Advertisement

ಪಾದೂರು ತೈಲಾಗಾರ ವಿಸ್ತರಣೆಗೆ 6,000 ಕೋ.ರೂ.: ಶಾಸಕ ಲಾಲಾಜಿ ಆರ್‌. ಮೆಂಡನ್‌

01:55 AM Jul 04, 2022 | Team Udayavani |

ಮಣಿಪಾಲ: ಪಾದೂರು ಕಚ್ಚಾ ತೈಲ ಸಂಸ್ಕರಣ ಘಟಕ (ಐಎಸ್‌ಪಿಆರ್‌ಎಲ್‌)ದ ದ್ವಿತೀಯ ಹಂತದ ವಿಸ್ತರಣೆಯು 6 ಸಾವಿರ ಕೋ.ರೂ. ವೆಚ್ಚದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿಯವರು ಹೇಳಿದ್ದಾರೆ. ಇದರಿಂದ ಹಲವಾರು ಮಂದಿಗೆ ಉದ್ಯೋಗಾವಕಾಶ ಸಿಗಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ ಎಂದು ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಹೇಳಿದರು.

Advertisement

ಉದಯವಾಣಿಯ ಮಣಿಪಾಲ ಕಚೇರಿಯಲ್ಲಿ ಶನಿವಾರ ನಡೆದ “ಶಾಸಕರ ಜತೆ ನಮ್ಮ ಮಾತುಕತೆ’ ಸರಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಗತಿಯಲ್ಲಿ ಹೆಜಮಾಡಿ ಮೀನುಗಾರಿಕೆ ಬಂದರು ಯೋಜನೆ
ಮೀನುಗಾರರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೇಂದ್ರ-ರಾಜ್ಯ ಸಹಯೋಗದಲ್ಲಿ 181 ಕೋ.ರೂ. ಮೊತ್ತದ ಬಂದರು ಯೋಜನೆಗೆ ಅನುಮೋದನೆ ದೊರೆತಿದ್ದು, ಕಾಮಗಾರಿ ಪ್ರಗತಿಯ ಹಂತದಲ್ಲಿದೆ. ಮಲ್ಪೆ, ಮಂಗಳೂರು ಬಂದರಿಗಿಂತ ಇದು ಸುರಕ್ಷಿತವಾಗಿರಲಿದೆ ಎಂದರು.

ಕಡಲ್ಕೊರೆತ ನಿವಾರಣೆಗೆ ಶಾಶ್ವತ ಪರಿಹಾರ
ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಉದ್ಯಾವರ ಪಡುಕೆರೆ, ಮಟ್ಟು ಭಾಗಗಳಲ್ಲಿ ಗ್ರೇಯನ್ಸ್‌ ಮಾದರಿಯ ಶಾಶ್ವತ ತಡೆಗೋಡೆ ನಿರ್ಮಾಣ, ಬಡಾ ಎರ್ಮಾಳು ಮತ್ತು ತೆಂಕ ಎರ್ಮಾಳಿನ 3.34 ಕಿ.ಮೀ. ಉದ್ದದ ಕರಾವಳಿಯಲ್ಲಿ 43 ಕೋ.ರೂ. ಮೊತ್ತದ ಶಾಶ್ವತ ತಡೆಗೋಡೆ ನಿರ್ಮಿಸಲಾಗಿದೆ. ಕೈಪುಂಜಾಲು, ಮೂಳೂರು, ಪಡುಬಿದ್ರಿ ಹಾಗೂ ಹೆಜಮಾಡಿ ತೀರ ಪ್ರದೇಶಗಳಲ್ಲಿಯೂ ಸಮುದ್ರಕೊರೆತ ತಡೆಗಟ್ಟಲು ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕಡಲ್ಕೊರೆತ ಇರುವಲ್ಲಿ ಡಕ್‌ಫ‌ೂಟ್‌ ಮಾದರಿ ಶಾಶ್ವತ ತಡೆಗೋಡೆ ಸೇರಿದಂತೆ ವಿವಿಧ ಮಾದರಿಯ ಶಾಶ್ವತ ಸಮುದ್ರ ಕೊರೆತ ಪ್ರತಿಬಂಧಕ ತಡೆಗೋಡೆ ನಿರ್ಮಿಸಲು ಆದ್ಯತೆ ನೀಡಲಾಗುವುದು ಎಂದರು.

ವಿಜ್ಞಾನ ಸಂಶೋಧನ ಕೇಂದ್ರ ಕಟ್ಟಡ
ಬೆಳಪುವಿನಲ್ಲಿ ರಾಜ್ಯ ಸರಕಾರ ಹಾಗೂ ಮಂಗಳೂರು ವಿ.ವಿ. ಸಹಯೋಗದೊಂದಿಗೆ ಪಶ್ಚಿಮ ಘಟ್ಟಗಳ ಜೀವ ಸಂಕುಲದ ಅಧ್ಯಯನ, ಕರಾವಳಿ ಹಾಗೂ ಮಲೆನಾಡು ಪರಿಸರಕ್ಕೆ ಪಶ್ಚಿಮ ಘಟ್ಟಗಳ ಇರುವಿಕೆಯ ಮಹತ್ವದ ಅಧ್ಯಯನ ಹಾಗೂ ವಿಜ್ಞಾನ ವಿದ್ಯಾರ್ಥಿಗಳಿಗೆ ಉನ್ನತ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅತ್ಯಾಧುನಿಕ ವಿಜ್ಞಾನ ಸಂಶೋಧನ ಕೇಂದ್ರದ ಕಟ್ಟಡ ಕಾಮಗಾರಿ ಚಾಲನೆಯಲ್ಲಿದೆ ಎಂದು ಲಾಲಾಜಿ ಹೇಳಿದರು. “ಉದಯವಾಣಿ’ ವತಿಯಿಂದ ಶಾಸಕರನ್ನು ಗೌರವಿಸಲಾಯಿತು.

Advertisement

ಉದಯವಾಣಿ ತಂದು ಓದುತ್ತಿದ್ದೆವು
ಚಿಕ್ಕ ಪ್ರಾಯದಿಂದಲೂ “ಉದಯವಾಣಿ’ಯನ್ನು ಓದುತ್ತಿದ್ದೆ. ಎಷ್ಟೋ ಬಾರಿ ನಾನೇ ಪೇಟೆಗೆ ಹೋಗಿ ಪತ್ರಿಕೆಯನ್ನು ತರುತ್ತಿದ್ದೆ. ವಿಶಿಷ್ಟ ವಿನ್ಯಾಸ, ಸುದ್ದಿಗಳಿಂದ ಉದಯವಾಣಿ ಈಗಲೂ ಓದುಗರನ್ನು ಆಕರ್ಷಿಸುತ್ತಿದೆ. ನನ್ನ ತಂದೆಯವರಿಗೆ ಆಧುನಿಕ ಮಣಿಪಾಲದ ಶಿಲ್ಪಿ ಡಾ| ಟಿಎಂಎ ಪೈಯವರೊಂದಿಗೆ ಆತ್ಮೀಯ ಒಡನಾಟವಿತ್ತು. ನಮ್ಮ ಮನೆಯಲ್ಲಿ ಅವರ ಭಾವಚಿತ್ರವಿತ್ತು ಎಂದು ಲಾಲಾಜಿ ಮೆಂಡನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next