮಶಾನ ಜಾಗ ಇಲ್ಲ ಎಂದು 2016ರ ಮಾ.31ರಂದು ಸರ್ಕಾರ ಹೇಳಿತ್ತು. 2018ರ ಅ.31ರವರೆಗೆ ಸ್ಮಶಾನ ಜಾಗ ಇಲ್ಲದ ಗ್ರಾಮಗಳ ಸಂಖ್ಯೆ 6,053 ಆಗಿದೆ ಎಂದು ಹೇಳಲಾಗಿದೆ.

Advertisement

ಅಂದರೆ ಎರಡು ವರ್ಷಗಳ ಅವಧಿಯಲ್ಲಿ ಕೇವಲ 1,123 ಕಂದಾಯ ಗ್ರಾಮಗಳಿಗೆ ಸ್ಮಶಾನ ಜಾಗ ಮಂಜೂರು ಮಾಡಲಾಗಿದೆ. ಸರ್ಕಾರದ ಈ ಕಾರ್ಯವೈಖರಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ಇದಕ್ಕಾಗಿ ಒಂದು ನಿರ್ದಿಷ್ಠವಾದ ಕಾಲಮಿತಿ ಕ್ರಿಯಾ ಯೋಜನೆ ಅಗತ್ಯವಾಗಿದೆ ಎಂದು ನ್ಯಾಯಪೀಠ ಹೇಳಿತು.

ಒತ್ತುವರಿ ತೆರವುಗೊಳಿಸಿ: ಇದೇ ವೇಳೆ ಸರ್ಕಾರಕ್ಕೆ ಸೇರಿದ ಒಟ್ಟು ಜಮೀನಿನಲ್ಲಿ ಸುಮಾರು 11.79 ಲಕ್ಷ ಜಮೀನು ಒತ್ತುವರಿಯಾಗಿದೆ ಎಂಬ ಸರ್ಕಾರದ ಪ್ರಮಾಣಪತ್ರಕ್ಕೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಪೀಠ ಒಟ್ಟು ಜಮೀನಿನ ಆರನೇ ಒಂದು ಭಾಗದಷ್ಟು ಒತ್ತುವರಿಯಾಗಿರುವುದು ಗಂಭೀರ ವಿಷಯ.

ಅದರ ಒತ್ತುವರಿ ತೆರವಿಗೆ ಸರ್ಕಾರದಿಂದ ಯಾವುದೇ ಕ್ರಮ ಆಗಿಲ್ಲ ಅನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಆದ್ದರಿಂದ ಸರ್ಕಾರವೇ ಒಪ್ಪಿಕೊಂಡಿರುವಂತೆ ಒತ್ತುವರಿಯಾಗಿರುವ 11.79 ಲಕ್ಷ ಎಕರೆ ಜಮೀನು ತೆರವಗೊಳಿಸುವ ಬಗ್ಗೆಯೂ ಕಾಲಮಿತಿ ಕ್ರಿಯಾ ಯೋಜನೆ ರೂಪಿಸುವಂತೆ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶನ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next