ಮುಂಬಯಿ: ಆರ್‌ಜೆಡಿ ವರಿಷ್ಠ,ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರನ್ನು ಮಂಗಳವಾರ ರಾತ್ರಿ ಮುಂಬಯಿಯ ಏಷ್ಯನ್ ಹೃದಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ವಿಶೇಷ ವಿಮಾನದಲ್ಲಿ ಪುತ್ರ ತೇಜ್ ಪ್ರತಾಪ್, ಸೊಸೆ ಐಶ್ವರ್ಯಾ ಮತ್ತು ಪುತ್ರಿ ಮಿಸಾ ಭಾರತಿ ಅವರು ಲಾಲು ಅವರ ಜೊತೆಗಿದ್ದು ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ.
ಲಾಲು ಅವರನ್ನು ಪಾಟ್ನಾದ ವಿಮಾನ ನಿಲ್ದಾಣಕ್ಕೆ ಕರೆತರುವ ವೇಳೆ ಭಾರೀ ಸಂಖ್ಯೆಯ ಅಭಿಮಾನಿಗಳು, ಆರ್‌ಜೆಡಿ ನಾಯಕರು ಹಿಂಬಾಲಿಸಿದ್ದರು ಎಂದು ತಿಳಿದು ಬಂದಿದೆ.
ಮುಂಬಯಿಯಲ್ಲಿ ಚಿಕಿತ್ಸೆ ಮುಗಿದ ಬಳಿಕ ಕಿಡ್ನಿ ಚಿಕಿತ್ಸೆಗಾಗಿ ಲಾಲು ಅವರನ್ನು ಬೆಂಗಳೂರಿಗೆ ಕರೆ ತರಲಾಗುತ್ತಿದ್ದು,ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
ಲಾಲು ಅವರನ್ನು ಪಾಟ್ನಾದ ಇಂದಿರಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್‌ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು.
ಬಹುಕೋಟಿ ವೇವು ಹಗರಣಗಳಲ್ಲಿ ಅಪರಾಧಿಯಾಗಿ ಜೈಲು ಸೇರಿದ್ದ ಲಾಲು ಅವರಿಗೆ ಕಳೆದ ಮೇ 11ರಂದು ರಾಂಚಿ ಹೈಕೋರ್ಟ್ ಆರು ವಾರಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿತ್ತು.
ಲಾಲು ಅವರು ಫಿಸ್ತುಲಾ,ಕಿಡ್ನಿ ಸಮಸ್ಯೆ ಮತ್ತು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.