ಪಟ್ನಾ/ಹೊಸದಿಲ್ಲಿ: ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಕುಟುಂಬದ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ಮುಗಿಬಿದ್ದಿರುವ ನಡುವೆಯೇ ಹೊಸ ಬೆಳವಣಿಗೆಯೊಂದು ನಡೆದಿದೆ. ಹಾಲಿ ವಿದ್ಯಮಾನಗಳಿಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರಕಾರಕ್ಕೆ ಬಹುಮತದ ಕೊರತೆ ಉಂಟಾದರೆ ಬಿಜೆಪಿ ಬಾಹ್ಯ ಬೆಂಬಲ ನೀಡಲಿದೆ. ಈ ಬಗ್ಗೆ ಅಂತಿಮ ನಿರ್ಣಯವನ್ನು ವರಿಷ್ಠರೇ ಕೈಗೊಳ್ಳಲಿದ್ದಾರೆ ಎಂದಿದ್ದಾರೆ ಬಿಹಾರ ಬಿಜೆಪಿ ಘಟಕದ ಅಧ್ಯಕ್ಷ ನಿತ್ಯಾನಂದ ರಾಯ್.
ಈ ನಡುವೆ, ಸಿಬಿಐ ದಾಳಿ ಬಗ್ಗೆ ಬಿಹಾರ ಸಿಎಂ ಪ್ರತಿಕ್ರಿಯೆ ನೀಡಿಲ್ಲ ಎಂಬ ಆರೋಪದ ಮಧ್ಯೆಯೇ ರವಿವಾರ ತಡರಾತ್ರಿ ನಿತೀಶ್ ಅವರು ಲಾಲು ಯಾದವ್ ಜತೆಗೆ ಮಾತುಕತೆ ನಡೆಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ವಿವರ ನೀಡಲು ಜೆಡಿಯು ನಿರಾಕರಿಸಿದೆ.
ರಾಜೀನಾಮೆ ಕೊಡುವುದಿಲ್ಲ: ಇದಕ್ಕೂ ಮುನ್ನ ನಡೆದಿದ್ದ ಆರ್‌ಜೆಡಿ ಶಾಸಕಾಂಗ ಪಕ್ಷದ ಸಭೆಯಲ್ಲಿ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಡಿಸಿಎಂ ತೇಜ್‌ಪ್ರತಾಪ್ ಯಾದವ್ ರಾಜೀನಾಮೆ ನೀಡ ಬೇಕಾಗಿಲ್ಲ ಎಂದಿದ್ದಾರೆ ಆರ್‌ಜೆಡಿ ನಾಯಕ ಲಾಲು. ಭ್ರಷ್ಟಾಚಾರ ಆರೋಪಗಳ ಹಿನ್ನೆಲೆ ಯಲ್ಲಿ ಪುತ್ರಿ, ಸಂಸದೆ ಮಿಸಾ ಭಾರತಿ, ಪತಿ ನಿವಾಸ, ಕಚೇರಿಗಳಿಗೂ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಲಾಲು ಯಾದವ್ ಸೋಮವಾರ ಪಟ್ನಾದಲ್ಲಿ ಪಕ್ಷದ ಶಾಸಕಾಂಗ ಸಭೆ ಕರೆದಿದ್ದರು. ಇದೇ ವೇಳೆ ಜೆಡಿಯು ಕೂಡ ಪ್ರತಿಕ್ರಿಯೆ ನೀಡಿ ಮೈತ್ರಿಕೂಟವನ್ನು ಒಡೆಯುವ ಬಿಜೆಪಿಯ ಪ್ರಯತ್ನ ಯಶಸ್ವಿಯಾಗದು ಎಂದು ಹೇಳಿದೆ. ಈ ನಡುವೆ ಜಾರಿ ನಿರ್ದೇಶನಾಲಯ ಆರ್‌ಜೆಡಿ ಸಂಸದೆ ಮಿಸಾ ಭಾರತಿಯವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ಮೌನ ಮುರಿಯಲಿದ್ದಾರೆ ನಿತೀಶ್
ಗಮನಾರ್ಹ ಅಂಶವೆಂದರೆ ಲಾಲು ಕುಟುಂಬ ಸದಸ್ಯರ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ನಡೆಸಿದ ದಾಳಿಯ ಬಗ್ಗೆ ಸಿಎಂ ನಿತೀಶ್ ಮಂಗಳವಾರ ಮೌನ ಮುರಿಯಲಿದ್ದಾರೆ. ಜೆಡಿಯು ಪದಾಧಿಕಾರಿಗಳ, ಸಂಸದರ, ಶಾಸಕರ ಸಭೆ ಪಟ್ನಾದಲ್ಲಿ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಪಕ್ಷಕ್ಕೆ ಸಿದ್ಧಾಂತವೇ ಮುಖ್ಯ ಹೊರತು ಅಧಿಕಾರ ಅಲ್ಲವೇ ಅಲ್ಲ ಎಂಬ ಸಂದೇಶ ರವಾನಿಸಲಿದ್ದಾರೆ ಎಂದು ಹೇಳಲಾಗಿದೆ.