ಗುವಾಹಟಿ: ಪೌರತ್ವಕ್ಕಾಗಿ ಪ್ಯಾನ್ ಕಾರ್ಡ್, ಬ್ಯಾಂಕ್ ಸ್ಟೇಟ್ ಮೆಂಟ್ ಮತ್ತು ಭೂ ಕಂದಾಯ ರಶೀದಿಯನ್ನು ದಾಖಲೆಯನ್ನಾಗಿ ತೋರಿಸುವಂತಿಲ್ಲ ಎಂದು ಗುವಾಹಟಿ ಹೈಕೋರ್ಟ್ ತಿಳಿಸಿದೆ.
ಮಹಿಳೆಯೊಬ್ಬರು ತನ್ನನ್ನು ವಿದೇಶಿ ಕಲಂನಲ್ಲಿ ಸೇರಿಸಿರುವ ಟ್ರಿಬ್ಯುನಲ್ ಆದೇಶದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಈ ಅಭಿಪ್ರಾಯವ್ಯಕ್ತಪಡಿಸಿದೆ.
ಅಸ್ಸಾಂನಲ್ಲಿ ಜಾರಿಯಾಗಿರುವ ವಿದೇಶಿ ಪ್ರಜೆಗಳ ಗುರುತಿಸುವಿಕೆಯ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ವೇಳೆ ಪಟ್ಟಿಯಲ್ಲಿ ದಾಖಲಿಸಿರುವ ಭೂಮಿ ಮತ್ತು ಬ್ಯಾಂಕ್ ಖಾತೆ ದಾಖಲೆಯನ್ನು ಅಧಿಕಾರಿಗಳು ಸ್ವೀಕರಿಸಿದ್ದರು.
ಕಳೆದ ವರ್ಷ ಆಗಸ್ಟ್ ನಲ್ಲಿ ಪ್ರಕಟಗೊಂಡ ಎನ್ ಆರ್ ಸಿ ಅಂತಿಮ ಪಟ್ಟಿಯಲ್ಲಿ ಸುಮಾರು 19 ಲಕ್ಷ ಮಂದಿ ಹೊರಗುಳಿದಿದ್ದು, ಇವರೆಲ್ಲಾ ಪೌರತ್ವ ಸಾಬೀಪಡಿಸಲು ಯತ್ನಿಸಿದ್ದರು. ಸಾವಿರಾರು ಮಂದಿಯನ್ನು ವಿದೇಶಿ ಎಂದು ಟ್ರಿಬ್ಯೂನಲ್ ಘೋಷಿಸಿದೆ.
ಟ್ರಿಬ್ಯೂನಲ್ ಕೋರ್ಟ್ ವಜಾಗೊಳಿಸಿದ ಪ್ರಕರಣವನ್ನು ಹೈಕೋರ್ಟ್ ಕೈಗೆತ್ತಿಕೊಳ್ಳಲಿದೆ. ಅಲ್ಲದೆ ಒಂದು ವೇಳೆ ಅಗತ್ಯವಿದ್ದರೆ ಸುಪ್ರೀಂಕೋರ್ಟ್ ಕೂಡಾ ವಿಚಾರಣೆ ನಡೆಸಲಿದೆ. ಅಲ್ಲದೇ ಎಲ್ಲಾ ಕಾನೂನು ಹೋರಾಟದ ಅವಕಾಶಗಳು ಮುಕ್ತಾಯವಾಗುವವರೆಗೆ ಬಂಧನ ಶಿಬಿರದಲ್ಲಿ ಇರಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಕೋರ್ಟ್ ಗೆ ತಿಳಿಸಿದೆ.