Advertisement
ಪಾಲಿಕೆ ಚುನಾವಣೆ ನಡೆಯುವಾಗ ಪ್ರತೀ 10 ವರ್ಷಕ್ಕೊಮ್ಮೆ ವಾರ್ಡ್ ಪುನರ್ ವಿಂಗಡನೆ ಮಾಡಬೇಕಾಗುತ್ತದೆ. 2019ರಲ್ಲಿ ವಾರ್ಡ್ ವಿಂಗಡನೆ ಆಗಿರುವ ಕಾರಣದಿಂದ ಈ ಬಾರಿ ವಾರ್ಡ್ ವಿಂಗಡನೆ, ಸೇರ್ಪಡೆ ವಿಷಯ ಬರುವುದಿಲ್ಲ. ಆದರೆ ಪ್ರತೀ 5 ವರ್ಷಕ್ಕೊಮ್ಮೆ ಪಾಲಿಕೆ ವಾರ್ಡ್ ಮೀಸಲಾತಿ ಬದಲಾಗಬೇಕಾಗುತ್ತದೆ. ಈ ಕಾರಣದಿಂದ ಪಾಲಿಕೆ ಚುನಾವಣೆಗೆ ಮುನ್ನ ವಾರ್ಡ್ ಮೀಸಲಾತಿ ವಿಚಾರ ಹಾಲಿ ಸದಸ್ಯರನ್ನು ಹಾಗೂ ಟಿಕೆಟ್ ನಿರೀಕ್ಷಿತರ ಕುತೂಹಲಕ್ಕೆ ಕಾರಣವಾಗಿದೆ. ಹಾಲಿ ಇರುವ ವಾರ್ಡ್‌ನ ಕಾರ್ಪೋರೆಟರ್‌ಗಳ ಪೈಕಿ ಬಹುತೇಕ ಸದಸ್ಯರ ಕ್ಷೇತ್ರದ ಮೀಸಲಾತಿ ಅದಲು-ಬದಲಾಗುವ ಕಾರಣದಿಂದ ಯಾರಿಗೆ ಸ್ಪರ್ಧೆಯ ಅವಕಾಶ ಎಂಬುದೇ ಸದ್ಯದ ಕುತೂಹಲ!
ಪಾಲಿಕೆಯಲ್ಲಿ ಕಳೆದ ಬಾರಿ ಆರಂಭಗೊಂಡ ಶೇ.50 ಮಹಿಳಾ ಮೀಸಲಾತಿ ಹಾಗೇ ಮುಂದುವರಿಯಲಿದೆ ಆದರೆ, ಈಗ ಇರುವ ಮಹಿಳಾ ಮೀಸಲು ವಾರ್ಡ್ ಬದಲಾಗಬಹುದು! 2013ರಲ್ಲೇ ಶೇ. 50 ಮಹಿಳಾ ಮೀಸಲಾತಿ ಜಾರಿಯಾಗಿದ್ದರೂ ಕಾನೂನು ತೊಡಕುಗಳ ಹಿನ್ನೆಲೆಯಲ್ಲಿ ಇದು ಅನುಷ್ಠಾನವಾಗದೆ ಶೇ. 33 ಮೀಸಲಾತಿಯಲ್ಲಿ ಚುನಾವಣೆ ನಡೆದಿತ್ತು. 22 ಮಹಿಳೆಯರು ಗೆದ್ದಿದ್ದರು.
Related Articles
2019ರಲ್ಲಿ ವಾರ್ಡ್‌ವಾರು ಮೀಸಲಾತಿ ಆಗಿನ ಕಾರ್ಪೋರೆಟರ್‌ಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಆಗ 60 ಸದಸ್ಯರ ಪೈಕಿ ಅರ್ಧದಷ್ಟು ಮಂದಿಗೆ ಮಾತ್ರ ಮರಳಿ ತಮ್ಮದೇ ಕ್ಷೇತ್ರ ಸಿಕ್ಕಿತ್ತು, ಉಳಿದೆಡೆ ಹೊಸಬರ ಎಂಟ್ರಿ ಆಗಿತ್ತು. ಇದು ಹಿರಿಯ ಸದಸ್ಯರನ್ನು ಕೆರಳಿಸಿತ್ತು. ಆಕ್ರೋಶ, ಬಂಡಾಯದ ಸಾಧ್ಯತೆಗಳನ್ನು ಮೊದಲೇ ಊಹಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿ ಇರುವಾಗ ರಾತ್ರಿ ಪ್ರಕಟಿಸಿತ್ತು. ಬಿಜೆಪಿಯಲ್ಲಿಯೂ ಟಿಕೆಟ್ ವಂಚಿತರ ಆಕ್ರೋಶ ಜೋರಾಗಿತ್ತು.
Advertisement
ಹಿಂದಿನ ಫಲಿತಾಂಶಗಳು2019: ಬಿಜೆಪಿ-44, ಕಾಂಗ್ರೆಸ್-14, ಎಸ್‌ಡಿಪಿಐ-2 ಸ್ಥಾನಗಳನ್ನು ಪಡೆದಿತ್ತು.
2013: ಕಾಂಗ್ರೆಸ್-35, ಬಿಜೆಪಿ-20, ಜೆಡಿಎಸ್-2, ಸಿಪಿಎಂ, ಎಸ್‌ಡಿಪಿಐ, ಪಕ್ಷೇತರ- ತಲಾ 1 ಮೀಸಲಾತಿ ಬದಲಾವಣೆಗೆ ಹಲವು ಅಡೆತಡೆ
ಕಾನೂನಿನ ಪ್ರಕಾರ ಮೀಸಲಾತಿಗೆ ನಿಯಮಾವಳಿಯನ್ನು ಆರಂಭದಲ್ಲಿ ಪ್ರಕಟಿಸಬೇಕು. ಅದರ ಆಧಾರದಲ್ಲಿ ಮೀಸಲಾತಿಯನ್ನು ರೂಪಿಸಬೇಕು. ಆದರೆ, ಇಲ್ಲಿಯವರೆಗೆ ಈ ಕ್ರಮ ಪಾಲನೆ ಆಗಿದ್ದು ಕಡಿಮೆ. ಹೀಗಾಗಿಯೇ ಮಂಗಳೂರಿನ ಕೆಲವು ವಾರ್ಡ್‌ಗಳ ನಿಗದಿತ ಮೀಸಲಾತಿ ಇನ್ನೂ ಬದಲಾವಣೆಯೇ ಆಗಿಲ್ಲ. ‘ಸಾಮಾನ್ಯ’ ಎಂಬ ಮೀಸಲಾತಿ ಇದ್ದ ಕೆಲವು ವಾರ್ಡ್‌ಗಳಲ್ಲಿ ಕೆಲವು ವರ್ಷದಿಂದ ಬದಲಾವಣೆಯೇ ಆಗಿಲ್ಲ! 2013 ಮಾ. 7ರಂದು ಮಂಗಳೂರು ಪಾಲಿಕೆ ಚುನಾವಣೆ ನಡೆದಿತ್ತು. 2019ರಲ್ಲಿ ಮಾ. 7ಕ್ಕೆ ಮತ್ತೆ ಚುನಾವಣೆ ನಡೆಯಬೇಕಿತ್ತು. ಆದರೆ ವಾರ್ಡ್ ಮೀಸಲಾತಿ ಪ್ರಶ್ನಿಸಿ ಕೆಲವು ಮಂದಿ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಚುನಾವಣೆ ನಡೆದಿರಲಿಲ್ಲ. ಎರಡೂ ಪಕ್ಷದಲ್ಲಿ ಮೀಸಲಾತಿ ವಿಚಾರ ವಿವಿಧ ಪ್ರಕಾರವಾಗಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿ ಬಳಿಕ ಇದು ನ್ಯಾಯಾಲಯದ ಮೆಟ್ಟಿಲೇರಿತ್ತು. ಮೀಸಲಾತಿ ವಿವಾದವನ್ನು ನ್ಯಾಯಾಲಯ ಬಗೆಹರಿಸಿ ಚುನಾವಣೆಯನ್ನು ಅ. 31ರೊಳಗೆ ಪೂರ್ಣಗೊಳಿಸಿ, ನ. 15ರೊಳಗೆ ಹೊಸ ಆಡಳಿತ ವ್ಯವಸ್ಥೆ ಸ್ಥಾಪನೆಯಾಗಬೇಕು ಎಂದು ರಾಜ್ಯ ಚುನಾವಣೆ ಆಯೋಗಕ್ಕೆ ಹೈಕೋರ್ಟ್ ಆ. 27ರಂದು ನಿರ್ದೇಶನ ನೀಡಿತ್ತು. ಇದೇ ಸಂದರ್ಭ ಮಂಗಳೂರು ಪಾಲಿಕೆಯ ಮೀಸಲಾತಿಯ ಕುರಿತಂತೆ ಹೈಕೋರ್ಟ್‌ನ ದ್ವಿಸದಸ್ಯ ಪೀಠದಲ್ಲಿ ಸಲ್ಲಿಕೆಯಾಗಿದ್ದ ಪುನರ್ ಪರಿಶೀಲನ ಅರ್ಜಿ ಕೂಡ ಅ. 11ರಂದು ವಜಾಗೊಂಡಿತ್ತು. ಕೊನೆಗೆ, ನ. 12ರಂದು ಮತದಾನ ನಡೆದಿತ್ತು. ಫೆಬ್ರವರಿಯಲ್ಲಿ ಪಾಲಿಕೆ ಚುನಾವಣೆ ಅನುಮಾನ
2019ರ ನ. 12ರಂದು ಮಂಗಳೂರು ಪಾಲಿಕೆ ಚುನಾವಣೆ ನಡೆದಿತ್ತು. ಆದರೆ ಮೇಯರ್ ಮೀಸಲಾತಿ ವಿಳಂಬದಿಂದ ಫೆ.27ಕ್ಕೆ ಹೊಸ ಮೇಯರ್ ಅಧಿಕಾರ ಸ್ವೀಕರಿಸಿದರು. ಹೀಗಾಗಿ ಅಂದಿನಿಂದ ಐದು ವರ್ಷ ಆಡಳಿತ ಅವಧಿ ನಿಗದಿಯಾಗಿತ್ತು. ಚುನಾವಣೆ ನಡೆಯುವ ಕೆಲವು ತಿಂಗಳ ಮುನ್ನವೇ ಮತದಾರರ ಪಟ್ಟಿ ಆಗಬೇಕಿದೆ. ಬೂತ್ ಬದಲಾವಣೆ ಇನ್ನಿತರ ಪ್ರಕ್ರಿಯೆ ನಡೆಸಲಾಗುತ್ತದೆ. ಆದರೆ, ಈ ಯಾವುದೇ ಪ್ರಕ್ರಿಯೆ ಇಲ್ಲಿಯವರೆಗೆ ನಡೆದಿಲ್ಲವಾದ್ದರಿಂದ ಪಾಲಿಕೆ ಚುನಾವಣೆ ನಿಗದಿತ ಸಮಯದಲ್ಲಿ ನಡೆಯುತ್ತದೆಯೇ? ಎಂಬ ಪ್ರಶ್ನೆಯೂ ಉಂಟು. ಮೈಸೂರು, ತುಮಕೂರು, ಶಿವಮೊಗ್ಗ ಪಾಲಿಕೆ ಆಡಳಿತ ಅವಧಿ ಪೂರ್ಣವಾಗಿ ವರ್ಷ 1 ಕಳೆದಿದೆ. ಬಿಬಿಎಂಪಿ ಆಡಳಿತ ಅವಧಿ ಪೂರ್ಣವಾಗಿ 3 ವರ್ಷವೇ ಸಮೀಪಿಸಿದೆ. ಇಷ್ಟೂ ಸ್ಥಳಗಳಲ್ಲಿ ಇನ್ನೂ ಚುನಾವಣೆ ನಡೆಸದ ಕಾರಣದಿಂದ ಫೆಬ್ರವರಿಯಲ್ಲಿ ಪೂರ್ಣಗೊಳ್ಳಲಿರುವ ಮಂಗಳೂರು ಹಾಗೂ ದಾವಣಗೆರೆಯಲ್ಲಿ ಚುನಾವಣೆ ನಡೆಸುವ ಸಾಧ್ಯತೆ ಇದೆಯೇ? ಎಂಬುದು ಸದ್ಯದ ಕುತೂಹಲ. -ದಿನೇಶ್ ಇರಾ