ಮಹದೇವಪುರ: ಸರ್ಕಾರದಿಂದ ಭೋಗ್ಯಕ್ಕೆ ಪಡೆದ ಜಮೀನಿನ ಅವಧಿ ಮೀರಿದ್ದರೂ, ಸರ್ಕಾರದ ವಶಕ್ಕೆ ನೀಡದೇ ಸಂಸ್ಥೆಯೊಂದು ತನ್ನ ಬಳಿಯೇ ಉಳಿಸಿಕೊಂಡಿದ್ದ 100ಕೋಟಿ ಮೌಲ್ಯದ ಜಾಗವನ್ನು ಶನಿವಾರ ಜಿಲ್ಲಾಡಳಿತ ವಶಕ್ಕೆ ಪಡೆದಿದೆ.
ಬೆಂಗಳೂರು ಪೂರ್ವ ತಾಲ್ಲೂಕು ವರ್ತೂರು ಹೋಬಳಿ ಮುನ್ನೇಕೊಳಾಲ ಗ್ರಾಮದ ಸರ್ವೇ ನಂ. 36ರಲ್ಲಿ 7.18 ಎಕರೆ ಸರ್ಕಾರಿ ಜಮೀನನ್ನು 70 ವರ್ಷಗಳ ಹಿಂದೆ ಕುಷ್ಠ ರೋಗಗಿಗಳ ಪುನರ್ ವಸತಿಗಾಗಿ “ನವ ಜೀವನ’ ಎಂಬ ಸಂಸ್ಥೆಗೆ ಸರ್ಕಾರ ಭೋಗ್ಯಕ್ಕೆ ನೀಡಿತ್ತು.
ನವ ಜೀವನ ಸಂಸ್ಥೆ ವಾಣಿಜ್ಯ ಉದ್ದೇಶದಿಂದ ಹೆಣ್ಣು ಮಕ್ಕಳಿಗೆ ಟೈಲರಿಂಗ್, ಕೌಶಲ್ಯ ತರಬೇತಿ, ಕರಕುಶಲ ವಸ್ತುತಯಾರಿಕೆ ಸ್ವಯಂ ಸೇವ ಸಂಸ್ಥೆಗಳಿಗೆ ಕಟ್ಟಡ ನಿರ್ಮಿಸಿ ನೀಡಿತ್ತು. ಅಲ್ಲದೆ ನವ ಪ್ರಜ್ಞಾ ಪಬ್ಲಿಕ್ ಶಾಲೆ ಎಂಬ ಖಾಸಗಿ ಶಾಲೆಯನ್ನು ತೆರೆದು ಡೊನೇಷನ್ ಪಡೆಯುತ್ತಿತ್ತು.
ಸರ್ಕಾರದಿಂದ ಜಮೀನು ಬೋಗ್ಯಕ್ಕೆ ಪಡೆದ ನಿಗದಿತ ಅವಧಿಗಿಂತ ಹೆಚ್ಚು ಕಾಲಾವಕಾಶದವರೆಗೂ ಜಮೀನು ಖಾಸಗಿ ವ್ಯಕ್ತಿಗಳ ಅನುಭವಿಕೆಯಲ್ಲಿರುವುದನ್ನು ಜಿಲ್ಲಾಡಳಿತ ಮನಗಂಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಶನಿವಾರ ಜಿಲ್ಲಾಧಿಕಾರಿ ವಿ.ಶಂಕರ್, ಉಪವಿಬಾಗ ಅಧಿಕಾರಿ ರಂಗನಾಥ್, ಕಾಂತರಾಜ್, ತಹಶೀಲ್ದಾರ್ ತೇಜಸ್‌ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆದಿದೆ.
ವಶಕ್ಕೆ ಪಡೆಯಲಾಗಿರುವ 7.18 ಗುಂಟೆ ವಿಸ್ತಾರವಿರುವ ಈ ಜಮೀನಿನಲ್ಲಿ 3.24ಎಕರೆ ಸ್ಥಳವನ್ನು ಐಎಎಸ್ ಅಧಿಕಾರಿಗಳಿಗೆ ತರಬೇತಿ ನೀಡುವ ಸಲುವಾಗಿ, 2.7ಎಕರೆ ಪ್ರದೇಶವನ್ನು ಪ್ರಾದೇಶಿಕ ಆಯುಕ್ತರ ಮತ್ತು ಮಾನ್ಯ ಜಿಲ್ಲಾಧಿಕಾರಿಗಳ ವಸತಿ ಗೃಹ ಉದ್ದೇಶಕ್ಕೆ ಹಾಗೂ 0.24ಗುಂಟೆ ಸ್ಥಳವನ್ನು ರಸ್ತೆಗೆ ಕಾಯ್ದಿರಿಸಲಾಗಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನವಪ್ರಜಾn ಪಬ್ಲಿಕ್ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ತಾಂತ್ರಿಕ ರಿಸೀವರ್‌ರನ್ನಾಗಿ ಹಾಗೂ ತಹಶೀಲ್ದಾರ್ ತೇಜಸ್‌ಕುಮಾರ್‌ರವರನ್ನು ಆಡಳಿತಾಧಿಕಾರಿಯಾಗಿ ಮುಂದಿನ ಆದೇಶದವರಗೆ ನೇಮಿಸಿ ಜಿಲ್ಲಾಧಿಕಾರಿ ವಿ.ಶಂಕರ್ ಆದೇಶ ಹೊರಡಿಸಿದ್ದಾರೆ.