“ಶ್ರೀ ಲಲಿತಾ ಕಲಾನಿಕೇತನ’ ನೃತ್ಯಸಂಸ್ಥೆಯ ನಾಟ್ಯಗುರು, ವಿದುಷಿ ರೇಖಾ ಜಗದೀಶ್ ದಿನ ದಿನವೂ ಹೊಸ ಪರಿಕಲ್ಪನೆಗಳ ಚಟುವಟಿಕೆಗಳಲ್ಲಿ ತೊಡಗಿಕೊಂಡು, ದೇಶ-ವಿದೇಶಗಳ ಶಿಷ್ಯಸಮೂಹದಿಂದ ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತಲೇ ಇರುವ ಕ್ರಿಯಾಶೀಲ ವ್ಯಕ್ತಿ. ಜೊತೆಗೆ, ರಂಗಪ್ರವೇಶ ಮತ್ತು ವಿಶೇಷ ಕಾರ್ಯಕ್ರಮಗಳನ್ನು ರೂಪಿಸುತ್ತ, ಪ್ರತಿವರ್ಷ ಅರ್ಥಪೂರ್ಣ ವಾರ್ಷಿಕೋತ್ಸವ ನಡೆಸುವುದು ಇವರ ವಿಶೇಷ.
ಪ್ರತಿ ವರ್ಷ ಕನಿಷ್ಠ ಇನ್ನೂರು ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಾ, ವಾರ್ಷಿಕೋತ್ಸವಕ್ಕೆ ನವ ಸಂಯೋಜನೆಯ ನೃತ್ಯವಿನ್ಯಾಸಗಳನ್ನು ಅರ್ಪಿಸುವುದು ಕಲಾನಿಕೇತನದ ಹೆಗ್ಗಳಿಕೆ. ಇತ್ತೀಚಿಗೆ, ಎ.ಡಿ.ಎ. ರಂಗಮಂದಿರದಲ್ಲಿ ಸಂಸ್ಥೆಯು ತನ್ನ 19ನೇ ವಾರ್ಷಿಕೋತ್ಸವ ಪ್ರಯುಕ್ತ ವೈವಿಧ್ಯಪೂರ್ಣ ನೃತ್ಯ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಭರತನಾಟ್ಯದ ವೇಷಭೂಷಣ ತೊಟ್ಟ ಪುಟಾಣಿಗಳು ವೇದಿಕೆಯ ತುಂಬಾ ನರ್ತಿಸುತ್ತಾ, ನಂದನವನದ ಸುಂದರ ಹೂವುಗಳಂತೆ ಕಂಗೊಳಿಸುತ್ತಿದ್ದರು.
ಮೊದಲಿಗೆ, “ಶಿವತಾಂಡವ ಸ್ತುತಿ’ಯಲ್ಲಿ ತೋರಿದ ಯೋಗಾಸನದ ವಿಶಿಷ್ಟ ಭಂಗಿಗಳು, ಮಂಡಿ ಅಡವು, ಆಕಾಶಚಾರಿ-ಭ್ರಮರಿಗಳು ಆಕರ್ಷಕವಾಗಿದ್ದವು. “ಪೂರ್ಣಚಂದಿರ ಬಂದ ಧರೆಗೆ ಮಗುವಾಗಿ’ ಎಂಬ ಹಾಡಿನಲ್ಲಿ ಪುಟ್ಟ ಮಣಿಕಂಠ, ಅಯ್ಯಪ್ಪನ ಕುರಿತ ನೃತ್ಯದ ಲಹರಿ, ಕೋಲಾಟದ ಮುದವಾದ ಲಯ ಮನರಂಜಕವಾಗಿತ್ತು. ವಿಘ್ನರಾಜನ ಕುರಿತ ಪ್ರಾರ್ಥನೆಯಲ್ಲಿ ವಿನಾಯಕನ ವಿವಿಧ ರೂಪಗಳನ್ನು ಕಲಾವಿದರು ತಮ್ಮ ಸುಂದರ ಆಂಗಿಕಾಭಿನಯದಲ್ಲಿ ಪಡಿಮೂಡಿಸಿದರು.
“ಶ್ರೀಕೃಷ್ಣ ಕಮಲನಾಥೋ’ -ಘನವಾದ ವರ್ಣದ ಸಂಕೀರ್ಣ ಜತಿಗಳನ್ನು ಅಷ್ಟೇ ಸೊಗಸಾದ ಅಭಿನಯದಲ್ಲಿ ಅಭಿವ್ಯಕ್ತಿಸಿ ಮೆಚ್ಚುಗೆ ಗಳಿಸಿದರು. ವಯಸ್ಸನ್ನು ಮೀರಿದ ಅವರ ನೃತ್ಯಪ್ರತಿಭೆ, ಅಭಿನಯ ಚಕಿತಗೊಳಿಸಿತು. “ನಮಸ್ತೇಷು ಮಹಾಮಾತೆ’ -ಅಷ್ಟಲಕ್ಷ್ಮಿಯರ ಮಹಿಮೆ ಎತ್ತಿ ಹಿಡಿವ ಮನೋಜ್ಞ ಶ್ಲೋಕಗಳನ್ನು, ಕಲಾವಿದೆಯರು ಬಹು ಆತ್ಮವಿಶ್ವಾಸದಿಂದ, ಲವಲವಿಕೆಯಿಂದ ಸಾಕ್ಷಾತ್ಕರಿಸಿದರು. ಭಾಗ್ಯದ ಲಕ್ಷ್ಮಿಯನ್ನು ಬರಮಾಡಿಕೊಂಡ ನರ್ತನ ವೈಭವ ಆಹ್ಲಾದಕಾರಿಯಾಗಿತ್ತು.
* ವೈ.ಕೆ. ಸಂಧ್ಯಾಶರ್ಮ