ಕುಷ್ಟಗಿ: ರೈತರನ್ನು ಸಾಲಮುಕ್ತರನ್ನಾಗಿಸಲು ಸಿಎಂ ಕುಮಾರಸ್ವಾಮಿ ಋಣಮುಕ್ತ ಪತ್ರ ಕೈ ಸೇರುವ ಮುನ್ನ ಬ್ಯಾಂಕ್‌ನವರು ಸಾಲ ಮರುಪಾವತಿಸದ ದಾಳಿಂಬೆ ಬೆಳೆಗಾರರ ಭೂಮಿ ಹರಾಜು ಮಾಡುವ ನೋಟಿಸ್ ನೀಡುತ್ತಿದ್ದಾರೆ ಎಂದು ದಾಳಿಂಬೆ ಬೆಳೆಗಾರರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಅಬ್ದುಲ್ ನಯೀಮ್ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಯಲಬುರ್ಗಾ ತಾಲೂಕಿನ ಕಲಬಂಡಿ ಗ್ರಾಮದ ಸುಜಾತಾ ಕರೇಗೌಡ್ರು ಅವರು 5.28 ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆಯಲು 2001- 03ರಲ್ಲಿ ಯಲಬುರ್ಗಾ ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ 2.18 ಲಕ್ಷ ರೂ. ಸಾಲ ಪಡೆದಿದ್ದರು.
ಕೆಲ ಕಂತುಗಳ ಮೂಲಕ 1.20 ಲಕ್ಷ ರೂ. ಪಾವತಿಸಿ, 1.16 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದರು. ಬೆಳೆ ಸಂಪೂರ್ಣ ನಾಶದಿಂದ ಉಳಿದ ಸಾಲ ಪಾವತಿಸಲು ಸಾಧ್ಯವಾಗದಿರುವುದರಿಂದ ಇದೀಗ ಸಾಲದ ಮೊತ್ತ 11.16 ಲಕ್ಷ ರೂ. ಅಂದರೆ ಸಾಲದ ಮೊತ್ತ ಹತ್ತು ಪಟ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರೈತ ಮಹಿಳೆ ಸುಜಾತಾ ಕರೇಗೌಡ್ರು ಅವರಿಗೆ ಜಮೀನು ಹರಾಜಿಗೆ ನೋಟಿಸ್ ಬಂದಿದೆ.
10 ವರ್ಷಗಳಿಂದ ನಿರಂತರ ಹೋರಾಟ ಮಾಡಿದರೂ ದಾಳಿಂಬೆ ಬೆಳೆಗಾರರ ಸಾಲ ಮನ್ನಾ ಆಗಿಲ್ಲ. ಕಾಫಿ ಬೆಳೆಗಾರರ ಸಾಲಮನ್ನಾ ಆಗಲು ಮುತುವರ್ಜಿ ವಹಿಸಿದ ಸರ್ಕಾರ ದಾಳಿಂಬೆ ಬೆಳೆಗಾರರನ್ನು ಸಾಲಮನ್ನಾ ವ್ಯಾಪ್ತಿಗೆ ತಂದಿಲ್ಲ. ದಾಳಿಂಬೆ ಬೆಳೆಗಾರರಿಗೆ ಬ್ಯಾಂಕ್ ನೋಟಿಸ್, ಭೂಮಿ ಹರಾಜಿನ ನೋಟಿಸ್ ನಿಲ್ಲಿಸಿಲ್ಲ ಎಂದರು.
ಕಡೆ ಪಕ್ಷ ಬಡ್ಡಿಯನ್ನಾದರೂ ಮನ್ನಾ ಮಾಡಿ ಎಂದು ಅಂಗಲಾಚಿದರೂ ಸರ್ಕಾರ ಸ್ಪಂದಿಸಿಲ್ಲ. ಬೆಂಗಳೂರಲ್ಲಿ ದಾಳಿಂಬೆ ಬೆಳೆಗಾರರು ಅರೆಬೆತ್ತಲೆ ಹೋರಾಟ ನಡೆಸಿದ್ದಾಯ್ತು ಇದೀಗ ಮತ್ತೆ ಹೋರಾಟ ಅನಿವಾರ್ಯವಾಗಲಿದೆ.
– ಅಬ್ದುಲ್ ನಯೀಮ್, ದಾಳಿಂಬೆ
ಬೆಳೆಗಾರರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ