ನವದೆಹಲಿ: ಐಪಿಎಲ್ ಸಂಸ್ಥಾಪಕ, ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಮಾಜಿ ಅಧ್ಯಕ್ಷ ಲಲಿತ್ ಮೋದಿ ಶನಿವಾರ ಕ್ರಿಕೆಟ್
ಆಡಳಿತಕ್ಕೆ ವಿದಾಯ ಹೇಳಿದ್ದಾರೆ.
ಅವರು ರಾಜಸ್ಥಾನದ ನಾಗ್ಪುರ ಜಿಲ್ಲಾ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ವಿಷಯ ಪ್ರಕಟಿಸಿದ್ದಾರೆ. ಲಲಿತ್ ಮೋದಿ ಐಪಿಎಲ್‌ನಲ್ಲಿ ಹಣದ ಅವ್ಯವಹಾರ ಹಾಗೂ ಅಧಿಕಾರ ದುರುಪಯೋಗ ನಡೆಸಿದ ಆರೋಪ ಹೊಂದಿದ್ದಾರೆ. ಭಾರತದಲ್ಲಿ ಬಂಧನದ ಭೀತಿಯಿಂದ ಲಂಡನ್‌ನಲ್ಲಿ ನೆಲೆಸಿದ್ದರು.
ಕೆಲವು ದಿನಗಳ ಹಿಂದಷ್ಟೇ ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಚುನಾವಣೆ ಸ್ಪರ್ಧಿಸಲು ಪ್ರಯತ್ನವನ್ನೂ ನಡೆಸಿದ್ದರು. ಬಿಸಿಸಿಐ ಇದಕ್ಕೆ ಅನುಮತಿ ಕೊಟ್ಟಿರಲಿಲ್ಲ. ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಅಲ್ಲಿ ಲಲಿತ್ ಸೋತಿದ್ದ ಬಳಿಕ ಇವರ ಮಗ ರುಚಿರ್‌ರನ್ನು ಚುನಾವಣೆಗೆ ನಿಲ್ಲಿಸಲಾಯಿತು. ಅಲ್ಲೂ ಮೋದಿಗೆ ಹಿನ್ನಡೆಯಾಗಿತ್ತು. ಅಲ್ಲಿಗೆ ಕ್ರಿಕೆಟ್ ಆಡಳಿತ ಪ್ರವೇಶಿಸುವ ಅವರ ಬಾಗಿಲು ಸಂಪೂರ್ಣ ಬಂದ್ ಆದಂತಾಗಿತ್ತು. ಈ ಬೆನ್ನಲ್ಲೇ ಲಲಿತ್ ಮೋದಿ ತಮ್ಮ ತೀರ್ಮಾನವನ್ನು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿಗೆ ಪತ್ರ ಮೂಲಕ ತಿಳಿಸಿದ್ದಾರೆ. ಭಾರತೀಯ ಕ್ರಿಕೆಟ್ ಜತೆಗೆ 15 ವರ್ಷ ಕೆಲಸ ನಿರ್ವಹಿಸಿದೆ. ಇದರಲ್ಲಿ ಖುಷಿ ಇದೆ. ನನ್ನ ಕೆಲಸದ ಪ್ರತಿ ಕ್ಷಣವನ್ನು ಆನಂದಿಸಿದ್ದೇನೆ.
ಐಪಿಎಲ್ ಹುಟ್ಟು ಹಾಕಿರುವುದರಿಂದ ದೇಶದ ಕ್ರಿಕೆಟ್‌ನಲ್ಲಿ ಆಗಿರುವ ಬದಲಾವಣೆಗಳಿಂದ ಕಣ್ಣಾರೆ ಕಂಡು ಖುಷಿ
ಅನುಭವಿಸಿದ್ದೇನೆ. ಇದರಲ್ಲಿ ನನ್ನದೂ ಸಣ್ಣ ಪಾಲಿದೆ ಎನ್ನುವುದು ನನ್ನ ಬಲವಾದ ನಂಬಿಕೆ ಎಂದು ತಿಳಿಸಿದ್ದಾರೆ.