Advertisement

ಲಂಬಾಣಿಗರ ವೈವಿಧ್ಯಮಯ ದೀಪಾವಳಿ ಹಬ್ಬ

12:33 PM Oct 26, 2022 | Team Udayavani |

ದೋಟಿಹಾಳ: ಹಿಂದೂ ಪಂಚಾಂಗದ ಪ್ರಕಾರ ಆಶ್ವೀಜ ಮಾಸದ ಕೃಷ್ಣಪಕ್ಷ ಚತುರ್ದುಶಿಯಂದು ಪ್ರಾರಂಭವಾಗಿ ಮೂರು ದಿನಗಳ ಕಾಲ ನೆಡೆಯುವ ದೀಪಾವಳಿ ಹಬ್ಬದ ಆಚರಣೆ ಆಯಾ ಪ್ರದೇಶದ ಜನಸಮುದಾಯ, ಸಂಪ್ರದಾಯ, ಸಂಸ್ಕೃತಿಗನುಗುಣವಾಗಿ ವೈವಿಧ್ಯಮಯವಾಗಿ ನಡೆಯುತ್ತದೆ. ಹಳ್ಳಿ, ನಗರ, ಪಟ್ಟಣಗಳಿಗನುಗುಣವಾಗಿ ಈ ಹಬ್ಬದ ಆಚರಣೆ ವಿಶಿಷ್ಟವಾಗಿರುತ್ತದೆ, ದೀಪಾವಳಿಯನ್ನು ಆಯಾ ಪ್ರದೇಶದ ಸಂಸ್ಕೃತಿಗೆ ಅನುಗುಣವಾಗಿ ಹಟ್ಟಿಹಬ್ಬ, ದೀವಾಳಿ, ದೀವಳಿಗೆ ಮುಂತಾದ ಹೆಸರುಗಳಿಂದ ಈ ಹಬ್ಬವನ್ನು ಕರೆಯುತ್ತಾರೆ. ಇದೇ ರೀತಿಯಾಗಿ ಕೊಪ್ಪಳ ಜಿಲ್ಲೆ ಕುಷ್ಠಗಿ ತಾಲೂಕಿನ ಮೇಣಸಗೇರಿ, ತೋನಸಿಹಾಳ, ನಡವಲಕೊಪ, ಕಡೆಕೊಪ್ಪ, ಕಳಮಳ್ಳಿ, ಮ್ಯಾದರಡಕ್ಕಿ ಮತ್ತು ವಿವಿಧ ತಾಂಡಗಳಲ್ಲಿ ಲಂಬಾಣಿ ಸಮುದಾಯದವರು ದೀಪಾವಳಿಯನ್ನು ಬುಧವಾರ ವೈವಿಧ್ಯಮಯವಾಗಿ ಆಚರಿಸಿದರು.

Advertisement

ತಾಂಡಾಗಳ ಲಂಬಾಣಿಗ ಜನಾಂಗದ ಮದುವೆಯಾಗದ ಹೆಣ್ಣು(ಕನ್ಯೆಯರು)ಮಕ್ಕಳು ಬಣ್ಣ-ಬಣ್ಣದ ಬಟ್ಟೆ ಹಾಕಿ ಶ್ರೀಗಾಂರ ಮಾಡಿಕೊಂಡು. ತಮ್ಮ ತಮ್ಮ ಸೀಮೆಯ ಸುತ್ತಲಿನ ಹೋಲಗಳಲ್ಲಿ ಅರಳಿ ನಳನಳಿಸುತ್ತಿರುವ ಅಣ್ಣಿ ಹೂ, ಅಂಬ್ರೀ ಹೂ, ತೊಗರಿ ಹೂ, ಹಣ್ಣಿನ ಗಿಡಗಳ ಹೂ ಹೀಗೆ ಅನೇಕ ಬಗೆಯ ಹೂಗಳನ್ನು ಬಿಡಿಸುತ್ತಾ, ತಮ್ಮ ಲಂಬಾಣಿ ಭಾಷೆಯಲ್ಲಿ ಹಾಡನ್ನು ಹಾಡುತ್ತಾ ಕುಣಿಯುತ್ತ ತರತರಹದ ಹೂಗಳನ್ನು ಗ್ರಾಮದ ಎಲ್ಲಾ ಕನ್ಯೆಯರು ಸೇರಿ ಸುಮಾರು ನಾಲ್ಕೈದು ಬುಟ್ಟಿಗಳಷ್ಟು ಹೂಗಳನ್ನು ಸಂಗ್ರಹಿಸುತ್ತಾರೆ. ಹೀಗೆ ಹೂ ತೆಗೆದುಕೊಂಡು ಹಾಡನ್ನು ಹಾಡುತ್ತಾ ದಾರಿಯಲ್ಲಿ ಬರುವಾಗ ತಮಗೆ ಎದುರಾಗುವ ಜನರನ್ನು, ವಾಹನಗಳನ್ನು ತಡೆದು ಅವರ ಮುಂದೆ ಹಾಡನ್ನು ಹಾಡಿ ಕುಣಿಯುತ್ತಾರೆ. ಆಗ ಅವರಿಂದ ಹಬ್ಬದ ಖುಷಿಯಾಗಿ ಹಣವನ್ನು ಸಂಗ್ರಹಿಸುತ್ತಾರೆ. ಹೀಗೆ ಸುಮಾರು ಎರಡು ಮೂರು ಗಂಟೆಗಳವರಗೆ ಹೀಗೆ ದಾರೆಯಲ್ಲಿ ಸಂಚರಿಸುವವರನ್ನು ತಡೆದು ಹಾಡುಗಳನ್ನು ಹಾಡಿ ಅವರಿಂದ ದೇಣಿಗೆಯನ್ನು ಪಡೆಯುತ್ತಾರೆ.

ಗೆಳತಿಯರೊಂದಿಗೆ ಸಹಬೋಜನ: ದೇಣಿಗೆ ಸಂಗ್ರಹಿಸುತ್ತಾ ದಣಿದ ಕನ್ಯೆಯರು ತಮ್ಮ ತಮ್ಮ ಗೆಳತಿಯರೊಂದಿಗೆ ಸಹಬೋಜನ ಮಾಡುವರು. ಊರಿಂದ ತಂದ ಬುತ್ತಿ ಬಿಚ್ಚಿ ಪರಸಪ್ರ ಸಹಿ ಹಂಚುವರು. ಒಬ್ಬೋರಿಗೊಬ್ಬರು ತಿನ್ನಿಸುತ್ತಾ ಪ್ರೀತಿ ವ್ಯಕ್ತಪಡಿಸುವರು. ಎಲ್ಲರೂ ಸೇರಿ ಹಬ್ಬದ ಖುಷಿ ಹಂಚಿಕೊಳ್ಳುವರು. ನಾವು ಬಾಲ್ಯದಿಂದಲೇ ಗೆಳತಿಯರಾಗಿ ಕೂಡಿ ಆಡಿ ಈಗ ಬೆಳೆದು ದೊಡ್ಡವರಾಗಿದ್ದೀವಿ, ಇನ್ನ ಮೇಲೆ ನಮಗೆ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಬಿಡುತ್ತಾರೆ ಆಗ ನಾವು ನಮ್ಮ ಬಾಲ್ಯದ ಗೆಳತಿಯರನ್ನು ಕಳೆದುಕೊಳ್ಳುತ್ತೇವೆ. ಹೀಗಾಗಿ ನಾವು ಪ್ರತಿವರ್ಷ ದೀಪಾವಳಿ ಹಬ್ಬದ ದಿನ ಈ ರೀತಿಯ ಸಂಪ್ರದಾಯಿಕ ಆಚರಣೆಯನ್ನು ಆಚರಿಸುತ್ತೇವೆ ಎಂದು ತೋನಸಿಹಾಳ ತಾಂಡಾದ ಗೆಳತಿಯರು ಅಭಿಪ್ರಾಯವ್ಯಕ್ತಪಡಿಸುತ್ತಾರೆ.

ಮಧ್ಯಾಹ್ನದವರೆಗೂ ಹೀಗೆ ಹೂಗಳನ್ನು ಬಿಡಿಸುತ್ತಾ ಹಾಡುತ್ತಾ ಊರಿಗೆ ತೆರಳುತ್ತಾರೆ. ಹೀಗೆ ಹೂಗಳೊಂದಿಗೆ ಊರಿಗೆ ಬಂದ ಕನ್ಯೆಯರು ಗುಂಪುಗುಂಪಾಗಿ ಅನೇಕ ಮನೆಗಳಿಗೆ ತೆರಳಿ ಸೇಗಣಿಯನ್ನು ಸಂಗ್ರಹಿಸುವರು. ಈ ಸೇಗಣಿಯಿಂದ ಸಂಪ್ರದಾಯವಾಗಿ ಹಾಡನ್ನು ಹಾಡುತ್ತಾ ಪಾಂಡವರನ್ನು ಮಾಡುವರು. ಹೀಗೆ ಸೇಗಣಿಯಿಂದ ಮಾಡಿದ ಪಾಡವರನ್ನು ಗ್ರಾಮದಲ್ಲಿನ ಎಲ್ಲಾ ಮನೆಗಳಿಗೂ ತೆರಳಿ ಪಾಂಡವರನ್ನು ಕೊಟ್ಟು, ಅದನ್ನು ಪೂಜಿಸಲು ತಾವೂ ಹೀಗಾಗಲೇ ಸಂಗ್ರಹಿಸಿದ ವಿವಿಧ ಬಗೆಯ ಹೂಗಳನ್ನು ನೀಡುವರು. ಈ ರೀತಿಯಾಗಿ ಊರಿನಲ್ಲಿರುವ ಎಲ್ಲಾ ಮನೆಗಳಿಗೂ ಪಾಂಡವರನ್ನು ತಲುಪಿಸುವರು. ಗ್ರಾಮದಲ್ಲಿನ ಜನರು ತಮಗೆ ನೀಡಿದ ಪಾಂಡವರನ್ನು ಸಂಪ್ರದಾಯಬದ್ಧವಾಗಿ ಪೂಜಿಸುವರು.

ಆದರೆ ಇವರ ಬದುಕಿನಲ್ಲಿ ಆಧುನಿಕತೆಯ ಹಣತೆ ಬೆಳಗಿರುವುದರಿಂದ ಇವರ ಜೀವನ ಶೈಲಿ ಬದಲಾಗುತ್ತಿರುವ ಬಗ್ಗೆ ಗ್ರಾಮದ ಹಿರಿಯ ಮಹಿಳೆಯರು ಆತಂಕ ವ್ಯಕ್ತಪಡಿಸುತ್ತಾರೆ. ಅನೇಕರು ಆರ್ಥಿಕ ಆಕರ್ಷಣೆಯ ಉದ್ಯೋಗ ಅರಸಿ ನಗರಗಳ ಕಡೆ ಮುಖಮಾಡಿದ್ದಾರೆ. ಆಧುನಿಕತೆಯ ಕೊಂಡಿಗೆ ಸಿಕ್ಕಿರುವ ಯುವಲಂಬಾಣಿಗರು ತಮ್ಮ ಪರಂಪರಾಗತ ಸಂಸ್ಕೃತಿಯ ಬಗ್ಗೆ ಗಮನಹರಿಸುತ್ತಿಲ್ಲ. ಇವುಗಳ ನಡುವೆಯು ಅಲ್ಲಲ್ಲಿ ಸಾಂಪ್ರದಾಯಿಕ ಹಬ್ಬದ ಸಡಗರ ಕಂಡು ಬರುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.

Advertisement

ವರದಿ: ಮಲ್ಲಿಕಾರ್ಜುನ ಮೆದಿಕೇರಿ,

             ದೋಟಿಹಾಳ. ಕೊಪ್ಪಳ.

Advertisement

Udayavani is now on Telegram. Click here to join our channel and stay updated with the latest news.

Next