Advertisement

ಭೂಸೇನೆಯ ಲಾಂಚರ್‌ ಪತ್ತೆ, ಪೊಲೀಸರಿಂದ ಪರಿಶೀಲನೆ

11:13 AM May 12, 2020 | Lakshmi GovindaRaj |

ರಾಮನಗರ/ಕನಕಪುರ: ಸುಮಾರು 15 ವರ್ಷಗಳಷ್ಟು ಹಳೆಯ ಭಾರತೀಯ ಭೂ ಸೇನೆಯ ಲಾಂಚರ್‌ (ಸ್ಫೋಟಕಗಳನ್ನು ಉಡಾಯಿಸಲು ಅದನ್ನು ಹಿಡಿದಿಟ್ಟು ಕೊಳ್ಳುವ ಸಾಧನ) ಜಿಲ್ಲೆಯ ಕನಕಪುರ ತಾಲೂಕು ಉಯ್ಯಂಬಳ್ಳಿ ಹೋಬಳಿ ಸಂಗಮದ ಬಳಿ ಕಾವೇರಿ ನದಿ ತೀರದ ಬೊಮ್ಮಸಂದ್ರ ಗ್ರಾಮದ ಬಳಿ ಲಾಂಚರ್‌ನಲ್ಲಿ ಒಂದು ಜೀವಂತ ಸ್ಫೋಟಕ ಪತ್ತೆಯಾಗಿದೆ.

Advertisement

ಲಾಂಚರ್‌ನಲ್ಲಿ ಏಳು ಸ್ಫೋಟಕಗಳಿದ್ದು, ಈ ಪೈಕಿ 6  ಈಗಾಗಲೆ ನ್ಪೋಟಿಸಿದ್ದು, ಒಂದು ಜೀವಂತ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 15-18 ವರ್ಷಗಳ ಹಿಂದೆ ಸಂಗಮ ಅರಣ್ಯ ಪ್ರದೇಶದಲ್ಲಿ ಭೂಸೇನೆ ಯೋಧರಿಗೆ ತರಬೇತಿ ಕ್ಯಾಂಪ್‌ ಹಮ್ಮಿಕೊಂಡಿದ್ದಾಗ ಲಾಂಚರ್‌ ಬಳಸಲಾಗಿತ್ತು ಎಂದು ಗೊತ್ತಾಗಿದೆ.  ಕಾವೇರಿ ನದಿಯಲ್ಲಿ ನೀರಿನ ಪ್ರವಾಹ ಕಡಿಮೆಯಾಗಿದ್ದು, ಬೊಮ್ಮಸಂದ್ರ ಗ್ರಾಮದ ಕಳೆದ ಮೇ 7ರಂದು ಈ ಲಾಂಚರ್‌ ಪತ್ತೆಯಾಗಿದೆ.

ಅದು ಏನು ಎಂದು ಗೊತ್ತಾಗದೆ  ಗ್ರಾಮದ ಒಂದಿಬ್ಬ ಯುವಕರು, ಅದರೊಳಗೆ ತಾಮ್ರ ಮುಂತಾದ ಲೋಹಗಳನ್ನು ಮಾರಾಟ ಮಾಡುವ ಆಸೆಯಿಂದ ತೆಗೆಯಲು ಪ್ರಯತ್ನಿಸಿದ್ದಾರೆ. ಅದು ಸಾಧ್ಯವಾಗದ ಕಾರಣ ಬೆಂಕಿಗೆ ಹಾಕಿ ದೂರ ಕುಳಿತಿದ್ದಾರೆ. ಈ  ಪೈಕಿ ಒಂದು ಸ್ಫೋಟಕ ಸಿಡಿದು ದೊಡ್ಡ ಸದ್ದು ಮಾಡಿದೆ. ಆದರೆ ಈ ವಿಚಾರ ಪೊಲೀಸರಿಗೆ ತಲುಪಿಲ್ಲ. ಗ್ರಾಮದ ಕೆಲವರು ನ್ಪೋಟಕದ ಬಗ್ಗೆ ಮಾತ ನಾಡುವುದನ್ನು ಆಲಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸಾತನೂರು ಪೊಲೀಸರ ಗಮನ ಸೆಳೆದಿದ್ದಾರೆ.

ಸೋಮವಾರ ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸರು ಲಾಂಚರ್‌ ನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಬಾಂಬ್‌ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿ ಒಂದು ಸ್ಫೋಟಕ ಜೀವಂತವಾಗಿದೆ ಎಂದು ಹೇಳಿದ್ದಾರೆ.  15-18 ವರ್ಷಗಳಿಂದ ನ್ಪೋಟಕ ಜೀವಂತ ಇರುವುದು ಹೇಗೆ, ಮಣ್ಣಿನಲ್ಲಿ ಇಷ್ಟು ದಿನ ಹುದುಗಿದ್ದ ಏಕಾ ಏಕಿ ಪತ್ತೆಯಾಗಿದ್ದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಪೊಲೀಸರ ತನಿಖೆಯಿಂದ ಉತ್ತರ  ಸಿಗಬೇಕಾಗಿದೆ.

ಎಸ್‌ಪಿ ಭೇಟಿ, ಪರಿಶೀಲನೆ: ಲಾಂಚರ್‌ ಪತ್ತೆಯಾದ ಮಾಹಿತಿ ದೊರೆಯುತ್ತಿದ್ದಂತೆ ಎಸ್ಪಿ ಅನೂಪ್‌ ಶೆಟ್ಟಿ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ಸಾತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ಕೆ.ಪ್ರಕಾಶ್‌, ಸಾತನೂರು ಎಸ್‌ಐ ಮುರಳಿ ಮತ್ತಿತರರು ಭೇಟಿ ಕೊಟ್ಟಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next